ರಾಜ್‌ಕೋಟ್: ಮಧ್ಯಮವೇಗಿ ಮುಕೇಶ್ ಕುಮಾರ್ ದಾಳಿಯ ಮುಂದೆ ಸೌರಾಷ್ಟ್ರದ ಬಲಿಷ್ಠ ಬ್ಯಾಟಿಂಗ್ ಪಡೆ ಧೂಳೀಪಟವಾಯಿತು.
ಶನಿವಾರ ಇಲ್ಲಿ ಆರಂಭವಾದ ಇರಾನಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ರೆಸ್ಟ್ ಆಫ್ ಇಂಡಿಯಾ ಮೊದಲ ದಿನವೇ ಇನಿಂಗ್ಸ್ ಮುನ್ನಡೆ ಸಾಧಿಸಿತು.ಟಾಸ್ ಗೆದ್ದ ರೆಸ್ಟ್ ಆಫ್ ಇಂಡಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮುಕೇಶ್ ಕುಮಾರ್ (23ಕ್ಕೆ4) ಆರಂಭದಲ್ಲಿಯೇ ಕೊಟ್ಟ ಪೆಟ್ಟಿಗೆ ರಣಜಿ ಚಾಂಪಿಯನ್ ಸೌರಾಷ್ಟ್ರ ತಂಡವು ಊಟಕ್ಕೂ ಮುನ್ನವೇ 24.5 ಓವರ್‌ಗಳಲ್ಲಿ 98 ರನ್ ಗಳಿಸಿ ಆಲೌಟ್ ಆಯಿತು. ಕುಲದೀಪ್ ಸೇನ್ ಹಾಗೂ ಉಮ್ರಾನ್ ಮಲಿಕ್ ತಲಾ ಮೂರು ವಿಕೆಟ್ ಗಳಿಸಿದರು.
ಬ್ಯಾಟಿಂಗ್ ಆರಂಭಿಸಿದ ರೆಸ್ಟ್ ಆಫ್ ಇಂಡಿಯಾಕ್ಕೆ ಜಯದೇವ್ ಉನದ್ಕತ್ ಮೊದಲ ಓವರ್‌ನಲ್ಲಿ ಯೇ ಹೊಡೆತ ಕೊಟ್ಟರು. ಅಭಿಮನ್ಯು ಈಶ್ವರನ್ ಖಾತೆ ತೆರೆಯದೇ ಮರಳಿದರು. ಮಯಂಕ್ ಅಗರವಾಲ್ ಹಾಗೂ ಯಶ್ ಧುಳ್ ಕೂಡ ವೈಫಲ್ಯ ಅನುಭವಿಸಿದರು.
ಆದರೆ ಸರ್ಫರಾಜ್ ಖಾನ್ (ಬ್ಯಾಟಿಂಗ್ 125; 126ಎ, 4X19, 6X2) ಹಾಗೂ ನಾಯಕ ಹನುಮವಿಹಾರಿ (ಬ್ಯಾಟಿಂಗ್ 62; 145ಎ, 4X9, 6X1) ಮುರಿಯದ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 187 ರನ್ ಸೇರಿಸಿದರು. ಇದರಿಂದಾಗಿ ದಿನದಾಟದ ಕೊನೆಗೆ ತಂಡವು 49 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 205 ರನ್ ಗಳಿಸಿತು. 107 ರನ್‌ಗಳ ಮುನ್ನಡೆ ಸಾಧಿಸಿತು. ಸರ್ಫರಾಜ್ ಖಾನ್ ಟಿ20 ಮಾದರಿಯ ಬ್ಯಾಟಿಂಗ್ ಮಾಡಿ ಬೌಲರ್‌ಗಳಿಗೆ ಕಠಿಣ ಸವಾಲೊಡ್ಡಿದರು.
ಸಂಕ್ಷಿಪ್ತ ಸ್ಕೋರು: ಸೌರಾಷ್ಟ್ರ: 24.5 ಓವರ್‌ಗಳಲ್ಲಿ 98 ( ಅರ್ಪಿತ್ ವಸವದಾ 22, ಧರ್ಮೇಂದ್ರಸಿಂಹ ಜಡೇಜ 28, ಚೇತನ್ ಸಕಾರಿಯಾ ಔಟಾಗದೆ 13, ಮುಕೇಶ್ ಕುಮಾರ್ 23ಕ್ಕೆ4, ಕುಲದೀಪ್ ಸೇನ್ 41ಕ್ಕೆ3, ಉಮ್ರಾನ್ ಮಲಿಕ್ 25ಕ್ಕೆ3) ರೆಸ್ಟ್ ಆಫ್ ಇಂಡಿಯಾ: 49 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 205 (ಹನುಮವಿಹಾರಿ ಬ್ಯಾಟಿಂಗ್ 62, ಸರ್ಫರಾಜ್ ಖಾನ್ ಬ್ಯಾಟಿಂಗ್ 125, ಜಯದೇವ್ ಉನದ್ಕತ್ 47ಕ್ಕೆ2)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.