ADVERTISEMENT

ಆಸ್ಟ್ರೇಲಿಯಾದ ಶಾನ್ ಮಾರ್ಷ್ ಕ್ರಿಕೆಟ್‌ಗೆ ವಿದಾಯ

ಪಿಟಿಐ
Published 14 ಜನವರಿ 2024, 13:56 IST
Last Updated 14 ಜನವರಿ 2024, 13:56 IST
 ಶಾನ್ ಮಾರ್ಷ್
 ಶಾನ್ ಮಾರ್ಷ್   

ಸಿಡ್ನಿ (ಪಿಟಿಐ): ಆಸ್ಟ್ರೇಲಿಯಾದ ಕ್ರಿಕೆಟಿಗ ಶಾನ್ ಮಾರ್ಷ್ ಅವರು ಭಾನುವಾರ ವೃತ್ತಿಪರ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಸದ್ಯ ಬಿಗ್ ಬ್ಯಾಷ್ ಲೀಗ್‌ನಲ್ಲಿ ಮೆಲ್ಬರ್ನ್ ರೆನೆಗೇಡ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಈ ಎಡಗೈ ಬ್ಯಾಟರ್‌, ಬುಧವಾರ ಸಿಡ್ನಿ ಥಂಡರ್ ವಿರುದ್ಧ ಕೊನೆಯ ಪಂದ್ಯವನ್ನು ಆಡಲಿದ್ದಾರೆ.

2008ರಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಪದಾರ್ಪಣೆ ಮಾಡಿದ್ದ ಅವರು, 2019ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಶ್ರೀಲಂಕಾದ ವಿರುದ್ಧ ಕೊನೆಯ ಅಂತರರಾಷ್ಟ್ರೀಯ ಪಂದ್ಯವನ್ನು ಓವಲ್‌ನಲ್ಲಿ ಆಡಿದ್ದರು. ಅವರು 38 ಟೆಸ್ಟ್ ಪಂದ್ಯಗಳಲ್ಲಿ 6 ಶತಕ ಹಾಗೂ 10 ಅರ್ಧಶತಕಗಳೊಂದಿಗೆ ಒಟ್ಟು 2265 ರನ್ ಗಳಿಸಿದ್ದಾರೆ. 73 ಏಕದಿನ ಪಂದ್ಯಗಳಲ್ಲಿ 7 ಶತಕ ಹಾಗೂ 15 ಅರ್ಧಶತಕಗಳ ಸಹಿತ 2,773 ರನ್ ಕಲೆ ಹಾಕಿದ್ದಾರೆ. ಅಲ್ಲದೆ, 15 ಟಿ20 ಪಂದ್ಯಗಳಲ್ಲಿ ಆಸೀಸ್‌ ತಂಡವನ್ನು ಪ್ರತಿನಿಧಿಸಿದ್ದರು.

40 ವರ್ಷದ ಶಾನ್ ಅವರು ಪ್ರಥಮ ದರ್ಜೆ ಕ್ರಿಕೆಟ್ ಹಾಗೂ ಫ್ರಾಂಚೈಸಿ ಲೀಗ್​ಗಳಲ್ಲಿ ಅವರು ಆಟ ಮುಂದುವರಿಸಿದ್ದರು. 

ADVERTISEMENT

ಚೊಚ್ಚಲ ಐಪಿಎಲ್‌ನಲ್ಲಿ ಆರೆಂಜ್‌ ಕ್ಯಾಪ್‌: 2008ರ ಚೊಚ್ಚಲ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಅತ್ಯಧಿಕ ರನ್‌ ಗಳಿಸಿ, ಆರೆಂಜ್ ಕ್ಯಾಪ್ ಪಡೆದ ದಾಖಲೆ ಶಾನ್ ಮಾರ್ಷ್ ಹೆಸರಿನಲ್ಲಿದೆ. ಅಂದು ಕಿಂಗ್ಸ್ ಇಲೆವೆನ್ ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್​) ಪರ 11 ಪಂದ್ಯಗಳಲ್ಲಿ ಅವರು 1 ಶತಕ ಹಾಗೂ 5 ಅರ್ಧಶತಕಗಳೊಂದಿಗೆ 616 ರನ್ ಗಳಿಸಿ ಮಿಂಚಿದ್ದರು. ಅದೇ ತಂಡದ ಪರ 9 ಆವೃತ್ತಿಗಳಲ್ಲಿ 71 ಪಂದ್ಯಗಳನ್ನು ಆಡಿದ್ದಾರೆ. 2017ರಲ್ಲಿ ಕಿಂಗ್ಸ್ ತಂಡವು ಮಾರ್ಷ್ ಅವರನ್ನು ಕೈಬಿಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.