ನವದೆಹಲಿ: ತಮ್ಮ ಪದಾರ್ಪಣೆ ಪಂದ್ಯದಲ್ಲಿಯೇ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಅಭಿನವ್ ಮನೋಹರ್ ಆಟಕ್ಕೆ ಸೌರಾಷ್ಟ್ರದ ಬೌಲರ್‌ಗಳು ಹೌಹಾರಿದರು. ಕರ್ನಾಟಕ ತಂಡವು ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟಿತು.
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಸೌರಾಷ್ಟ್ರ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 145 ರನ್ ಗಳಿಸಿತು. ಶೆಲ್ಡನ್ ಜಾಕ್ಸನ್ (50; 43ಎಸೆತ) ಅರ್ಧಶತಕ ಗಳಿಸಿದರು.
ಈ ಗುರಿಯನ್ನು ಬೆನ್ನಟ್ಟಿದ ಕರ್ನಾಟಕ ತಂಡಕ್ಕೆ ಅನುಭವಿ ಎಡಗೈ ಮಧ್ಯಮವೇಗಿ ಜಯದೇವ್ ಉನದ್ಕತ್ ಪೆಟ್ಟು ಕೊಟ್ಟರು. ಇದರಿಂದಾಗಿ ಕೇವಲ 34 ರನ್‌ಗಳಾಗುವಷ್ಟರಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡ ತಂಡ ಆತಂಕದಲ್ಲಿತ್ತು. ಐದನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಅಭಿನವ್ (70; 49ಎಸೆತ) ಬೀಸಾಟಕ್ಕೆ 2 ವಿಕೆಟ್‌ಗಳ ರೋಚಕ ಗೆಲುವು ಒಲಿಯಿತು. ತಂಡವು 19.5 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 150 ರನ್ ಗಳಿಸಿತು.
ಬಿ.ಆರ್. ಶರತ್, ನಾಯಕ ಮನೀಷ್ ಪಾಂಡೆ, ಅನುಭವಿ ಆಟಗಾರ ಕರುಣ್ ನಾಯರ್ ಅವರು ಪೆವಿಲಿಯನ್‌ಗೆ ಮರಳಿದ್ದರು. ಆದರೆ, ರಾಜ್ಯ ತಂಡದಲ್ಲಿ ಇದೇ ಮೊದಲ ಬಾರಿಗೆ ಆಡಿದ 27 ವರ್ಷದ ಅಭಿನವ್ ಅರ್ಧ ಡಜನ್ ಸಿಕ್ಸರ್ ಸಿಡಿಸಿದರು. ಎದುರಾಳಿ ತಂಡದ ಅನುಭವಿ ಬೌಲರ್‌ಗಳಿಗೆ ನಡುಕ ಹುಟ್ಟಿಸಿದರು. ಗದುಗಿನ ಹುಡುಗ ಅನಿರುದ್ಧ ಜೋಶಿ (13; 16ಎ) ಅವರೊಂದಿಗೆ ಐದನೇ ವಿಕೆಟ್ ಜೊತೆಯಾಟದಲ್ಲಿ 64 ರನ್‌ಗಳನ್ನು ಸೇರಿಸಿದರು. 17ನೇ ಓವರ್‌ನಲ್ಲಿ ಜೋಶಿ ವಿಕೆಟ್ ಗಳಿಸಿದ ಜಯದೇವ್ ಜೊತೆಯಾಟವನ್ನು ಮುರಿದರು.
ಈ ಹಂತದಲ್ಲಿ ಒಂದೆಡೆ ವಿಕೆಟ್‌ಗಳು ಪತನವಾಗುತ್ತಿದ್ದರೆ, ಅಭಿನವ್ ತಮ್ಮ ವೇಗಕ್ಕೆ ಕಡಿವಾಣ ಹಾಕಲಿಲ್ಲ. ದಿಟ್ಟತನದಿಂದ ಆಡಿದ ಅವರು ತಂಡವನ್ನು ಗೆಲುವಿನ ದಡ ಸೇರಿಸಿದರು. ಸೌರಾಷ್ಟ್ರದ ಜಯದೇವ್ ನಾಲ್ಕು ವಿಕೆಟ್ ಗಳಿಸಿದರೂ ತಂಡಕ್ಕೆ ಜಯದ ಕಾಣಿಕೆ ಕೊಡಲು ಸಾಧ್ಯವಾಗಲಿಲ್ಲ.
ಕರ್ನಾಟಕ ತಂಡದ ವಿ. ಕೌಶಿಕ್, ವೈಶಾಖ್ ವಿಜಯಕುಮಾರ್ ಮತ್ತು ಕೆ.ಸಿ. ಕಾರ್ಯಪ್ಪ ತಲಾ ಎರಡು ವಿಕೆಟ್ ಗಳಿಸಿದರು. ದೇವದತ್ತ ಪಡಿಕ್ಕಲ್, ಆರ್. ಸಮರ್ಥ್ ಮತ್ತು ಕೆ. ಗೌತಮ್ ಅವರಿಗೆ ವಿಶ್ರಾಂತಿ ನೀಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.