ADVERTISEMENT

ನನ್ನ ಹೆಣ್ಣು ಮಕ್ಕಳು ಹೊರಾಂಗಣ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ: ಅಫ್ರಿದಿ

ಏಜೆನ್ಸೀಸ್
Published 12 ಮೇ 2019, 11:30 IST
Last Updated 12 ಮೇ 2019, 11:30 IST
   

ಇಸ್ಲಾಮಾಬಾದ್‌: ‘ನನ್ನ ಹೆಣ್ಣು ಮಕ್ಕಳು ಕ್ರಿಕೆಟ್‌ನಂಥ ಹೊರಾಂಗಣ ಕ್ರೀಡೆಯನ್ನು ಆಡಲು ನಾನು ಅನುಮತಿ ನೀಡುವುದಿಲ್ಲ,’ಎಂದು ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಶಾಹಿದ್‌ ಅಫ್ರಿದಿ ಹೇಳಿಕೊಂಡಿದ್ದಾರೆ.

ಶಾಹಿದ್‌ ಅಫ್ರಿದಿ ಅವರ ಆತ್ಮಚರಿತ್ರೆ ‘ಗೇಮ್‌ ಚೇಂಜರ್‌’ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ತಮ್ಮ ಹೆಣ್ಣು ಮಕ್ಕಳ ಕ್ರೀಡಾ ಭಾಗವಹಿಸುವಿಕೆಯ ಕುರಿತು ತಾವುಹೊಂದಿರುವ ನಿಲುವಿನ ಕುರಿತು ಅಫ್ರಿದಿಅದರಲ್ಲಿ ಬರೆದುಕೊಂಡಿದ್ದಾರೆ ಎಂದುಪಾಕಿಸ್ತಾನದ ಆಂಗ್ಲ ಪತ್ರಿಕೆ ‘ದಿ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌’ ವರದಿ ಮಾಡಿದೆ.

‘ನನ್ನ ನಿರ್ಧಾರದ ಬಗ್ಗೆ ಸ್ತ್ರೀವಾದಿಗಳು ಏನಾದರೂ ಹೇಳಿಕೊಳ್ಳಲಿ. ನಾನು ಮಾತ್ರ ನನ್ನ ಹೆಣ್ಣು ಮಕ್ಕಳು ಹೊರಾಂಗಣ ಕ್ರೀಡೆಯಲ್ಲಿ ಭಾಗಹಿಸಲು ಬಿಡಲಾರೆ. ಬೇಕಿದ್ದರೆ ಅವರು ಒಳಾಂಗಣ ಕ್ರೀಡೆಗಳಲ್ಲಿ ಭಾಗವಹಿಸಬಹುದು,’ ಎಂದು ಅವರು ಬರೆದಿದ್ದಾರೆ.

ಅಫ್ರಿದಿ ಅವರಿಗೆ ಆನ್ಶಾ, ಆಜ್ವಾ, ಅಸ್ಮಾರಾ ಮತ್ತು ಆಕ್ಸಾ ಎಂಬ ಹೆಸರಿನ ನಾಲ್ವರು ಹೆಣ್ಣುಮಕ್ಕಳಿದ್ದಾರೆ. ಇದರಲ್ಲಿ ಆಜ್ವಾ ಮತ್ತು ಅಸ್ಮಾರ ಕುರಿತು ಮಾತನಾಡುತ್ತಾ ‘ಆಜ್ವಾ ಮತ್ತು ಅಸ್ಮಾರಾ ಚಿಕ್ಕವರು. ಅವರಿಗೆ ಕ್ರೀಡೆಯ ಮೇಲೆ ಪ್ರೀತಿ ಇದೆ. ಒಳಾಂಗಣದಲ್ಲಿ ಆಡಬಲ್ಲ ಯಾವುದೇ ಆಟದಲ್ಲಿ ಭಾಗವಹಿಸಲು ಅವರಿಗೆ ನನ್ನ ಅನುಮತಿ ಸದಾ ಇರಲಿದೆ. ಆದರೆ. ಕ್ರಿಕೆಟ್‌? ನನ್ನ ಹೆಣ್ಣುಮಕ್ಕಳು ಕ್ರಿಕೆಟ್‌ನಂಥ ಹೊರಾಂಗಣ ಕ್ರೀಡೆಯಲ್ಲಿ ಭಾಗವಹಿಸಲು ನಾನು ಬಿಡಲಾರೆ. ನನ್ನ ಈ ನಿರ್ಧಾರದ ಹಿಂದೆ ನನ್ನ ಸುತ್ತಲ ಸಾಮಾಜಿಕ ಮತ್ತು ಧಾರ್ಮಿಕ ಅಂಶಗಳು ಕಾರಣವಾಗಿವೆ,’ ಎಂದು ಅವರು ಹೇಳಿದ್ದಾರೆ.

ಅಫ್ರಿದಿ ಆತ್ಮಚರಿತ್ರೆ ಮತ್ತು ಅದರಲ್ಲಿನ ಸಂಗತಿಗಳು ಈಗಾಗಲೇ ಪಾಕಿಸ್ತಾನ ಪತ್ರಿಕೆಗಳಲ್ಲಿ ಹಲವು ಬಾರಿ ದೊಡ್ಡ ಸುದ್ದಿಯಾಗಿವೆ. ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ ಅವರ ಬಗ್ಗೆಯೂ ಅಫ್ರಿದಿ ತಮ್ಮಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ.‘ಗಂಭೀರ್‌ ಉತ್ತಮ ವ್ಯಕ್ತಿತ್ವವಿಲ್ಲದವರು,’ ಎಂದು ಅಫ್ರಿದಿ ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.