ADVERTISEMENT

ಐಸಿಸಿ 19 ವರ್ಷದೊಳಗಿನವರ ವಿಶ್ವಕಪ್‌ ತಂಡ: ಶಫಾಲಿ, ಶ್ವೇತಾ, ಪಾರ್ಶ್ವಿಗೆ ಸ್ಥಾನ

ಐಸಿಸಿ 19 ವರ್ಷದೊಳಗಿನವರ ವಿಶ್ವಕಪ್‌ ತಂಡ

​ಪ್ರಜಾವಾಣಿ ವಾರ್ತೆ
Published 30 ಜನವರಿ 2023, 16:03 IST
Last Updated 30 ಜನವರಿ 2023, 16:03 IST
ಶಫಾಲಿ ವರ್ಮಾ
ಶಫಾಲಿ ವರ್ಮಾ   

ದುಬೈ: ದಕ್ಷಿಣ ಆಫ್ರಿಕಾದಲ್ಲಿ ಭಾನುವಾರ ಕೊನೆಗೊಂಡ 19 ವರ್ಷದೊಳಗಿನ ಮಹಿಳಾ ಟಿ20 ಕ್ರಿಕೆಟ್ ವಿಶ್ವಕಪ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದವರನ್ನು ಆಯ್ಕೆ ಮಾಡಿಕೊಂಡು ಐಸಿಸಿ ಹೆಸರಿಸಿದ ‘ವಿಶ್ವಕಪ್‌ ತಂಡ’ದಲ್ಲಿ ಭಾರತದ ಮೂವರಿಗೆ ಸ್ಥಾನ ಲಭಿಸಿದೆ.

ವಿಶ್ವಕಪ್‌ ವಿಜೇತ ಭಾರತ ತಂಡದ ನಾಯಕಿ ಶಫಾಲಿ ವರ್ಮಾ, ಆರಂಭಿಕ ಬ್ಯಾಟರ್‌ ಶ್ವೇತಾ ಶೆರಾವತ್‌ ಮತ್ತು ಲೆಗ್‌ ಸ್ಪಿನ್ನರ್‌ ಪಾರ್ಶ್ವಿ ಚೋಪ್ರಾ ಅವರು ಐಸಿಸಿ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಭಾನುವಾರ ನಡೆದ ಫೈನಲ್‌ನಲ್ಲಿ ಭಾರತ ತಂಡ ಏಳು ವಿಕೆಟ್‌ಗಳಿಂದ ಇಂಗ್ಲೆಂಡ್‌ ತಂಡವನ್ನು ಮಣಿಸಿ ಚಾಂಪಿಯನ್‌ ಆಗಿತ್ತು. ಶಫಾಲಿ ಅವರು ಟೂರ್ನಿಯಲ್ಲಿ ಒಟ್ಟು 172 ರನ್‌ ಕಲೆಹಾಕಿದ್ದರು. ಯುಎಇ ವಿರುದ್ಧದ ಪಂದ್ಯದಲ್ಲಿ ಅವರು 34 ಎಸೆತಗಳಲ್ಲಿ 78 ರನ್‌ ಗಳಿಸಿದ್ದರು.

ADVERTISEMENT

ಶ್ವೇತಾ ಅವರು 99ರ ಸರಾಸರಿಯಲ್ಲಿ 297 ರನ್‌ ಗಳಿಸಿ, ಟೂರ್ನಿಯ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು. ಅವರು 139.43ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಕಲೆಹಾಕಿದ್ದರು.

ಮೊದಲ ಮೂರು ಪಂದ್ಯಗಳಲ್ಲಿ ಕೇವಲ ಎರಡು ವಿಕೆಟ್‌ ಪಡೆದುಕೊಂಡಿದ್ದ ಪಾರ್ಶ್ವಿ, ಆ ಬಳಿಕ ಕೈಚಳಕ ಮೆರೆದಿದ್ದರಲ್ಲದೆ ಆರು ಪಂದ್ಯಗಳಿಂದ ಒಟ್ಟು 11 ವಿಕೆಟ್‌ ಗಳಿಸಿದ್ದರು. ಅತ್ಯಧಿಕ ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದರು.

ಕೊನೆಯ ಸೂಪರ್‌ ಲೀಗ್‌ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಐದು ರನ್‌ಗಳಿಗೆ ನಾಲ್ಕು ವಿಕೆಟ್‌ ಪಡೆದಿದ್ದರು. ಸೆಮಿಫೈನಲ್‌ನಲ್ಲಿ 20 ರನ್‌ಗಳಿಗೆ ಮೂರು ಹಾಗೂ ಫೈನಲ್‌ನಲ್ಲಿ 13 ರನ್‌ಗಳಿಗೆ ಎರಡು ವಿಕೆಟ್‌ ತಮ್ಮದಾಗಿಸಿಕೊಂಡಿದ್ದರು.

ಇಂಗ್ಲೆಂಡ್‌ನ ಗ್ರೇಸ್‌ ಸ್ಕ್ರಿವೆನ್ಸ್‌ ಅವರು ತಂಡದ ನಾಯಕಿಯಾಗಿದ್ದು, ಅದೇ ದೇಶದ ಹನ್ನಾ ಬೆಕರ್, ಎಲೀ ಆ್ಯಂಡರ್ಸನ್ ಸ್ಥಾನ ಗಳಿಸಿದ್ದಾರೆ. ನ್ಯೂಜಿಲೆಂಡ್‌ನ ಜಾರ್ಜಿಯಾ ಪ್ಲಿಮೆರ್, ಶ್ರೀಲಂಕಾದ ದೇವನಿ ವಿಹಾಂಗ, ಬಾಂಗ್ಲಾದೇಶದ ಶೋರ್ನಾ ಅಖ್ತರ್, ದಕ್ಷಿಣ ಆಫ್ರಿಕಾದ ಕರಬೊ ಮೆಸೊ, ಆಸ್ಟ್ರೇಲಿಯಾದ ಮ್ಯಾಗಿ ಕ್ಲಾರ್ಕ್‌ ಮತ್ತು ಪಾಕಿಸ್ತಾನದ ಅನೋಶಾ ನಾಸಿರ್‌ ಅವರು ತಂಡದಲ್ಲಿದ್ಧಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.