ADVERTISEMENT

ಕ್ಯಾಚ್‌ ಕೈಚೆಲ್ಲಿದ್ದಕ್ಕೆ ಟ್ರೋಲ್‌: ಆರ್ಷದೀಪ್‌ ಬೆಂಬಲಕ್ಕೆ ಭಜ್ಜಿ

ಕ್ಯಾಚ್‌ ಕೈಚೆಲ್ಲಿ ‘ಟ್ರೋಲ್‌’ ಆದ ಭಾರತದ ಬೌಲರ್‌

ಪಿಟಿಐ
Published 5 ಸೆಪ್ಟೆಂಬರ್ 2022, 21:58 IST
Last Updated 5 ಸೆಪ್ಟೆಂಬರ್ 2022, 21:58 IST
ಆರ್ಷದೀಪ್‌ ಸಿಂಗ್‌
ಆರ್ಷದೀಪ್‌ ಸಿಂಗ್‌   

ಚಂಡೀಗಡ: ಪಾಕಿಸ್ತಾನದ ಎದುರಿನ ಪಂದ್ಯದಲ್ಲಿ ಕ್ಯಾಚ್‌ ಕೈಚೆಲ್ಲಿ, ಟೀಕೆಗೆ ಗುರಿಯಾದ ಭಾರತ ತಂಡದ ಬೌಲರ್‌ ಆರ್ಷದೀಪ್‌ ಸಿಂಗ್ ಅವರ ಬೆಂಬಲಕ್ಕೆ ಮಾಜಿ ಕ್ರಿಕೆಟಿಗ, ರಾಜ್ಯಸಭಾ ಸದಸ್ಯ ಹರಭಜನ್‌ ಸಿಂಗ್‌ ಹಾಗೂ ಪಂಜಾಬ್‌ನ ಇತರ ಮುಖಂಡರು ನಿಂತಿದ್ದಾರೆ.

ಭಾನುವಾರ ನಡೆದ ಪಂದ್ಯದ ನಿರ್ಣಾಯಕ ಘಟ್ಟದಲ್ಲಿ ಆರ್ಷದೀಪ್‌, ಪಾಕಿಸ್ತಾನದ ಆಸಿಫ್‌ ಅಲಿ ಅವರ ಸುಲಭ ಕ್ಯಾಚ್‌ ಕೈಚೆಲ್ಲಿದ್ದರು. ಆಸಿಫ್‌ ಆ ಬಳಿಕ ಪಾಕ್‌ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು.

ಕ್ಯಾಚ್‌ ಕೈಚೆಲ್ಲಿದ್ದ ಪಂಜಾಬ್‌ನ ಯುವ ಬೌಲರ್‌, ಸಾಮಾಜಿಕ ಮಾಧ್ಯಮಗಳಲ್ಲಿ ‘ಟ್ರೋಲ್‌’ಗೆ ಗುರಿಯಾಗಿದ್ದರು. ಕೆಲವರು ಅವರನ್ನು ‘ಖಲಿಸ್ತಾನಿ’ ಎಂದು ತೆಗಳಿದ್ದರು. ‘ಆತ ಖಲಿಸ್ತಾನಿಯಾಗಿದ್ದು, ಪಾಕಿಸ್ತಾನದೊಂದಿಗೆ ರಹಸ್ಯ ಸಂಬಂಧ ಹೊಂದಿದ್ದಾನೆ’ ಎಂದು ‘ಟ್ವೀಟ್‌’ ವೊಂದರಲ್ಲಿ ಟೀಕಿಸಲಾಗಿತ್ತು.

ADVERTISEMENT

ಹರಭಜನ್‌ ಅಲ್ಲದೆ, ಎಎಪಿ ಸಂಸದ ರಾಘವ್‌ ಚಡ್ಡಾ, ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌, ಪಂಜಾಬ್‌ ಕ್ರೀಡಾ ಸಚಿವ ಗುರ್ಮೀತ್‌ ಸಿಂಗ್‌ ಮತ್ತು ಬಿಜೆಪಿ ಮುಖಂಡ ಮಂಜಿಂದರ್‌ ಸಿರ್ಸಾ ಅವರೂ ಆರ್ಷದೀಪ್‌ ಪರ ನಿಂತಿದ್ದಾರೆ.

‘ಆರ್ಷದೀಪ್‌ ಅವರನ್ನು ಟೀಕಿ ಸುವುದನ್ನು ನಿಲ್ಲಿಸಿ. ಯಾರೂ ಉದ್ದೇಶಪೂರ್ವಕವಾಗಿ ಕ್ಯಾಚ್‌ ಕೈಚೆಲ್ಲುವುದಿಲ್ಲ. ಪಾಕಿಸ್ತಾನ ಉತ್ತಮವಾಗಿ ಆಡಿ ಗೆಲುವು ಪಡೆದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಆರ್ಷದೀಪ್‌ ಹಾಗೂ ಭಾರತ ತಂಡದ ಬಗ್ಗೆ ಕೀಳು ಅಭಿರುಚಿಯ ಪೋಸ್ಟ್‌ ಹಾಕು ವವರಿಗೆ ನಾಚಿಕೆಯಾಗಬೇಕು’ ಎಂದು ಹರಭಜನ್‌ ‘ಟ್ವೀಟ್‌’ ಮಾಡಿದ್ದಾರೆ.

ಕ್ರೀಡಾ ಸಚಿವ ಗುರ್ಮೀತ್‌ ಸಿಂಗ್ ಅವರು ಆರ್ಷದೀಪ್‌ ತಾಯಿ ಬಲ್ಜಿತ್‌ ಕೌರ್‌ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು, ‘ಪಂಜಾಬ್‌ ಮತ್ತು ಇಡೀ ದೇಶ ನಿಮ್ಮ ಮಗನ ಪರ ನಿಂತಿದೆ’ ಎಂದು ಧೈರ್ಯ ತುಂಬಿದ್ದಾರೆ.

‘ಒತ್ತಡದ ಸಮಯದಲ್ಲಿ ಅಂತಹ ತಪ್ಪುಗಳು (ಕ್ಯಾಚ್‌ ಕೈಚೆಲ್ಲುವುದು) ಆಗುವುದು ಸಹಜ. ನಮ್ಮ ಕ್ರೀಡಾಪಟುಗಳನ್ನು ನಾವು ಬೆಂಬಲಿಸಬೇಕು. ಆರ್ಷದೀಪ್‌, ನಿರಾಸೆಗೆ ಒಳಗಾಗಬೇಡ. ನಿನಗೆ ಉಜ್ವಲ ಭವಿಷ್ಯವಿದೆ’ ಎಂದು ಅಮರಿಂದರ್‌ ಸಿಂಗ್‌ ತಮ್ಮ ‘ಫೇಸ್‌ಬುಕ್‌’ ಖಾತೆಯಲ್ಲಿ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.