ADVERTISEMENT

IND vs SA 2nd ODI | ಝಾರ್ಜಿ ಶತಕ; ಭಾರತ ವಿರುದ್ಧ ದಕ್ಷಿಣ ಆಫ್ರಿಕಾ ಜಯಭೇರಿ

ಎರಡನೇ ಏಕದಿನ: ಸಾಯಿ ಸುದರ್ಶನ್, ರಾಹುಲ್ ಅರ್ಧ ಶತಕ

ಪಿಟಿಐ
Published 19 ಡಿಸೆಂಬರ್ 2023, 18:37 IST
Last Updated 19 ಡಿಸೆಂಬರ್ 2023, 18:37 IST
<div class="paragraphs"><p>ಟೋನಿ ಡಿ ಝಾರ್ಜಿ</p></div>

ಟೋನಿ ಡಿ ಝಾರ್ಜಿ

   

ಗೆಬೆಹಾ, ದಕ್ಷಿಣ ಆಫ್ರಿಕಾ: ನಾಂದ್ರೆ ಬರ್ಗರ್ ಅವರ ಅಮೋಘ ಬೌಲಿಂಗ್ ಮತ್ತು ಟೋನಿ ಡಿ ಝಾರ್ಜಿ ಅಜೇಯ ಶತಕದ ಬಲದಿಂದ ದಕ್ಷಿಣ ಆಫ್ರಿಕಾ ತಂಡವು ಮಂಗಳವಾರ ಇಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ  8 ವಿಕೆಟ್‌ಗಳಿಂದ ಭಾರತದ ಎದುರು ಜಯಿಸಿತು.

ಸೇಂಟ್ ಜಾರ್ಜ್‌ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸಾಯಿ ಸುದರ್ಶನ್  83 ಎಸೆತಗಳ ಇನಿಂಗ್ಸ್‌ನಲ್ಲಿ 62 (4x7, 6x1) ಹಾಗೂ ನಾಯಕ ಕೆ.ಎಲ್. ರಾಹುಲ್ (56; 64ಎ, 4X7) ಅವರ ಅರ್ಧಶತಕದ ಬಲದಿಂದ ತಂಡವು 46.2 ಓವರ್‌ಗಳಲ್ಲಿ 211 ರನ್ ಗಳಿಸಿತು. ಇವರಿಬ್ಬರೂ ಮೂರನೇ ವಿಕೆಟ್‌ಗೆ 68 ರನ್ ಸೇರಿಸಿದ್ದು ಬಿಟ್ಟರೆ, ಉಳಿದಂತೆ ದೊಡ್ಡ ಜೊತೆಯಾಟ ಬರಲಿಲ್ಲ.

ADVERTISEMENT

ಉಳಿದ ಬ್ಯಾಟರ್‌ಗಳು ವೇಗದ ದಾಳಿಯ ಎದುರು ಹೋರಾಟ ತೋರಲು ವಿಫಲರಾಗಿ ತಂಡ 46.2 ಓವರುಗಳಲ್ಲಿ ಪತನ ಕಂಡಿತು.‌ ಒಂದು ಹಂತದಲ್ಲಿ 2 ವಿಕೆಟ್‌ಗೆ 114 ರನ್ ಗಳಿಸಿದ್ದ ಭಾರತ ಕೊನೆಯ ಎಂಟು ವಿಕೆಟ್‌ಗಳನ್ನು 97 ರನ್‌ಗಳಿಗೆ ಕಳೆದುಕೊಂಡಿತು.  ಬೌಲರ್ ನಾಂದ್ರೆ ಬರ್ಗರ್ ಮೂರು ವಿಕೆಟ್ ಗಳಿಸಿದರು.

ಸಾಧಾರಣ ಗುರಿ ಬೆನ್ನಟ್ಟಿದ ಆತಿಥೇಯ ತಂಡದ ಝಾರ್ಜಿ (ಔಟಾಗದೆ 119; 122ಎ, 4X9, 6X6) ಮತ್ತು ರೀಜಾ ಹೆನ್ರಿಕ್ಸ್ (52; 81ಎ) ಮೊದಲ ವಿಕೆಟ್ ಜೊತೆಯಾಟದಲ್ಲಿ 130 ರನ್‌ ಸೇರಿಸಿದರು. ಇದರಿಂದಾಗಿ ತಂಡದ ಜಯವು ಸುಲಭವಾಯಿತು. 3 ಪಂದ್ಯಗಳ ಸರಣಿಯಲ್ಲಿ 1–1ರ ಸಮಬಲ ಸಾಧಿಸಿತು.

ತಮ್ಮ ವೃತ್ತಿಜೀವನದ ನಾಲ್ಕನೇ ಏಕದಿನ ಪಂದ್ಯವಾಡಿದ ಝಾರ್ಜಿ  ಭಾರತದ ಬೌಲರ್‌ಗಳನ್ನು ದಂಡಿಸಿ ಚೊಚ್ಚಲ ಶತಕ ದಾಖಲಿಸಿದರು.

