ADVERTISEMENT

ಸಂತ್ರಸ್ತರ ನೆರವಿಗಾಗಿ ಹರಾಜು: ವಾರ್ನ್ ಟೋಪಿಗೆ ಧೋನಿ ಬ್ಯಾಟ್‌ಗಿಂತ ಹೆಚ್ಚು ಬೆಲೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2020, 0:59 IST
Last Updated 10 ಜನವರಿ 2020, 0:59 IST
   
""

ಬೆಂಗಳೂರು: ಆಸ್ಟ್ರೇಲಿಯಾದ ಸ್ಪಿನ್‌ ದಂತಕತೆ ಶೇನ್‌ ವಾರ್ನ್‌ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ ಧರಿಸುತ್ತಿದ್ದ ಹಸಿರು ಟೋಪಿಯು ಅತೀ ಹೆಚ್ಚು ಮೌಲ್ಯ ಪಡೆದ ಕ್ರೀಡಾ ಸ್ಮರಣಿಕೆ ಎಂಬ ದಾಖಲೆಗೆ ಭಾಜನವಾಗಿದೆ.

ಆಸ್ಟ್ರೇಲಿಯಾದಲ್ಲಿ ಕಾಣಿಸಿಕೊಂಡಿರುವ ಭೀಕರ ಕಾಳ್ಗಿಚ್ಚಿನಿಂದಾಗಿ ಸಂಕಷ್ಟಕ್ಕೆ ಒಳಗಾದವರಿಗೆ ನೆರವಾಗುವ ಉದ್ದೇಶದಿಂದ ಟೋಪಿಯನ್ನು ಆನ್‌ಲೈನ್‌ನಲ್ಲಿ ಹರಾಜಿಗಿಡುತ್ತಿರುವುದಾಗಿ ವಾರ್ನ್‌, ಸೋಮವಾರ ತಿಳಿಸಿದ್ದರು.

ಹರಾಜಿಗಿಟ್ಟ ಎರಡೇ ಗಂಟೆಯೊಳಗೆ ಟೋಪಿ ಖರೀದಿಸಲು ಹಲವರು ಬಿಡ್‌ ಮಾಡಿದ್ದರು. ಹೀಗಾಗಿ ಅದರ ಬೆಲೆ ₹1.95 ಕೋಟಿಗೆ ಏರಿತ್ತು. ಸಿಡ್ನಿಯ ‘ಎಂ.ಸಿ’ ಹೆಸರಿನ ವ್ಯಕ್ತಿಯೊಬ್ಬರು ಗುರುವಾರ ಸಂಜೆ ₹ 6.12 ಕೋಟಿ ಬಿಡ್‌ ಮಾಡಿದ್ದಾರೆ. ಶುಕ್ರವಾರ ಬೆಳಿಗ್ಗೆ 10 ಗಂಟೆಯವರೆಗೂ ಬಿಡ್‌ ಮಾಡಲು ಅವಕಾಶ ಇರುವುದರಿಂದ ಇದರ ಮೌಲ್ಯ ಮತ್ತಷ್ಟು ಏರುವ ನಿರೀಕ್ಷೆ ಇದೆ.

ADVERTISEMENT

ವಾರ್ನರ್‌ ಅವರ ‘ಕ್ಯಾಪ್‌’, ಆಸ್ಟ್ರೇಲಿಯಾದ ಬ್ಯಾಟಿಂಗ್‌ ದಂತಕತೆ ಡಾನ್‌ ಬ್ರಾಡ್ಮನ್‌ ಅವರ ಟೋಪಿಗಿಂತಲೂ ಹೆಚ್ಚು ಮೊತ್ತ ಗಳಿಸಿದೆ. ಬ್ರಾಡ್ಮನ್‌ ಅವರು ವೃತ್ತಿಬದುಕಿನ ಕೊನೆಯ ಟೆಸ್ಟ್‌ ಪಂದ್ಯ ಆಡುವ ವೇಳೆ ಧರಿಸಿದ್ದ ಟೋಪಿಯು 2003ರಲ್ಲಿ ₹ 3.2 ಕೋಟಿಗೆ ಬಿಕರಿಯಾಗಿತ್ತು.

2011ರ ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ಬಳಸಿದ್ದ ಬ್ಯಾಟ್‌ ₹ 1.1 ಕೋಟಿಗೆ ಮಾರಾಟವಾಗಿತ್ತು.

ವೆಸ್ಟ್‌ ಇಂಡೀಸ್‌ನ ಗ್ಯಾರಿ ಸೋಬರ್ಸ್‌ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆರು ಎಸೆತಗಳಲ್ಲಿ ಆರು ಸಿಕ್ಸರ್‌ ಸಿಡಿಸಿದಾಗ ಬಳಸಿದ್ದ ಬ್ಯಾಟ್‌ 2000ನೇ ಇಸವಿಯಲ್ಲಿ ₹ 50.42 ಲಕ್ಷಕ್ಕೆ ಬಿಕರಿಯಾಗಿತ್ತು. ಸೋಬರ್ಸ್‌ ಅವರು ಪಾಕಿಸ್ತಾನದ ಎದುರು ಅಜೇಯ 365 ರನ್‌ ಬಾರಿಸಿದ್ದಾಗ ಬಳಸಿದ್ದ ಬ್ಯಾಟ್‌ ₹ 44.10 ಲಕ್ಷಕ್ಕೆ (2000ರಲ್ಲಿ) ಮಾರಾಟವಾಗಿತ್ತು.

ಅತೀ ಹೆಚ್ಚು ಬಿಡ್‌ ಮಾಡುವ ವ್ಯಕ್ತಿಗೆ ವಾರ್ನ್‌ ಅವರು ತಮ್ಮ ಸಹಿಯುಳ್ಳ ಪ್ರಮಾಣಪತ್ರವನ್ನು ನೀಡಲಿದ್ದಾರೆ.21 ವರ್ಷಗಳ ಕ್ರಿಕೆಟ್‌ ಬದುಕಿನಲ್ಲಿ 145 ಟೆಸ್ಟ್‌ ಪಂದ್ಯಗಳನ್ನು ಆಡಿದ್ದ ವಾರ್ನ್‌ 708 ವಿಕೆಟ್‌ ಉರುಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.