ಬೆಂಗಳೂರು: ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮೊಹಮ್ಮದ್ ಶಮಿ ಅವರು ಪುನರಾಗಮನ ಇನ್ನಷ್ಟು ವಿಳಂಬವಾಗಲಿದೆ. ಕರ್ನಾಟಕ ಮತ್ತು ಮಧ್ಯಪ್ರದೇಶ ವಿರುದ್ಧ ರಣಜಿ ಟ್ರೋಫಿಯ ಮುಂದಿನ ಎರಡು ಸುತ್ತುಗಳ ಪಂದ್ಯಗಳಿಗೆ ಪ್ರಕಟವಾದ ಬಂಗಾಳ ತಂಡದಲ್ಲಿ ಅವರ ಹೆಸರು ಕಾಣಿಸಿಲ್ಲ.
ಬಂಗಾಳ ತಂಡವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾಗುವ ರಣಜಿ ಪಂದ್ಯದಲ್ಲಿ ಕರ್ನಾಟಕ ತಂಡವನ್ನು ಎದುರಿಸಲಿದೆ. ನಂತರ ನವೆಂಬರ್ 13 ರಿಂದ ಇಂದೋರ್‌ನಲ್ಲಿ ನಡೆಯುವ ಪಂದ್ಯದಲ್ಲಿ ಮಧ್ಯ ಪ್ರದೇಶದ ವಿರುದ್ಧ ಆಡಲಿದೆ.
ಶಸ್ತ್ರಚಿಕಿತ್ಸೆಗೊಳಗಾದ ಪಾದದಲ್ಲಿ ಬ್ಯಾಂಡೇಜ್ ಇದ್ದುಕೊಂಡೇ ಅವರು ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯ ವೇಳೆ ಮೊದಲ ಸಲ ಪೂರ್ಣ ಪ್ರಮಾಣದ ಬೌಲಿಂಗ್ ಅಭ್ಯಾಸದಲ್ಲಿ ಕಾಣಿಸಿಕೊಂಡಿದ್ದರು. ನೈಜ ಪಂದ್ಯದಲ್ಲಿ ತಮ್ಮ ಫಿಟ್ನೆಸ್ ಪರೀಕ್ಷೆ ಮಾಡಲು ಕರ್ನಾಟಕ ವಿರುದ್ಧ ಶಮಿ ಆಡಬಹುದೆಂಬ ನಿರೀಕ್ಷೆಯಿತ್ತು.
ತಾವು ಶೇಕಡಾ ನೂರರಷ್ಟು ಫಿಟ್ ಆಗಿರುವುದಾಗಿ ಖಾಸಗಿ ಕಾರ್ಯಕ್ರಮವೊಂದರಲ್ಲೂ ಶಮಿ ಹೇಳಿದ್ದರು.
‘ಪೂರ್ಣ ಪ್ರಮಾಣದಲ್ಲಿ ದೈಹಿಕ ಕ್ಷಮತೆ ಪಡೆಯದೇ ಶಮಿ ಅವರನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆ ಮಾಡುವುದನ್ನು ನಾವು ಬಯಸುವುದಿಲ್ಲ. ಕಾದು ನೋಡುತ್ತಿದ್ದೇವೆ’ ಎಂದು ತಂಡದ ನಾಯಕ ರೋಹಿತ್ ಶರ್ಮಾ ಕೂಡ ಹೇಳಿದ್ದರು.
ಬಂಗಾಳ ತಂಡವು, ಆರಂಭ ಆಟಗಾರ ಅಭಿಮನ್ಯು ಈಶ್ವರನ್, ವಿಕೆಟ್ ಕೀಪರ್–ಬ್ಯಾಟರ್ ಅಭಿಷೇಕ್ ಪೊರೆಲ್ ಮತ್ತು ವೇಗದ ಬೌಲರ್ ಮುಕೇಶ್ ಕುಮಾರ್ ಅವರ ಸೇವೆಯನ್ನೂ ಕಳೆದುಕೊಂಡಿದೆ. ಈ ಆಟಗಾರರು ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ‘ಎ’ ತಂಡದಲ್ಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಆಡಿದ್ದ ವೇಗಿ ಆಕಾಶ್ ದೀಪ್ ಕೂಡ ತಂಡದಲ್ಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.