ADVERTISEMENT

‘ಹ್ಯಾಟ್ರಿಕ್’ ಸಾಧನೆ ಗುಟ್ಟು ಬಿಚ್ಚಿಟ್ಟ ಮೊಹಮ್ಮದ್ ಶಮಿ

ಯಾರ್ಕರ್‌ ಪ್ರಯೋಗಕ್ಕೆ ಮಹಿ ಸಲಹೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2019, 19:39 IST
Last Updated 23 ಜೂನ್ 2019, 19:39 IST
ಅಫ್ಗಾನಿಸ್ತಾನ ತಂಡದ ಮುಜೀಬ್ ಉರ್ ರೆಹಮಾನ್ ಅವರ ವಿಕೆಟ್ ಕಬಳಿಸಿದ ಭಾರತದ ಮೊಹಮ್ಮದ್ ಶಮಿ ಸಂಭ್ರಮಿಸಿದರು  –ಎಪಿ/ಪಿಟಿಐ ಚಿತ್ರ
ಅಫ್ಗಾನಿಸ್ತಾನ ತಂಡದ ಮುಜೀಬ್ ಉರ್ ರೆಹಮಾನ್ ಅವರ ವಿಕೆಟ್ ಕಬಳಿಸಿದ ಭಾರತದ ಮೊಹಮ್ಮದ್ ಶಮಿ ಸಂಭ್ರಮಿಸಿದರು  –ಎಪಿ/ಪಿಟಿಐ ಚಿತ್ರ   

ಸೌತಾಂಪ್ಟನ್: ಶನಿವಾರ ಅಫ್ಗಾನಿಸ್ತಾನ ತಂಡದ ಎದುರು ಹ್ಯಾಟ್ರಿಕ್ ಸಾಧಿಸಿದ ಮೊಹಮ್ಮದ್ ಶಮಿ ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲಿ ಈ ದಾಖಲೆ ಮಾಡಿದ ಭಾರತದ ಎರಡನೇ ಬೌಲರ್‌ ಆಗಿ ಹೊರಹೊಮ್ಮಿದರು. ಇದೀಗ ಅವರು ತಮ್ಮ ಸಾಧನೆಯ ಹಿಂದಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.

’ಬ್ಯಾಟ್ಸ್‌ಮನ್‌ಗಳ ವಿಕೆಟ್ ಕಬಳಿಸುವುದು ಮತ್ತು ರನ್‌ಗಳನ್ನು ಹೊಡೆಯದಂತೆ ನಿಯಂತ್ರಿಸುವ ಯೋಜನೆ ಇತ್ತು. ಓವರ್‌ನ ಮೊದಲ ಎಸೆತವನ್ನು ನಬಿ ಬೌಂಡರಿ ಬಾರಿಸಿದರು. ಆಗ ನನ್ನ ಬಳಿಗೆ ಬಂದ ಮಹಿ ಭಾಯ್ (ಮಹೇಂದ್ರಸಿಂಗ್ ಧೋನಿ) ಯಾರ್ಕರ್ ಹಾಕು ಎಂದರು. ಹಾಕಿದೆ ಫಲ ನೀಡಿತು. ನಂತರವೂ ಅವರು ಹ್ಯಾಟ್ರಿಕ್ ಅವಕಾಶ ಇದೆ. ಇದೇ ರೀತಿ ಮುಂದುವರಿಸು ಎಂದು ಕಿವಿಮಾತು ಹೇಳಿದ್ದರು’ ಎಂದರು.

ವಿಶ್ವಕಪ್ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ವಿಶ್ವದ ಹತ್ತನೇಯ ಬೌಲರ್ ಅವರಾಗಿದ್ದಾರೆ. ಭಾರತದ ಚೇತನ್ ಶರ್ಮಾ ಅವರು 1987ರಲ್ಲಿ ನಾಗಪುರದಲ್ಲಿ ನ್ಯೂಜಿಲೆಂಡ್ ಎದುರು ಹ್ಯಾಟ್ರಿಕ್ ಮಾಡಿದ್ದರು.

