ಧರ್ಮಶಾಲಾ: ಭಾರತೀಯ ಕ್ರಿಕೆಟ್ ತಂಡದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 100ನೇ ಟೆಸ್ಟ್ ಪಂದ್ಯದ ಹೊಸ್ತಿಲಲ್ಲಿದ್ದಾರೆ. ಈ ಸಂಬಂಧ ವೃತ್ತಿ ಬದುಕಿನಲ್ಲಿ ದೊರಕಿದ ಮಹತ್ವದ ತಿರುವಿನ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.
2012ರಲ್ಲಿ ಇಂಗ್ಲೆಂಡ್ ವಿರುದ್ಧ ಎದುರಾದ ಸರಣಿ ಸೋಲು ನನ್ನ ಕ್ರಿಕೆಟ್ ಜೀವನದಲ್ಲಿ ಮಹತ್ವದ ತಿರುವು ಪಡೆದುಕೊಂಡಿತು. ಅನೇಕ ತಪ್ಪುಗಳನ್ನು ತಿದ್ದಿಕೊಂಡು ಸರಿಪಡಿಸಲು ನೆರವಾಯಿತು ಎಂದು ಅಶ್ವಿನ್ ಹೇಳಿದ್ದಾರೆ.
2012ರಲ್ಲಿ 2-1ರ ಅಂತರದಲ್ಲಿ ಇಂಗ್ಲೆಂಡ್ ಸರಣಿ ಗೆದ್ದಿತ್ತು. 1984-85ರ ಬಳಿಕ ಮೊದಲ ಸರಣಿ ಗೆಲುವು ದಾಖಲಿಸಿತ್ತು.
37ರ ಹರೆಯದ ಅಶ್ವಿನ್ ಈಗಷ್ಟೇ ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ. ಈಗ ಧರ್ಮಶಾಲಾದಲ್ಲಿ ಇಂಗ್ಲೆಂಡ್ ವಿರುದ್ಧವೇ 100ನೇ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಅಶ್ವಿನ್, ಇದೊಂದು ದೊಡ್ಡ ಪಂದ್ಯ. ಈ ಪ್ರಯಾಣವು ತುಂಬಾನೇ ವಿಶೇಷವಾಗಿದೆ. ಆದರೆ ಪೂರ್ವ ಸಿದ್ಧತೆಯಲ್ಲಿ ಯಾವುದೇ ಬದಲಾವಣೆಯಿಲ್ಲ. ಇನ್ನೊಂದು ಟೆಸ್ಟ್ ಪಂದ್ಯ ಗೆಲ್ಲಬೇಕಿದೆ ಎಂದು ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧ ಸಾಗುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ ಭಾರತ 3-1 ಅಂತರದಲ್ಲಿ ವಶಪಡಿಸಿಕೊಂಡಿದೆ. ಸರಣಿಯ ಮೊದಲ ಪಂದ್ಯದಲ್ಲಿ ಸೋತರೂ ನಂತರದ ಮೂರು ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿತ್ತು.
ರವಿಚಂದ್ರನ್ ಅಶ್ವಿನ್ ಅವರು ಅನಿಲ್ ಕುಂಬ್ಳೆ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಗಳಿಸಿದ ಭಾರತದ ಎರಡನೇ ಬೌಲರ್ ಎನಿಸಿದ್ದಾರೆ.
13 ವರ್ಷಗಳ ಕ್ರಿಕೆಟ್ ಜೀವನದಲ್ಲಿ ಅತ್ಯುತ್ತಮ ನಿರ್ವಹಣೆ ಬಗ್ಗೆ ಕೇಳಿದಾಗ, 2018-19ರಲ್ಲಿ ಇಂಗ್ಲೆಂಡ್ ವಿರುದ್ಧದ ಪ್ರದರ್ಶನ ತಮ್ಮ ಪಾಲಿಗೆ ವಿಶೇಷವೆನಿಸಿದೆ ಎಂದು ಹೇಳಿದರು. ಅಂದಿನ ಬರ್ಮಿಂಗ್‌ಹ್ಯಾಮ್ ಟೆಸ್ಟ್ ಪಂದ್ಯದಲ್ಲಿ ಆಲಿಸ್ಟಾರ್ ಕುಕ್ ಹಾಗೂ ಜೋ ರೂಟ್ ಸೇರಿದಂತೆ ಏಳು ವಿಕೆಟ್‌ಗಳನ್ನು ಅಶ್ವಿನ್ ಕಬಳಿಸಿದ್ದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ಅಶ್ವಿನ್ ಸಾಧನೆ:
ಪಂದ್ಯ: 99
ರನ್: 3,309
ವಿಕೆಟ್: 507
ಶತಕ: 5
ಅರ್ಧಶತಕ: 14
5 ವಿಕೆಟ್: 35
ಅತ್ಯುತ್ತಮ ಬೌಲಿಂಗ್: 59/7
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.