ADVERTISEMENT

ರಣಜಿ ಸೆಮಿಫೈನಲ್ | ಶಾರ್ದೂಲ್ ಠಾಕೂರ್ ಶತಕ; ಮುಂಬೈಗೆ ಇನಿಂಗ್ಸ್ ಮುನ್ನಡೆ

ಸಾಯಿಕಿಶೋರ್‌ಗೆ ಆರು ವಿಕೆಟ್; ತನುಷ್, ಮುಷೀರ್ ಅರ್ಧಶತಕ

ಪಿಟಿಐ
Published 3 ಮಾರ್ಚ್ 2024, 20:30 IST
Last Updated 3 ಮಾರ್ಚ್ 2024, 20:30 IST
<div class="paragraphs"><p>ಮುಂಬೈ ತಂಡದ ಶಾರ್ದೂಲ್ ಠಾಕೂರ್&nbsp;</p></div>

ಮುಂಬೈ ತಂಡದ ಶಾರ್ದೂಲ್ ಠಾಕೂರ್ 

   

ಮುಂಬೈ: ಪ್ರಸಕ್ತ ರಣಜಿ ಟ್ರೋಫಿ ಟೂರ್ನಿಯಲ್ಲಿ ಮುಂಬೈ ತಂಡದ ಕೆಳಕ್ರಮಾಂಕದ ಬ್ಯಾಟರ್‌ಗಳು ಮಿಂಚಿದರು.

ಶಾರ್ದೂಲ್ ಠಾಕೂರ್ (109; 104ಎಸೆತ) ಅವರ ಶತಕ ಮತ್ತು ತನುಷ್ ಕೋಟ್ಯಾನ್ (ಬ್ಯಾಟಿಂಗ್ 74) ಅವರ ಅಮೋಘ ಆಟದ ಬಲದಿಂದ ಇಲ್ಲಿ ನಡೆಯುತ್ತಿರುವ ಸೆಮಿಫೈನಲ್‌ನಲ್ಲಿ ಮುಂಬೈ ತಂಡವು ತಮಿಳುನಾಡು ವಿರುದ್ಧ 207 ರನ್‌ಗಳ ಉತ್ತಮ ಮುನ್ನಡೆ ಸಾಧಿಸಿತು.

ADVERTISEMENT

ಬಾಂದ್ರಾ–ಕುರ್ಲಾ ಕಾಂಪ್ಲೆಕ್ಸ್‌ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ತಮಿಳುನಾಡು ತಂಡವು ಮೊದಲ ಇನಿಂಗ್ಸ್‌ನಲ್ಲಿ 146ಕ್ಕೆ ಆಲೌಟ್ ಆಗಿತ್ತು. ಅದಕ್ಕುತ್ತರವಾಗಿ ಎರಡನೇ ದಿನವಾದ ಭಾನುವಾರದ ಮುಕ್ತಾಯಕ್ಕೆ ಮುಂಬೈ ತಂಡವು 100 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 353 ರನ್ ಗಳಿಸಿದೆ.

ತಮಿಳುನಾಡು ತಂಡದ ನಾಯಕ ಆರ್‌. ಸಾಯಿಕಿಶೋರ್ (97ಕ್ಕೆ6) ಅವರ ಪರಿಣಾಮಕಾರಿ ಬೌಲಿಂಗ್‌ನಿಂದಾಗಿ ಮುಂಬೈ ತಂಡದ ಪ್ರಮುಖ ಬ್ಯಾಟರ್‌ಗಳು ಬೇಗನೆ ಔಟಾದರು. ಮುಷೀರ್ಖಾನ್ (55; 131ಎ) ಬಿಟ್ಟರೆ ಉಳಿದವರು ಹೆಚ್ಚು ರನ್ ಗಳಿಸಲಿಲ್ಲ. ತಂಡವು 106 ರನ್‌ಗಳಿಗೇ ಏಳು ವಿಕೆಟ್ ಕಳೆದುಕೊಂಡಿತ್ತು.

ಆದರೆ ಶಾರ್ದೂಲ್ ಎರಡು ಜೊತೆಯಾಟಗಳಲ್ಲಿ ತಂಡದ ಆತಂಕ ನಿವಾರಿಸಿದರು. ಎಂಟನೇ ವಿಕೆಟ್ ಜೊತೆಯಾಟದಲ್ಲಿ ಹಾರ್ದಿಕ್ ತಮೋರೆ ಅವರೊಂದಿಗೆ 105 ರನ್‌ ಸೇರಿಸಿದರು. ತನುಷ್ ಕೋಟ್ಯಾನ್ ಜೊತೆಗೆ 9ನೇ ವಿಕೆಟ್‌ಗೆ 79 ರನ್ ಸೇರಿಸಿದರು. ಶಾರ್ದೂಲ್ ಅವರ ಬ್ಯಾಟಿಂಗ್ ಟಿ20 ಮಾದರಿಯದಾಗಿತ್ತು.

