ದುಬೈ: ಭಾರತದ ನಿತಿನ್ ಮೆನನ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಅಂಪೈರ್‌ಗಳ ಎಲಿಟ್ ಪ್ಯಾನೆಲ್‌ನಲ್ಲಿ ಐದನೇ ಬಾರಿ ಸ್ಥಾನ ಗಳಿಸಿದ್ದಾರೆ. ಬಾಂಗ್ಲಾದೇಶದ ಬಾಂಗ್ಲಾದೇಶದ ಶರ್ಫುದ್ದೌಲಾ ಇಬ್ನೆ ಶಹೀದ್ ಈ ಬಾರಿ ಸ್ಥಾನ ಪಡೆದಿದ್ದಾರೆ. ಈ ಗೌರವಕ್ಕೆ ಪಾತ್ರರಾದ ಬಾಂಗ್ಲಾದ ಮೊದಲ ಅಂಪೈರ್ ಅವರಾಗಿದ್ದಾರೆ.
ಇಂದೋರ್‌ನ ಮೆನನ್ 12 ಸದಸ್ಯರ ಪ್ಯಾನಲ್‌ನಲ್ಲಿರುವ ಏಕೈಕ ಭಾರತೀಯನಾಗಿದ್ದಾರೆ. 40 ವರ್ಷದ ಮೆನನ್ ಅವರು ಎಸ್.ರವಿ ಮತ್ತು ಎಸ್. ವೆಂಕಟರಾಘವನ್ ನಂತರ ಸ್ಥಾನ ಪಡೆದಿರುವ ಭಾರತದ ಅಂಪೈರ್ ಆಗಿದ್ದಾರೆ.
ಮೆನನ್ ಅವರು ಈತನಕ ಒಟ್ಟಾರೆ 122 ಪಂದ್ಯಗಳಿಗೆ (23 ಟೆಸ್ಟ್, 58 ಏಕದಿನ ಮತ್ತು 41 ಟಿ20) ಆನ್ ಫೀಲ್ಡ್ ಅಂಪೈರ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ಜೂನ್‌ನಲ್ಲಿ ಅಮೆರಿಕ– ವೆಸ್ಟ್‌ಇಂಡೀಸ್‌ನಲ್ಲಿ ನಡೆಯುವ ಟಿ20 ವಿಶ್ವಕಪ್‌ನಲ್ಲಿ ವೆಂಕಟರಾಘವನ್ (125 ಪಂದ್ಯ) ಅವರ ದಾಖಲೆಯನ್ನು ಮೀರಿಸುವ ನಿರೀಕ್ಷೆಯಿದೆ.
ದಕ್ಷಿಣ ಆಫ್ರಿಕಾದ ಅಂಪೈರ್ ಮರಾಯಸ್ ಎರಾಸ್ಮಸ್ ಅವರು ನಿವೃತ್ತಿ ಘೋಷಿಸಿರುವುದರಿಂದ ಅವರ ಸ್ಥಾನಕ್ಕೆ ಶರ್ಫುದ್ದೌಲಾ ಅವಕಾಶ ಪಡೆದಿದ್ದಾರೆ. ಅವರು 2006ರಿಂದ ಅಂತರರಾಷ್ಟ್ರೀಯ ಪ್ಯಾನೆಲ್‌ನಲ್ಲಿದ್ದಾರೆ. ಅವರು 10 ಟೆಸ್ಟ್, 63 ಏಕದಿನ ಮತ್ತು 44 ಟಿ20 ಪಂದ್ಯಗಳಲ್ಲಿ ಆನ್ ಫೀಲ್ಡ್ ಅಂಪೈರ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಈ ಮಧ್ಯೆ ಐಸಿಸಿ ಮ್ಯಾಚ್ ರೆಫರಿ ಎಲಿಟ್ ಪ್ಯಾನೆಲ್‌ನ ಸದಸ್ಯರ ಸಂಖ್ಯೆಯನ್ನು ಏಳರಿಂದ ಆರಕ್ಕೆ ಇಳಿಸಲಾಗಿದೆ. ಕ್ರಿಸ್ ಬ್ರಾಡ್ ಅವರನ್ನು ಕೈಬಿಡಲಾಗಿದೆ. ಆದರೆ, ಭಾರತದ ಜಾವಗಲ್ ಶ್ರೀನಾಥ್ ಅವರು ಈ ಪ್ಯಾನಲ್‌ನಲ್ಲಿ ಮುಂದುವರಿದಿದ್ದಾರೆ.
