ದುಬೈ: ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐದು ಟೆಸ್ಟ್‌ಗಳ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ವಿರಾಟ್ ಕೊಹ್ಲಿ ತಮ್ಮ ಕಳಪೆ ಫಾರ್ಮ್‌ನಿಂದ ಹೊರಬರುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲೂ ಕೊಹ್ಲಿ ವೈಫಲ್ಯ ಅನುಭವಿಸಿದ್ದಾರೆ. ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳಲ್ಲಿ ಕೇವಲ 21.33ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಕೇವಲ ಒಂದು ಅರ್ಧಶತಕವನ್ನು ಮಾತ್ರ ಗಳಿಸಿದ್ದಾರೆ.
ಆಸ್ಟ್ರೇಲಿಯಾಗೆ ಪರೋಕ್ಷ ಎಚ್ಚರಿಕೆ ನೀಡಿದ ಶಾಸ್ತ್ರಿ, ಕೊಹ್ಲಿ ಅವರು ಬ್ಯಾಟಿಂಗ್ ಮಾಡಲು ಮತ್ತು ರನ್ ಗಳಿಸಲು ಇಷ್ಟಪಡುವ ದೇಶಕ್ಕೆ ಮರಳಿದ್ದಾರೆ ಎಂದು ಹೇಳಿದ್ದಾರೆ.
2011–12ರಲ್ಲಿ ಆಸ್ಟ್ರೇಲಿಯಾಕ್ಕೆ ತಮ್ಮ ಮೊದಲ ಪ್ರವಾಸ ಕೈಗೊಂಡಿದ್ದ ಕೊಹ್ಲಿ ಅವರ ಅಮೋಘ ಬ್ಯಾಟಿಂಗ್ ಅನ್ನು ಶಾಸ್ತ್ರಿ ಮೆಲುಕು ಹಾಕಿದ್ದಾರೆ. ಅಡಿಲೇಡ್‌ನಲ್ಲಿ ಅವರು ಸಿಡಿಸಿದ್ದ ಆಕರ್ಷಕ ಶತಕವನ್ನು ನೆನಪಿಸಿದ್ದಾರೆ. 2014ರ ಪ್ರವಾಸದಲ್ಲಿ ನಾಲ್ಕು ಟೆಸ್ಟ್‌ಗಳಿಂದ 692 ರನ್‌ಗಳು ಮತ್ತು 2018–19ರಲ್ಲಿ ಪರ್ತ್‌ನಲ್ಲಿ ಆಕರ್ಷಕ 123 ರನ್‌ಗಳನ್ನು ಒಳಗೊಂಡಂತೆ ಆಸ್ಟ್ರೇಲಿಯಾದಲ್ಲಿ ಕೊಹ್ಲಿ ಅವರ ಅದ್ಭುತ ಪ್ರದರ್ಶನಗಳನ್ನು ಶಾಸ್ತ್ರಿ ಉಲ್ಲೇಖಿಸಿದ್ದಾರೆ.
ವಿರಾಟ್ ಕೊಹ್ಲಿಯವರ ತಾಳ್ಮೆಯ ಆಟದ ಬಗ್ಗೆ ಪ್ರತಿಕ್ರಿಯಿಸಿದ ಶಾಸ್ತ್ರಿ, ಪಂದ್ಯದ ಆರಂಭದಲ್ಲಿ ಅದು ಅತ್ಯಂತ ಪ್ರಮುಖ. ಆತುರ ಮಾಡಿಕೊಳ್ಳದೇ ತನ್ನದೇ ರೀತಿಯಲ್ಲಿ ರನ್ ಗತಿ ಹೆಚ್ಚಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.