ADVERTISEMENT

ಶೇನ್‌ ವ್ಯಾಟ್ಸನ್‌ ಗುಡ್‌ ಬೈ

ಆಸ್ಟ್ರೇಲಿಯಾದ ಬಿಗ್ ಬ್ಯಾಷ್‌ ಲೀಗ್‌ಗೆ ವಿದಾಯ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2019, 20:09 IST
Last Updated 26 ಏಪ್ರಿಲ್ 2019, 20:09 IST
ಶೇನ್‌ ವ್ಯಾಟ್ಸನ್
ಶೇನ್‌ ವ್ಯಾಟ್ಸನ್   

ಸಿಡ್ನಿ (ಎಎಫ್‌ಪಿ): ಆಲ್‌ರೌಂಡ್ ಆಟಗಾರ ಶೇನ್‌ ವ್ಯಾಟ್ಸನ್ ಆಸ್ಟ್ರೇಲಿಯಾದ ದೇಶಿ ಟೂರ್ನಿ ಬಿಗ್ ಬ್ಯಾಷ್‌ ಲೀಗ್‌ಗೆ ಶುಕ್ರವಾರ ವಿದಾಯ ಹೇಳಿದ್ದಾರೆ. ವಿದೇಶಿ ಲೀಗ್‌ಗಳಲ್ಲಿ ಆಟ ಮುಂದುವರಿಸುವುದಾಗಿ ಅವರು ತಿಳಿಸಿದ್ದಾರೆ.

37 ವರ್ಷದ ವ್ಯಾಟ್ಸನ್ 2016ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು. ಬಿಗ್ ಬ್ಯಾಷ್ ಲೀಗ್‌ನಲ್ಲಿ ಸಿಡ್ನಿ ಥಂಡರ್ಸ್‌ನ ನಾಯಕನಾಗಿದ್ದರು. ಲೀಗ್‌ನಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರ ಎಂದೆನಿಸಿಕೊಂಡಿದ್ದಾರೆ.

ಕಳೆದ ಆವೃತ್ತಿಯ ಬ್ರಿಸ್ಬೇನ್ ಹೀಟ್‌ ಎದುರಿನ ಪಂದ್ಯದಲ್ಲಿ ವ್ಯಾಟ್ಸನ್‌ 62 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಐಪಿಎಲ್‌ನಲ್ಲಿ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್‌ ಪರವಾಗಿ 53 ಎಸೆತಗಳಲ್ಲಿ 62 ರನ್‌ ಸಿಡಿಸಿದ್ದರು.

ADVERTISEMENT

ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯುವ ಉದ್ದೇಶದಿಂದ ಬಿಗ್ ಬ್ಯಾಷ್‌ಗೆ ವಿದಾಯ ಹೇಳಲು ನಿರ್ಧರಿಸಿರುವುದಾಗಿ ಅವರು ತಿಳಿಸಿದ್ದಾರೆ. ‘ತಂಡದಲ್ಲಿ ಉತ್ತಮ ಆಟಗಾರರ ಜೊತೆ ಬೆರೆತಿದ್ದೇನೆ. ಮುಂದಿನ ವರ್ಷ ಲೀಗ್‌ ಇನ್ನಷ್ಟು ಉತ್ತಮವಾಗಿ ಸಾಗಲಿ ಮತ್ತು ಸಿಡ್ನಿ ಥಂಡರ್ಸ್‌ ಇನ್ನಷ್ಟು ಸಾಧನೆ ಮಾಡಲಿ ಎಂದು ಆಶಿಸುತ್ತೇನೆ’ ಎಂದಿದ್ದಾರೆ.

ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆವಿನ್ ರಾಬರ್ಟ್ಸ್‌ ಅವರು ವ್ಯಾಟ್ಸನ್‌ ಅವರನ್ನು ಅಭಿನಂದಿಸಿ ‘ಅವರೊಬ್ಬ ಅಸಾಮಾನ್ಯ ವ್ಯಕ್ತಿಯಾಗಿದ್ದು ಚುಟುಕು ಕ್ರಿಕೆಟ್‌ನ ಅಪ್ರತಿಮ ಆಟಗಾರ’ ಎಂದರು.

ಅಂತರರಾಷ್ಟ್ರೀಯ ಮತ್ತು ದೇಶಿ ಕ್ರಿಕೆಟ್‌ ಟೂರ್ನಿಗಳಲ್ಲಿ ವ್ಯಾಟ್ಸನ್‌ ಒಟ್ಟು 700 ಪಂದ್ಯಗಳನ್ನು ಆಡಿದ್ದು 25 ಸಾವಿರಕ್ಕೂ ಅಧಿಕ ರನ್ ಗಳಿಸಿದ್ದಾರೆ. 600ಕ್ಕೂ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಥಂಡರ್ಸ್ ಪರವಾಗಿ ಸಾವಿರಕ್ಕೂ ಹೆಚ್ಚು ರನ್‌ ಗಳಿಸಿದ ಏಕೈಕ ಬ್ಯಾಟ್ಸ್‌ಮನ್ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.