ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಟೆಸ್ಟ್‌ಗಳಿಗೆ ಆಯ್ಕೆಯಾಗುವಲ್ಲಿ ವಿಫಲವಾಗಿದ್ದ ಮುಂಬೈ ಬ್ಯಾಟರ್ ಸರ್ಫರಾಜ್ ಖಾನ್ ಮಂಗಳವಾರ ರಣಜಿ ಟ್ರೋಫಿಯಲ್ಲಿ ದೆಹಲಿ ವಿರುದ್ಧ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.
ಸರ್ಫರಾಜ್ ಅವರು ಶತಕವನ್ನು ಸಂಭ್ರಮಿಸುತ್ತಿರುವ ವಿಡಿಯೊವನ್ನು ಬಿಸಿಸಿಐ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಸಂಭ್ರಮದ ಜೊತೆಗೇ ಅವರು ಸಿಟ್ಟು, ಆಕ್ರೋಶವನ್ನು ಹೊರಹಾಕುತ್ತಿರುವುದು ವಿಡಿಯೊದಲ್ಲಿದೆ.
ತೊಡೆತಟ್ಟುತ್ತಾ, ತೋರು ಬೆರಳನ್ನು ಪ್ರೇಕ್ಷಕರ ಗ್ಯಾಲರಿಯತ್ತ ಬೊಟ್ಟು ಮಾಡಿ ಎಚ್ಚರಿಕೆ ನೀಡುತ್ತಿರುವಂತೆ ಅವರು ವರ್ತಿಸಿದ್ದಾರೆ.
ಸರ್ಫರಾಜ್ ಖಾನ್ ಶತಕ ಸಿಡಿಸುತ್ತಲೇ ಮುಂಬೈನ ಕೋಚ್ ಅಮೋಲ್ ಮಜುಮ್ದಾರ್ ಅವರು ಟೋಪಿ ತೆಗೆದು ಮೆಚ್ಚುಗೆ ಸೂಚಿಸಿದರು.
ಸರ್ಫರಾಜ್ ರಣಜಿ ಟ್ರೋಫಿಯಲ್ಲಿ ತಮ್ಮ ಕೊನೆಯ 25 ಇನ್ನಿಂಗ್ಸ್‌ಗಳಲ್ಲಿ 10 ಶತಕ ಮತ್ತು ಐದು ಅರ್ಧಶತಕಗಳನ್ನು ಬಾರಿಸಿದ್ದಾರೆ.
ಪ್ರಥಮ ದರ್ಜೆಯ ಕ್ರಿಕೆಟ್‌ನಲ್ಲಿ ಸರ್ ಡೊನಾಲ್ಡ್ ಬ್ರಾಡ್ಮನ್ ನಂತರ ಉತ್ತಮ ಸರಾಸರಿ ಹೊಂದಿರುವ ಆಟಗಾರ ಎನಿಸಿಕೊಂಡಿದ್ದರೂ, ಆಸ್ಟ್ರೇಲಿಯಾ ವಿರುದ್ಧದ ಎರಡು ಟೆಸ್ಟ್‌ಗಳಿಗೆ ಸ್ಥಾನ ಪಡೆಯಲು ಸರ್ಫರಾಜ್ ವಿಫಲರಾಗಿದ್ದರು. ತಂಡದಲ್ಲಿ ಸ್ಥಾನ ಸಿಗದಿದ್ದಕ್ಕೆ ನಾನು ಕಣ್ಣೀರಿಟ್ಟಿದ್ದೇನೆ ಎಂದು ಅವರು ಇತ್ತೀಚೆಗೆ ಹೇಳಿದ್ದರು.
25 ವರ್ಷ ವಯಸ್ಸಿನ ಸರ್ಫರಾಜ್ ಈ ಋತುವಿನಲ್ಲಿ ರಣಜಿ ಟ್ರೋಫಿಯಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡಿದವರಲ್ಲಿ ಪ್ರಮುಖರು. ಮುಂಬೈ ಪರ ಐದು ಪಂದ್ಯಗಳಲ್ಲಿ ಅವರು 431 ರನ್ ಗಳಿಸಿದ್ದಾರೆ.
ಕಳೆದ ಬೇಸಿಗೆಯಲ್ಲಿ, ಸರ್ಫರಾಜ್ ಆರು ಪಂದ್ಯಗಳಲ್ಲಿ 122.75 ಸರಾಸರಿಯಲ್ಲಿ ನಾಲ್ಕು ಶತಕಗಳನ್ನು ಒಳಗೊಂಡಂತೆ 982 ರನ್ ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.