ಬ್ಯಾಟಿಂಗ್ ವೈಫಲ್ಯ:  ಋತುರಾಜ್ ಗಾಯಕವಾಡ್ 2ನೇ ಎಸೆತದಲ್ಲೇ ಬರ್ಗರ್ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು. ತಿಲಕ್ ವರ್ಮಾ (10) ಕೂಡ ಅವರ ಬೌನ್ಸರ್‌ಗೆ ವಿಕೆಟ್‌ ತೆತ್ತ ನಂತರ ಸುದರ್ಶನ್– ರಾಹುಲ್ ಜೋಡಿ ಚೇತರಿಕೆಯ ಆಟವಾಡಿತು. ಪವರ್‌ ಪ್ಲೇ ನಂತರ ಭಾರತದ ಮೊತ್ತ 1 ವಿಕೆಟ್‌ಗೆ 46. ಸ್ಪಿನ್ನರ್‌ಗಳು ದಾಳಿಗಿಳಿಯುತ್ತಿದ್ದಂತೆ ಸುದರ್ಶನ್ ಹೊಡೆತಗಳಿಗೆ ಮುಂದಾದರು. 20ನೇ ಓವರ್‌ನಲ್ಲಿ ಸುದರ್ಶನ್ ಅರ್ಧ ಶತಕ ದಾಖಲಿಸಿದರು.  ರಾಹುಲ್ ಸಹ ಎಚ್ಚರಿಕೆಯ ಆರಂಭದ ನಂತರ ವಿಶ್ವಾಸದಿಂದ ಆಡಿದರು. ಸುದರ್ಶನ್ ಅವರ ವಿಕೆಟ್ ಪಡೆಯುವ ಮೂಲಕ ವಿಲಿಯಮ್ಸ್‌ ಈ ಜೊತೆಯಾಟ ಮುರಿದರು.

ಸಂಜು ಸ್ಯಾಮ್ಸನ್ ತಮಗೆ ದೊರೆತ ಉತ್ತಮ ಅವಕಾಶ ಸದುಪಯೋಗಪಡಿಸಿಕೊಳ್ಳಲಿಲ್ಲ. ಅವರು ಹೆಂಡ್ರಿಕ್ಸ್ ಬೌಲಿಂಗ್‌ನಲ್ಲಿ ಚೆಂಡನ್ನು ವಿಕೆಟ್‌ಗೆಳೆದುಕೊಂಡರು. ಶ್ರೇಯಸ್‌ ಅಯ್ಯರ್‌ ಸ್ಥಾನದಲ್ಲಿ ಪದಾರ್ಪಣೆ ಅವಕಾಶ ಪಡೆದ ರಿಂಕು ಸಿಂಗ್ 14 ಎಸೆತಗಳಲ್ಲಿ 16 ರನ್ ಹೊಡೆದು ಭರವಸೆ ಮೂಡಿಸಿದರು. ಇನಿಂಗ್ಸ್‌ನ 35ನೇ ಓವರ್ ಮಾಡಿದ ಕೇಶವ್ ಮಹಾರಾಜ್ ಬೌಲಿಂಗ್‌ನಲ್ಲಿ ಲಾಂಗ್‌ಆನ್‌ಗೆ ಸಿಕ್ಸರ್‌ ಸೇರಿದಂತೆ 16 ರನ್ ಗಳಿಸಿದರು. ಆದರೆ ಅದೇ ಬೌಲರ್ ಎಸೆತದಲ್ಲಿ ಸ್ಟಂಪ್ಡ್‌ ಆದರು. ನಂತರ ತಂಡ ಕುಸಿದರೂ, ಬಾಲಂಗೋಚಿಗಳಾದ ಆವೇಶ್‌ ಖಾನ್ (9) ಮತ್ತು ಅರ್ಷದೀಪ್ ಸಿಂಗ್ (18) ಅವರು ತಂಡ 200ರ ಗಡಿದಾಟಲು ನೆರವಾದರು.

ಸಂಕ್ಷಿಪ್ತ ಸ್ಕೋರು: ಭಾರತ: 46.2 ಓವರುಗಳಲ್ಲಿ 211 (ಸಾಯಿ ಸುದರ್ಶನ್ 62, ಕೆ.ಎಲ್.ರಾಹುಲ್ 56, ರಿಂಕು ಸಿಂಗ್ 17, ಅರ್ಷದೀಪ್ ಸಿಂಗ್ 18; ನ್ಯಾಂಡ್ರೆ ಬರ್ಗರ್ 30ಕ್ಕೆ3, ಬ್ಯೂರನ್ ಹೆಂಡ್ರಿಕ್ಸ್ 34ಕ್ಕೆ2, ಕೇಶವ್ ಮಹಾರಾಜ್ 51ಕ್ಕೆ2)

ದಕ್ಷಿಣ ಆಫ್ರಿಕಾ: 42.3 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 215 (ರೀಜಾ ಹೆಂಡ್ರಿಕ್ಸ್ 52, ಟೋನಿ ಡಿ ಝಾರ್ಜಿ ಔಟಾಗದೆ 119, ರೆಸಿ ವ್ಯಾನ್‌ ಡೆರ್ ಡಸೆ 36, ರಿಂಕು ಸಿಂಗ್ 2 ಕ್ಕೆ 1) ಫಲಿತಾಂಶ: ದಕ್ಷಿಣ ಆಫ್ರಿಕಾ ತಂಡಕ್ಕೆ 8 ವಿಕೆಟ್‌ಗಳ ಜಯ.  ಪಂದ್ಯಶ್ರೇಷ್ಠ: ಟೋನಿ ಡಿ ಝಾರ್ಜಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.