ಟೂರ್ನಿಯ ಕಳೆದ ಪಂದ್ಯದಲ್ಲಿ 9 ಮತ್ತು 10ನೇ ಕ್ರಮಾಂಕದಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದ ತನುಷ್ ಮತ್ತು ತುಷಾರ್ ದೇಶಪಾಂಡೆ ಮತ್ತೊಮ್ಮೆ ಉತ್ತಮ ಬ್ಯಾಟಿಂಗ್‌ ನಡೆಸುತ್ತಿದ್ದಾರೆ. ಈ ಜೋಡಿ, ಅಂತಿಮ ವಿಕೆಟ್‌ಗೆ 63 ರನ್‌ ಗಳಿಸಿದ್ದು, ಮೂರನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದೆ.

ತನುಷ್ (74) ಮತ್ತು ತುಷಾರ್‌ (17) ರನ್‌ ಗಳಿಸಿದ್ದಾರೆ.

ಸಂಕ್ಷಿಪ್ತ ಸ್ಕೋರು

ಮೊದಲ ಇನಿಂಗ್ಸ್

ತಮಿಳುನಾಡು: 146

ಮುಂಬೈ: 100 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 353 (ಮುಷೀರ್ ಖಾನ್ 55, ಶಾರ್ದೂಲ್ ಠಾಕೂರ್ 109, ತನುಷ್ ಕೋಟ್ಯಾನ್  ಬ್ಯಾಟಿಂಗ್ 74, ತುಷಾರ್ ದೇಶಪಾಂಡೆ ಬ್ಯಾಟಿಂಗ್ 17, ಆರ್. ಸಾಯಿಕಿಶೋರ್ 97ಕ್ಕೆ6)

ಹಿಮಾಂಶು ಮಂತ್ರಿ ಶತಕ

ನಾಗ್ಪುರ: ತಾಳ್ಮೆ ಮತ್ತು ಉತ್ತಮ ಕೌಶಲಗಳ ಬ್ಯಾಟಿಂಗ್ ಮಾಡಿದ ಹಿಮಾಂಶು ಮಂತ್ರಿ ಶತಕದ ಬಲದಿಂದ ಮಧ್ಯಪ್ರದೇಶ ತಂಡವು ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿತು.

ಮೊದಲು ಬ್ಯಾಟಿಂಗ್ ಮಾಡಿದ್ದ ವಿದರ್ಭ  ತಂಡವು 170 ರನ್‌ಗಳಿಸಿತ್ತು. ಮಂತ್ರಿ (126; 265 ಎ 4X13 6X1) ಬ್ಯಾಟಿಂಗ್‌ನಿಂದಾಗಿ ಮಧ್ಯಪ್ರದೇಶ ತಂಡವು 94.3 ಓವರ್‌ಗಳಲ್ಲಿ 252 ರನ್ ಗಳಿಸಿತು. ಇದರೊಂದಿಗೆ 82 ರನ್‌ಗಳ ಮುನ್ನಡೆ ಸಾಧಿಸಿತು.

ಎರಡನೇ ಇನಿಂಗ್ಸ್ ಆರಂಭಿಸಿರುವ ವಿದರ್ಭ ತಂಡವು 4 ಓವರ್‌ಗಳಲ್ಲಿ 1 ವಿಕೆಟ್‌ಗೆ 13 ರನ್ ಗಳಿಸಿದೆ.

ಸಂಕ್ಷಿಪ್ತ ಸ್ಕೋರು

ಮೊದಲ ಇನಿಂಗ್ಸ್: ವಿದರ್ಭ: 170

ಮಧ್ಯಪ್ರದೇಶ: 94.3 ಓವರ್‌ಗಳಲ್ಲಿ 252 (ಹಿಮಾಂಶು ಮಂತ್ರಿ 126 ಹರ್ಷ್ ಗೌಳಿ 25 ಸಾಗರ್ ಸೋಳಂಕಿ 26 ಸಾರಾಂಶ್ ಜೈನ್ 30 ಉಮೇಶ್ ಯಾದವ್ 40ಕ್ಕೆ3 ಯಶ್ ಠಾಕೂರ್ 51ಕ್ಕೆ3 ಅಕ್ಷಯ್ ವಾಖರೆ 68ಕ್ಕೆ2)

ಎರಡನೇ ಇನಿಂಗ್ಸ್

ವಿದರ್ಭ: 4 ಓವರ್‌ಗಳಲ್ಲಿ 1 ವಿಕೆಟ್‌ಗೆ 13 (ಧ್ರುವ ಶೋರೆ ಬ್ಯಾಟಿಂಗ್ 10 ಆವೇಶ್ ಖಾನ್ 2 ರನ್‌ಗೆ 1) 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.