ನವದೆಹಲಿ (ಪಿಟಿಐ): ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ಎಡಗಾಲಿನ ಹಿಮ್ಮಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಮುಂದಿನ ತಿಂಗಳು ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ (ಐಪಿಎಲ್) ಅಲಭ್ಯರಾಗಿದ್ದಾರೆ. ಜೂನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಿಂದಲೂ ಅವರು ಬಹುತೇಕ ಹೊರಗುಳಿಯುವ ಸಾಧ್ಯತೆ ಇದೆ.
33 ವರ್ಷದ ಶಮಿ ಸೋಮವಾರ ಲಂಡನ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದರು. ಅವರು ಪೂರ್ಣ ಚೇತರಿಸಿಕೊಳ್ಳಲು ಕನಿಷ್ಠ ಮೂರು ತಿಂಗಳು ಹಿಡಿಯಲಿದೆ. ಕಳೆದ ನವೆಂಬರ್ 19 ರಂದು ಆಸ್ಟ್ರೇಲಿಯಾ ವಿರುದ್ಧ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಕೊನೆಯ ಬಾರಿಗೆ ಅವರು ಭಾರತ ತಂಡದಲ್ಲಿ ಆಡಿದ್ದರು. ವಿಶ್ವಕಪ್‌ನಲ್ಲಿ ಅವರು 24 ವಿಕೆಟ್ ಪಡೆದಿದ್ದರು.
ಅವರು ಮಾರ್ಚ್ 22 ರಿಂದ ಮೇ 26 ರವರೆಗೆ ನಡೆಯಲಿರುವ ಐಪಿಎಲ್‌ನಿಂದ ಹೊರಗುಳಿಯಲಿದ್ದಾರೆ ಎಂದು ಕಳೆದ ವಾರ ಪಿಟಿಐ ವರದಿ ಮಾಡಿತ್ತು.
‘ಹಿಮ್ಮಡಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಚೇತರಿಸಿಕೊಳ್ಳಲು ಸ್ವಲ್ಪ ಕಾಲಾವಕಾಶ ತೆಗೆದುಕೊಳ್ಳುತ್ತದೆ. ನಿಲ್ಲಲು ಎದುರು ನೋಡುತ್ತಿದ್ದೇನೆ’ ಎಂದು ಶಮಿ ಸೋಮವಾರ 'ಎಕ್ಸ್' ನಲ್ಲಿ ತಿಳಿಸಿದ್ದಾರೆ.
ಶಮಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿರುವ ಪ್ರಧಾನಿ ನರೇಂದ್ರ ಮೋದಿ, ನಿಮ್ಮ ಧೈರ್ಯದಿಂದ ಈ ಗಾಯವನ್ನು ಜಯಿಸುತ್ತೀರಿ ಎಂಬ ವಿಶ್ವಾಸ ನನಗಿದೆ ಎಂದು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.
ಹಿಮ್ಮಡಿಯ ಗಾಯಕ್ಕೆ ಚುಚ್ಚುಮದ್ದು ತೆಗೆದುಕೊಳ್ಳಲು ಶಮಿ ಅವರು ಜನವರಿಯಲ್ಲಿ ಲಂಡನ್‌ಗೆ ತೆರಳಿದ್ದರು. ಔಷಧವು ಅಷ್ಟು ಪರಿಣಾಮ ಬೀರದ ಕಾರಣ ಅವರು ಶಸ್ತ್ರಚಿಕಿತ್ಸೆಗೆ ಒಳಗಾದರು.
ಶಮಿ ಅನುಪಸ್ಥಿತಿಯು ಗುಜರಾತ್ ಟೈಟನ್ಸ್‌ಗೆ ದೊಡ್ಡ ಹೊಡೆತವಾಗಿದೆ. ಕಳೆದ ವರ್ಷ ಐಪಿಎಲ್‌ನಲ್ಲಿ ರನ್ನರ್ ಅಪ್ ಸ್ಥಾನ ಪಡೆದಾಗ ತಂಡದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.