2003ರಿಂದ ಪ್ಯಾನೆಲ್‌ನಲ್ಲಿರುವ ಬ್ರಾಡ್ 123 ಟೆಸ್ಟ್, 361 ಏಕದಿನ ಮತ್ತು 135 ಟಿ20 ಮತ್ತು 15 ಮಹಿಳಾ ಟಿ20 ಪಂದ್ಯಗಳಿಗೆ ರೆಫರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಪುನಾರಚನಾ ಪ್ರಕ್ರಿಯೆಯ ಭಾಗವಾಗಿ ಬ್ರಾಡ್ ಅವರನ್ನು ಕೈಬಿಡಲಾಗಿದೆ ಎಂದು ಐಸಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮ್ಯಾಚ್ ರೆಫರಿಗಳ ಎಲಿಟ್ ಪ್ಯಾನೆಲ್: ಜಾವಗಲ್ ಶ್ರೀನಾಥ್ (ಭಾರತ), ಡೇವಿಡ್ ಬೂನ್ (ಆಸ್ಟ್ರೇಲಿಯಾ), ಜೆಫ್ ಕ್ರೋವ್ (ನ್ಯೂಜಿಲೆಂಡ್), ರಂಜನ್ ಮದುಗಲೆ (ಶ್ರೀಲಂಕಾ), ಆ್ಯಂಡ್ರ್ಯೂ ಪೈಕ್ರಾಫ್ಟ್ (ಜಿಂಬಾಬ್ವೆ), ರಿಚಿ ರಿಚರ್ಡ್‌ಸನ್ (ವೆಸ್ಟ್ ಇಂಡೀಸ್).
ಅಂಪೈರ್‌ಗಳ ಎಲಿಟ್ ಪ್ಯಾನೆಲ್: ಕುಮಾರ ಧರ್ಮಸೇನಾ (ಶ್ರೀಲಂಕಾ), ಕ್ರಿಸ್ಟೋಫರ್ ಗಫಾನಿ (ನ್ಯೂಜಿಲೆಂಡ್), ಮೈಕಲ್ ಗಾಫ್ (ಇಂಗ್ಲೆಂಡ್), ಆಡ್ರಿಯನ್ ಹೋಲ್ಡ್‌ಸ್ಟಾಕ್ (ದಕ್ಷಿಣ ಆಫ್ರಿಕಾ), ರಿಚರ್ಡ್ ಇಲಿಂಗ್‌ವರ್ತ್ (ಇಂಗ್ಲೆಂಡ್), ರಿಚರ್ಡ್ ಕೆಟಲ್‌ಬರೋ (ಇಂಗ್ಲೆಂಡ್), ನಿತಿನ್ ಮೆನನ್ (ಭಾರತ ), ಎಹಸಾನ್ ರಝಾ (ಪಾಕಿಸ್ತಾನ), ಪಾಲ್ ರೀಫೆಲ್ (ಆಸ್ಟ್ರೇಲಿಯಾ), ಶರ್ಫುದ್ದೌಲಾ ಇಬ್ನೆ ಶಹೀದ್ (ಬಾಂಗ್ಲಾದೇಶ), ರಾಡ್ನಿ ಟಕರ್ (ಆಸ್ಟ್ರೇಲಿಯಾ), ಜೋಯಲ್ ವಿಲ್ಸನ್ (ವೆಸ್ಟ್ ಇಂಡೀಸ್).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.