ADVERTISEMENT

ಅರ್ಧ ಶತಕ ಬಾರಿಸಿದ ಕೊಹ್ಲಿ, ಮಿಂಚಿದ ಕೃಣಾಲ್; ರೋಚಕ ಗೆಲುವು ಸಾಧಿಸಿದ ಟೀಂ ಇಂಡಿಯಾ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2018, 14:11 IST
Last Updated 25 ನವೆಂಬರ್ 2018, 14:11 IST
   

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಟ್ವೆಂಟಿ- 20 ಅಂತಿಮ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದಟೀಂ ಇಂಡಿಯಾ ಗೆಲುವು ಸಾಧಿಸಿದೆ. 20ನೇ ಓವರ್ ಪೂರ್ಣಗೊಳ್ಳಲು 2 ಎಸೆತ ಬಾಕಿ ಇದ್ದಾಗ ಭಾರತ ತಂಡ ಆಸ್ಟ್ರೇಲಿಯಾ ತಂಡವನ್ನು 6 ವಿಕೆಟ್‍ಗಳಿಂದ ಪರಾಭವಗೊಳಿಸಿದೆ.

ಮೊದಲ ಪಂದ್ಯಆಸ್ಟ್ರೇಲಿಯಾ ಗೆದ್ದಿದ್ದು, ಎರಡನೇ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.
ಈ ಸರಣಿಯ ಕೊನೆಯ ಪಂದ್ಯದಲ್ಲಿ165 ರನ್ ಗುರಿಯನ್ನು ಬೆನ್ನತ್ತಿ ಕ್ರೀಸ್‍ಗಳಿದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಭಾರತೀಯ ತಂಡಕ್ಕೆ ಉತ್ತಮ ಆರಂಭವನ್ನು ನೀಡಿದ್ದರು.ಈ ಜೋಡಿ 67 ರನ್ ಗಳಿಸಿದೆ.ರೋಹಿತ್ ಶರ್ಮಾ 16 ಎಸೆತಗಳಲ್ಲಿ 23 ರನ್ ಮತ್ತುಧವನ್ 22 ಎಸೆತಗಳಲ್ಲಿ 41 ರನ್ ಗಳಿಸಿದ್ದಾರೆ. ಈ ಜೋಡಿಯ ನಂತರ ಕೆ.ಎಲ್. ರಾಹುಲ್ ಮತ್ತುವಿರಾಟ್ ಕೊಹ್ಲಿ ಜೋಡಿ 41 ರನ್‍ಗಳನ್ನು ಗಳಿಸಿ ಭಾರತದ ಸ್ಕೋರ್ ಏರುವಂತೆ ಮಾಡಿದರು.

14 ರನ್ ‍ಗಳಿಸಿ ರಾಹುಲ್ ಪೆವಿಲಿಯನ್‍ಗೆ ನಡೆದ ಬೆನ್ನಲ್ಲೇ ಮೊದಲ ಎಸೆತ ಎದುರಿಸಿರಿಷಬ್ ಪಂತ್ ಔಟಾದರು.
5 ನೇ ವಿಕೆಟ್ ಸಹಭಾಗಿತ್ವದಲ್ಲಿ ವಿರಾಟ್ ಕೊಹ್ಲಿ ಜತೆ ಸೇರಿದ ದಿನೇಶ್ ಕಾರ್ತಿಕ್ ಭಾರತೀಯ ತಂಡವನ್ನು ಗುರಿ ಮುಟ್ಟಿಸುವಲ್ಲಿ ಸಫಲರಾದರು.ಕೊಹ್ಲಿ 41 ಎಸೆತಗಳಲ್ಲಿ ನಾಲ್ಕು ಬೌಂಡರಿ, ಎರಡು ಸಿಕ್ಸರ್ ಸೇರಿ ಅಜೇಯ 61 ರನ್ ಗಳಿಸಿದ್ದಾರೆ. ದಿನೇಶ್ ಕಾರ್ತಿಕ್ 22 ರನ್ ಗಳಿಸಿದ್ದು ಈ ಜೋಡಿ 60 ರನ್‍ಗಳನ್ನು ಕಲೆ ಹಾಕಿದೆ.

