ಕೋ ಸೆಮೈ (ಥಾಯ್ಲೆಂಡ್): ಹಠಾತ್ ನಿಧನರಾದ ಲೆಗ್‌ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಅವರ ಕೋಣೆಯ ನೆಲದಲ್ಲಿ ಮತ್ತು ಅವರು ಬಳಸುತ್ತಿದ್ದ ಸ್ನಾನದ ಟವೆಲ್‌ನಲ್ಲಿ ಸಾಕಷ್ಟು ಪ್ರಮಾಣದ 'ರಕ್ತದ ಕಣಗಳು' ಪತ್ತೆಯಾಗಿರುವುದಾಗಿ ಥಾಯ್ಲೆಂಡ್ ಪೊಲೀಸರು ತಿಳಿಸಿದ್ದಾರೆ.
ಆಸ್ಟ್ರೇಲಿಯಾದ ನಿವೃತ್ತ ಲೆಗ್‌ಸ್ಪಿನ್ನರ್ ವಾರ್ನ್ ಅವರು ಉಳಿದುಕೊಂಡಿದ್ದ ವಿಲ್ಲಾ(ಬಂಗಲೆ) ಪರಿಶೀಲನೆ ವೇಳೆ ಈ ಸಂಗತಿ ಗೊತ್ತಾಗಿದೆ.
52 ವರ್ಷದ ವಾರ್ನ್ ಅವರು ನಿಧನರಾಗಿದ್ದಾರೆ ಎಂದು 'ಥಾಯ್ ಇಂಟರ್‌ನ್ಯಾಷನಲ್ ಹಾಸ್ಪಿಟಲ್'ನ ವೈದ್ಯರು ಶುಕ್ರವಾರ ರಾತ್ರಿ ಘೋಷಿಸಿದ್ದರು. ಕೋ ಸೆಮೈನಲ್ಲಿರುವ ತಮ್ಮ ವಿಲ್ಲಾದಲ್ಲಿದ್ದಾಗ ಹೃದಯಾಘಾತಕ್ಕೆ ಒಳಗಾದ ವಾರ್ನ್ ಅವರನ್ನು ಸ್ನೇಹಿತರು ಆಸ್ಪತ್ರೆಗೆ ಸಾಗಿಸಿ ಉಳಿಸುವ ಪ್ರಯತ್ನ ನಡೆಸಿದರು. ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ ನಿಧನರಾದರು ಎಂದು ವರದಿಯಾಗಿದೆ. ಶುಕ್ರವಾರ ಸಂಜೆ 5 ಗಂಟೆಗೆ ವಾರ್ನ್ ಅವರು ನಿಸ್ತೇಜರಾಗಿ ಬಿದ್ದಿರುವುದನ್ನು ಅವರ ಸ್ನೇಹಿತರ ಪೈಕಿ ಓರ್ವ ಮೊದಲು ಗಮನಿಸಿದ್ದಾಗಿ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ವಾರ್ನ್ ಅವರಿದ್ದ ಕೋಣೆಯ ನೆಲದಲ್ಲಿ ಮತ್ತು ಅವರು ಬಳಸುತ್ತಿದ್ದ ಟವೆಲ್‌ನಲ್ಲಿ ರಕ್ತದ ಕಣಗಳನ್ನು ಥಾಯ್ಲೆಂಡ್ ಪೊಲೀಸರು ಪತ್ತೆ ಮಾಡಿದ್ದಾರೆ ಎಂದು ಥಾಯ್ಲೆಂಡ್‌ನ ಮಾಧ್ಯಮಗಳು ತಿಳಿಸಿರುವುದಾಗಿ ಭಾನುವಾರ ಆಸ್ಟ್ರೇಲಿಯಾದ ಸುದ್ದಿ ಸಂಸ್ಥೆ 'ಸ್ಕೈನ್ಯೂಸ್' (skynews.com.au) ವರದಿ ಮಾಡಿದೆ.
'ಕೋಣೆಯಲ್ಲಿ ದೊಡ್ಡ ಪ್ರಮಾಣದ ರಕ್ತ ಪತ್ತೆಯಾಗಿದೆ. ಸಿಪಿಆರ್ ಪರೀಕ್ಷೆ ನಡೆಸುವ ಸಂದರ್ಭ ವಾರ್ನ್ ಕೆಮ್ಮಿದಾಗ ರಕ್ತ ಬಂದಿದೆ' ಎಂದು ಸ್ಥಳೀಯ ವಿಭಾಗ ಪೊಲೀಸ್ ಕಮಾಂಡರ್ ಸ್ಯಾಟಿಟ್ ಪೋಲ್‌ಪಿನಿಟ್ ಥಾಯ್ಲೆಂಡ್ ಮಾಧ್ಯಮಕ್ಕೆ ತಿಳಿಸಿರುವುದಾಗಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.