ಕೋಲ್ಕತ್ತ: ಮೂರು ವರ್ಷಗಳ ಹಿಂದೆ ರಣಜಿ ಟ್ರೋಫಿ ಜಯಿಸುವ ಬಂಗಾಳ ತಂಡದ ಕನಸಿಗೆ ಅಡ್ಡಿಯಾಗಿದ್ದ ಸೌರಾಷ್ಟ್ರದ ಅರ್ಪಿತ್ ವಾಸವಡ, ಮತ್ತೊಮ್ಮೆ ಕಾಡಿದ್ದಾರೆ.
ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಫೈನಲ್‌ನಲ್ಲಿ ಅರ್ಪಿತ್ ಅಜೇಯ ಅರ್ಧಶತಕ (81) ಗಳಿಸಿ, ಸೌರಾಷ್ಟ್ರ ತಂಡಕ್ಕೆ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ತಂದುಕೊಟ್ಟರು.
2020 ರಲ್ಲಿ ರಾಜ್‌ಕೋಟ್‌ನಲ್ಲಿ ನಡೆದಿದ್ದ ಫೈನಲ್‌ನಲ್ಲಿ ಅರ್ಪಿತ್ 106 ರನ್ ಗಳಿಸಿ ತಂಡಕ್ಕೆ ಇನಿಂಗ್ಸ್ ಮುನ್ನಡೆ ತಂದುಕೊಟ್ಟಿದ್ದರು. ಅಂದು ಇನಿಂಗ್ಸ್ ಮುನ್ನಡೆ ಆಧಾರದಲ್ಲಿ ಸೌರಾಷ್ಟ್ರ ಚಾಂಪಿಯನ್ ಆಗಿತ್ತು. ಈ ಬಾರಿಯೂ ಅವರು ಶತಕದತ್ತ ಹೆಜ್ಜೆಯಿಟ್ಟಿದ್ದಾರೆ.
ಎರಡನೇ ದಿನವಾದ ಶುಕ್ರವಾರದ ಆಟದ ಅಂತ್ಯಕ್ಕೆ ಸೌರಾಷ್ಟ್ರ 87 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 317 ರನ್ ಗಳಿಸಿದ್ದು, 143 ರನ್‌ಗಳ ಮುನ್ನಡೆ ಸಾಧಿಸಿದೆ. ಶೆಲ್ಡನ್ ಜಾಕ್ಸನ್ (59) ಮತ್ತು ಚಿರಾಗ್ ಜಾನಿ (ಬ್ಯಾಟಿಂಗ್ 57) ಅವರೂ ತಂಡದ ನೆರವಿಗೆ ನಿಂತರು. ಅರ್ಪಿತ್ ಮತ್ತು ಚಿರಾಗ್ ಜೋಡಿ ಮುರಿಯದ ಆರನೇ ವಿಕೆಟ್‌ಗೆ 113 ರನ್ ಸೇರಿಸಿದೆ.
ಸೆಮಿಫೈನಲ್‌ನಲ್ಲಿ ಕರ್ನಾಟಕದ ವಿರುದ್ಧ ದ್ವಿಶತಕ ಗಳಿಸಿದ್ದ ಅರ್ಪಿತ್, ಅಮೋಘ ಫಾರ್ಮ್‌ಅನ್ನು ಇಲ್ಲೂ ಮುಂದುವರಿಸಿದರು. 155 ಎಸೆತಗಳನ್ನು ಎದುರಿಸಿರುವ ಅವರು 11 ಬೌಂಡರಿ ಹೊಡೆದಿದ್ದಾರೆ. ಚಿರಾಗ್ 10 ಬೌಂಡರಿ ಹೊಡೆದರು. ದಿನದಾಟದ ಕೊನೆಯ ಅವಧಿಯಲ್ಲಿ ಇವರಿಬ್ಬರು ವೇಗವಾಗಿ ರನ್ ಕಲೆಹಾಕಿದರು.
ಸೌರಾಷ್ಟ್ರ ತಂಡ 2 ವಿಕೆಟ್‌ಗಳಿಗೆ 81 ರನ್‌ಗಳಿಂದ ಇನಿಂಗ್ಸ್ ಮುಂದುವರಿಸಿತ್ತು. ಹರ್ವಿಕ್ ಮತ್ತು ‘ರಾತ್ರಿ ಕಾವಲುಗಾರ’ ಚೇತನ್ ಸಕಾರಿಯಾ (8) ಬೆಳಿಗ್ಗೆ ಬೇಗನೇ ವಿಕೆಟ್ ಬಿಟ್ಟುಕೊಡಲಿಲ್ಲ. ಶೆಲ್ಡನ್ ಜಾಕ್ಸನ್ ಮತ್ತು ಅರ್ಪಿತ್ ಐದನೇ ವಿಕೆಟ್‌ಗೆ 95 ರನ್ ಸೇರಿಸಿದರು.
ಸಂಕ್ಷಿಪ್ತ ಸ್ಕೋರ್: ಮೊದಲ ಇನಿಂಗ್ಸ್: ಬಂಗಾಳ 54.1 ಓವರ್‌ಗಳಲ್ಲಿ 174. ಸೌರಾಷ್ಟ್ರ 87 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 317 (ಹರ್ವಿಕ್ ದೇಸಾಯಿ 50, ಶೆಲ್ಡನ್ ಜಾಕ್ಸನ್ 59, ಅರ್ಪಿತ್ ವಾಸವಡ ಬ್ಯಾಟಿಂಗ್ 81, ಚಿರಾಗ್ ಜಾನಿ ಬ್ಯಾಟಿಂಗ್ 57, ಮುಕೇಶ್ ಕುಮಾರ್ 83ಕ್ಕೆ 2, ಇಶಾನ್ ಪೊರೆಲ್ 72ಕ್ಕೆ 2)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.