ADVERTISEMENT

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಆಸ್ಟ್ರೇಲಿಯಾ ನಿಗದಿತ 20 ಓವರ್‍‍ಗಳಲ್ಲಿ 6 ವಿಕೆಟ್ ಕಳೆದುಕೊಂಡು 164 ರನ್ ದಾಖಲಿಸಿತ್ತು, ನಾಲ್ಕು ಓವರ್‌ಗಳಲ್ಲಿ 36 ರನ್ ನೀಡಿ ನಾಲ್ಕು ವಿಕೆಟ್ ಗಳಿಸಿದ ಕೃಣಾಲ್ ಪಾಂಡ್ಯ ಈ ಪಂದ್ಯದ ಗತಿಯನ್ನೇ ಬದಲಿಸಿದರು. ಟ್ವೆಂಟಿ -20 ವೃತ್ತಿಜೀವನದಲ್ಲಿ ಕೃಣಾಲ್ ಅವರ ಉತ್ತಮ ಬೌಲಿಂಗ್ ಪ್ರದರ್ಶನ ಇದಾಗಿತ್ತು.
ಆಸ್ಟ್ರೇಲಿಯಾ ಪರವಾಗಿ ಆರಂಭಿಕ ವಿಕೆಟ್‍ ನಲ್ಲಿ ಡಾರ್ಚಿ ಶಾರ್ಟ್ ಮತ್ತು ಆ್ಯರನ್ ಫಿಂಚ್ ಜೋಡಿ 68 ರನ್ ಗಳಿಸಿತ್ತು.28 ರನ್ ಗಳಿಸಿದ ಆ್ಯರನ್ ಫಿಂಚ್ ಕುಲ್‍ದೀಪ್ ಯಾದವ್‍ಗೆ ವಿಕೆಟ್ ಒಪ್ಪಿಸಿದ ಬೆನ್ನಲ್ಲೇ 33 ರನ್ ಗಳಿಸಿ ಶಾರ್ಟ್ ಕೂಡಾ ಪೆವಿಲಿಯನ್‍ಗೆ ಹೆಜ್ಜೆ ಹಾಕಿದರು. ನಂತರದ ಎಸೆತದಲ್ಲಿ ಬೆನ್‌ ಮೆಕ್‌ಡರ್ಮಾಟ್ (0) ಕೃಣಾಲ್‍ಗೆ ವಿಕೆಟ್ ಒಪ್ಪಿಸಿದರು.

16 ಎಸೆತಗಳಲ್ಲಿ 2 ಬೌಂಡರಿಯೊಂದಿಗೆ 13 ರನ್ ಗಳಿಸಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ವಿಕೆಟ್ ಕಬಳಿಸಿದ್ದು ಕೂಡಾ ಕೃಣಾಲ್. ಈ ವಿಕೆಟ್ ಕಳೆದುಕೊಂಡಾಗ ಆಸ್ಟ್ರೇಲಿಯಾದ ಸ್ಕೋರ್ 4 ವಿಕೆಟ್ ನಷ್ಟಕ್ಕೆ 90 ರನ್ ಆಗಿತ್ತು.ತಮ್ಮ ನಾಲ್ಕನೇ ಓವರ್‌ನಲ್ಲಿ ಅಲೆಕ್ಸ್‌ ಕ್ಯಾರಿ (27) ಅವರ ವಿಕೆಟ್ ಕಿತ್ತು ಕೃಣಾಲ್ ಮಿಂಚಿದರು. 13 ರನ್ ಗಳಿಸಿದ ಕ್ರಿಸ್‌ ಲಿನ್ ಅವರನ್ನು ಬೂಮ್ರಾ ರನೌಟ್ ಮಾಡಿದರು. 25 ರನ್ ಗಳಿಸಿದ ಮಾರ್ಕಸ್‌ ಸ್ಟೊಯಿನಿಸ್ ಮತ್ತು 13 ರನ್ ಗಳಿಸಿದ ಕೌಲ್ಟರ್‌ ನೈಲ್ ಅಜೇಯರಾಗಿ ಉಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.