ADVERTISEMENT

ಶನಿವಾರ ನಡೆದ ಅಫ್ಗಾನಿಸ್ತಾನ ಎದುರಿನ ರೋಚಕ ಹಣಾಹಣಿಯಲ್ಲಿ ಪಂದ್ಯದ ಕೊನೆಯ ಓವರ್‌ನಲ್ಲಿ ಶಮಿ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಅದರಿಂದಾಗಿ ಭಾರತವು 11 ರನ್‌ಗಳ ಗೆಲುವು ಸಾಧಿಸಿತು.

ಭುವನೇಶ್ವರ್ ಕುಮಾರ್ ಅವರು ಗಾಯಗೊಂಡಿದ್ದರಿಂದ ಶಮಿ ತಂಡದಲ್ಲಿ ಆಡುವ ಅವಕಾಶ ಪಡೆದಿದ್ದರು. ಟೂರ್ನಿಯಲ್ಲಿ ಇದು ಅವರಿಗೆ ಮೊದಲ ಪಂದ್ಯ.

‘ಕಣಕ್ಕಿಳಿಯುವ ಅವಕಾಶ ಲಭಿಸಿದ್ದು ಅದೃಷ್ಟ. ಇಂತಹ ಸಂದರ್ಭದಲ್ಲಿ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ವಿಶ್ವಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಸಾಧನೆಗಳು ಅಪರೂಪದ್ದು. ನನಗೆ ಒಲಿದಿದ್ದು ಸೌಭಾಗ್ಯ’ ಎಂದು ಶಮಿ ಹೇಳಿದರು.

‘ಕೊನೆಯ ಓವರ್‌ನಲ್ಲಿ ಸಹಜವಾಗಿಯೇ ಒತ್ತಡ ಇತ್ತು. ಆದರೆ ನಮ್ಮ ಕೌಶಲಗಳ ಮೇಲೆ ನಂಬಿಕೆ ಇತ್ತು. ಪ್ರಯೋಗಗಳಿಗೆ ಕೈಹಾಕಿದರೆ ಅಪಾಯವಿತ್ತು. ಆದ್ದರಿಂದ ಬ್ಯಾಟ್ಸ್‌ಮನ್ ಕುರಿತು ಅರಿಯುವತ್ತ ಗಮನ ಕೊಡಲಿಲ್ಲ. ನನ್ನ ಯೋಜನೆಯನ್ನು ಕಾರ್ಯಗತಗೊಳಿಸಿದೆ’ ಎಂದರು.

‘ನಾನು ಮತ್ತು ಬೂಮ್ರಾ ಫುಲ್ಲರ್‌ ಲೆಂಗ್ತ್ ಎಸೆತಗಳನ್ನು ಹೆಚ್ಚು ಪ್ರಯೋಗಿಸಲಿಲ್ಲ. ಶಾರ್ಟ್ ಪಿಚ್ ಎಸೆತಗಳನ್ನು ಅವರು ಚೆನ್ನಾಗಿ ಆಡುವ ಸಾಧ್ಯತೆ ಇತ್ತು. ಆದ್ದರಿಂದ ವಿವಿಧ ಆಯಾಮಗಳಲ್ಲಿ ಬೌನ್ಸರ್‌ ಪ್ರಯೋಗಿಸುವ ಯೋಜನೆ ಮಾಡಿಕೊಂಡಿದ್ದೆವು’ ಎಂದರು.

‘ಎರಡು ವರ್ಷಗಳಿಂದ ನನ್ನ ಫಾರ್ಮ್ ಅಸ್ಥಿರವಾಗಿತ್ತು. ಗಾಯದಿಂದ ಸಾಕಷ್ಟು ಹಿನ್ನಡೆಯಾಗಿದೆ. ಶಸ್ತ್ರಚಿಕಿತ್ಸೆಯ ನಂತರ ದೇಹ ತೂಕ ಸ್ಪಲ್ಪ ಹೆಚ್ಚಾಗಿತ್ತು. ಒಂದು ಸ್ಪೆಲ್ ಹಾಕಿದ ಮೇಲೆ ಸ್ವಲ್ಪ ಆಯಾಸ ಎನಿಸಿತ್ತು. ಆದರೂ ಸುಧಾರಿಸಿಕೊಂಡೆ. ಉತ್ತಮ ಕ್ರಿಕೆಟ್ ಆಡುವ ಸಾಮರ್ಥ್ಯ ನನ್ನಲಿದೆ ಎಂಬ ವಿಶ್ವಾಸ ಇತ್ತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.