ಇಂದೋರ್: ಮಯಂಕ್ ಅಗರವಾಲ್ ನಾಯಕತ್ವದ ಕರ್ನಾಟಕ ತಂಡವು ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಮತ್ತೊಂದು ಸವಾಲಿಗೆ ಸಿದ್ಧವಾಗಿದೆ.
ಬುಧವಾರ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯಲಿರುವ ಬಿ ಗುಂಪಿನ ಮೂರನೇ ಪಂದ್ಯದಲ್ಲಿ ಕರ್ನಾಟಕ ತಂಡವು ಜಯದೇವ್ ಉನದ್ಕತ್ ನಾಯಕರ್ವದ ಸೌರಾಷ್ಟ್ರವನ್ನು ಎದುರಿಸಲಿದೆ. ಈ ಸುತ್ತಿನ ಮೊದಲ ಪಂದ್ಯದಲ್ಲಿ ಉತ್ತರಾಖಂಡದ ಎದುರು ಸೋತಿದ್ದ ಮಯಂಕ್ ಬಳಗ, ಎರಡನೇಯದ್ದರಲ್ಲಿ ತ್ರಿಪುರ ವಿರುದ್ಧ ಜಯಿಸಿತ್ತು. ಇದರಿಂದಾಗಿ ಆತ್ಮವಿಶ್ವಾಸದಲ್ಲಿದೆ.
ಆದರೆ ಕಳೆದೆರಡೂ ತಂಡಗಳಿಗಿಂತಲೂ ಸೌರಾಷ್ಟ್ರ ಬಲಿಷ್ಠವಾಗಿದೆ. ಕಠಿಣ ಪೈಪೋಟಿಯೊಡ್ಡುವ ಸಾಮರ್ಥ್ಯ ಆ ತಂಡಕ್ಕಿದೆ. ಕರ್ನಾಟಕ ತಂಡದ ಬ್ಯಾಟಿಂಗ್ ವಿಭಾಗವು ಉತ್ತಮವಾಗಿದೆ. ಸಾಯಕ ಮಯಂಕ್, ಆರ್. ಸ್ಮರಣ್, ಎಲ್.ಆರ್. ಚೇತನ್, ಅಭಿನವ್ ಮನೋಹರ್ ಮತ್ತು ಕೆ.ಎಲ್. ಶ್ರೀಜಿತ್ ಉತ್ತಮ ಲಯದಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ಮನೀಷ್ ಪಾಂಡೆ ಅವರಿಗೆ ವಿಶ್ರಾಂತಿ ನೀಡಲಾಗಿತ್ತು.
ಆದರೆ ತಂಡಕ್ಕೆ ಬೌಲಿಂಗ್‌ನದ್ದೇ ಚಿಂತೆ. ಎರಡೂ ಪಂದ್ಯಗಳಲ್ಲಿ ಅನುಭವಿ ವಿ. ಕೌಶಿಕ್, ವೈಶಾಖ ವಿಜಯಕುಮಾರ್ ಮತ್ತು ಶ್ರೇಯಸ್ ಗೋಪಾಲ್ ಅವರೂ ಹೆಚ್ಚು ದುಬಾರಿಯಾಗಿದ್ದಾರೆ. ಮನ್ವಂತ್ ಕುಮಾರ್ ಮತ್ತು ಶುಭಾಂಗ್ ಹೆಗಡೆ ಅವರು ಮಾತ್ರ ಭರವಸೆಯ ಆಟವಾಡಿದ್ದಾರೆ. ಈ ಪಂದ್ಯದಲ್ಲಿ ಸುಧಾರಿತವಾದ ಆಟವಾಡಬೇಕಾದ ಒತ್ತಡ ಬೌಲಿಂಗ್ ಪಡೆಗೆ ಇದೆ. ಸೌರಾಷ್ಟ್ರ ತಂಡದಲ್ಲಿ ಹರ್ವಿಕ್ ದೇಸಾಯಿ, ತರಂಗ್ ಗೊಹೆಲ್, ವಿಶ್ವರಾಜ್ ಜಡೇಜ, ಸಮರ್ ಗಜ್ಜರ್, ಪ್ರೇರಕ್ ಮಂಕಡ್, ಜೈ ಗೋಹಿಲ್, ಚಿರಾಗ್ ಜಾನಿ ಅವರು ಬೌಲರ್‌ಗಳಿಗೆ ಸವಾಲೊಡ್ಡಬಲ್ಲವರು.
ನಾಯಕ ಉನದ್ಕತ್ ಹಾಗೂ ಎಡಗೈ ಸ್ಪಿನ್ನರ್ ಧರ್ಮೇಂದ್ರಸಿಂಹಜಿ ಜಡೇಜ ಅವರು ಪ್ರಮುಖ ಬೌಲರ್‌ಗಳಾಗಿದ್ದಾರೆ. ಸೌರಾಷ್ಟ್ರ ತಂಡವೂ ಎರಡು ಪಂದ್ಯಗಳನ್ನು ಆಡಿದೆ. ಮೊದಲ ಪಂದ್ಯದಲ್ಲಿ ಸಿಕ್ಕಿಂ ವಿರುದ್ಧ ಗೆದ್ದಿತ್ತು. ನಂತರ ಗುಜರಾತ್ ಎದುರು ಸೋತಿತ್ತು. ನೆಟ್ ರನ್‌ರೇಟ್‌ನಲ್ಲಿ ಕರ್ನಾಟಕಕ್ಕಿಂತ ಉತ್ತಮವಾಗಿರುವ ಸೌರಾಷ್ಟ್ರ ಮೂರನೇ ಸ್ಥಾನದಲ್ಲಿದೆ. ಮಯಂಕ್ ಬಳಗ ನಾಲ್ಕನೇ ಸ್ಥಾನದಲ್ಲಿದೆ. ಅದರಿಂದಾಗಿ ಉಭಯ ತಂಡಗಳಿಗೂ ಗೆಲುವು ಮಹತ್ವದ್ದಾಗಿದ್ದು, ರೋಚಕ ಪೈಪೋಟಿ ನಡೆಯುವ ಸಾಧ್ಯತೆ ಇದೆ.
ಪಂದ್ಯ ಆರಂಭ: ಬೆಳಿಗ್ಗೆ 11
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.