ಬೆಂಗಳೂರು: ಸದಾ ಹಸನ್ಮುಖಿ, 'ಮಿಸ್ಟರ್ ಐಸಿಸಿ' ಮತ್ತು 'ಗಬ್ಬರ್' ಖ್ಯಾತಿಯ ಭಾರತೀಯ ಕ್ರಿಕೆಟಿಗ ಎಡಗೈ ಆರಂಭಿಕ ಬ್ಯಾಟರ್ ಶಿಖರ್ ಧವನ್, ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.
ಐಸಿಸಿ ಟೂರ್ನಿಗಳಲ್ಲಿ 'ಆಪತ್ಭಾಂದವ' ಎನಿಸಿರುವ ಧವನ್, ಭಾರತೀಯ ಕ್ರಿಕೆಟ್‌ಗೆ ತಂಡಕ್ಕೆ ಅಪಾರ ಕೊಡುಗೆಯನ್ನು ಸಲ್ಲಿಸಿದ್ದಾರೆ.
ಕ್ರಿಕೆಟ್ ಅಂದರೆ ಸಭ್ಯರ ಆಟ ಎಂಬುದಕ್ಕೆ ತಕ್ಕಂತೆ ಸದಾ ಕ್ರೀಡಾಸ್ಫೂರ್ತಿ ಮೆರೆಯುವ ಧವನ್, ಅಪಾರ ಅಭಿಮಾನಿಗಳ ಬಳಗವನ್ನು ಕಟ್ಟಿಕೊಂಡಿದ್ದಾರೆ.
ವೈಯಕ್ತಿಕ ದಾಖಲೆಗೂ ಮಿಗಿಲಾಗಿ ಯಾವುದೇ ಸ್ವಾರ್ಥ ಇಲ್ಲದೆ ತಂಡಕ್ಕಾಗಿ ತನ್ನೆಲ್ಲವನ್ನು ಅರ್ಪಿಸುವ ಮೂಲಕ ಧವನ್ ಹೆಚ್ಚಿನ ಜನಪ್ರಿಯತೆ ಗಳಿಸಿದ್ದಾರೆ. 'ತೊಡೆ ತಟ್ಟಿ' ಸಂಭ್ರಮಿಸುವುದು ಧವನ್ ಅವರ ಟ್ರೇಡ್‌ಮಾರ್ಕ್ ಆಗಿತ್ತು.
ಆಕ್ರಮಣಕಾರಿ ಆಟ ಮತ್ತು ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರೊಂದಿಗಿನ ಜೊತೆಯಾಟ ಮತ್ತು ದಾಖಲೆಗಳು ಕ್ರೀಡಾಪ್ರೇಮಿಗಳ ಹೃದಯದಲ್ಲಿ ಅಚ್ಚಳಿಯದಂತೇ ಉಳಿದಿದೆ. ಕೊನೆಗೂ 38ನೇ ವರ್ಷದಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದಾರೆ.
2008ರಲ್ಲಿ ವಿಶಾಖಪಟ್ಟಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಪದಾರ್ಪಣೆ ಪಂದ್ಯದಲ್ಲೇ ಧವನ್ ಶೂನ್ಯಕ್ಕೆ ಔಟ್ ಆಗಿದ್ದರು. ಆದರೆ ಆ ಬಳಿಕ ಪ್ರತಿಯೊಂದು ಸವಾಲುಗಳನ್ನು ಮೆಟ್ಟಿ ನಿಲ್ಲುವಲ್ಲಿ ಯಶಸ್ವಿಯಾಗಿದ್ದರು.
ಐದು ವರ್ಷಗಳ ನಂತರ 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಧವನ್, ಚೊಚ್ಚಲ ಪಂದ್ಯದಲ್ಲೇ 187 ರನ್ ಗಳಿಸುವ ಮೂಲಕ ಅಬ್ಬರಿಸಿದ್ದರು. 174 ಎಸೆತಗಳಲ್ಲಿ 33 ಬೌಂಡರಿ ಹಾಗೂ ಎರಡು ಸಿಕ್ಸರ್ ಬಾರಿಸಿದ್ದರು. ಈ ಪೈಕಿ ಕೇವಲ 85 ಎಸೆತಗಳಲ್ಲಿ ಶತಕ ಗಳಿಸಿದ್ದರು.
2013ರಲ್ಲಿ ಭಾರತ ಚಾಂಪಿಯನ್ಸ್ ಟ್ರೋಫಿ ಗೆಲ್ಲುವಲ್ಲಿ ಧವನ್ ಮಹತ್ವದ ಪಾತ್ರ ವಹಿಸಿದ್ದರು. ಅಲ್ಲದೆ ಎಲ್ಲ ಮೂರು ಮಾದರಿಗಳಲ್ಲೂ ಭಾರತ ತಂಡ ಅವಿಭಾಜ್ಯ ಅಂಗವಾಗಿದ್ದರು.
2015ರ ಏಕದಿನ ವಿಶ್ವಕಪ್‌ನಲ್ಲಿ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಧವನ್ 137 ರನ್ ಗಳಿಸುವ ಮೂಲಕ ಮಿಂಚಿದ್ದರು.
2019ರ ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 177 ರನ್ ಗಳಿಸುವ ಮೂಲಕ ಮಗದೊಮ್ಮೆ, ಐಸಿಸಿ ಟೂರ್ನಿಯಲ್ಲಿ ಯಶಸ್ಸು ಗಳಿಸಿದ್ದರು.
167 ಏಕದಿನ ಪಂದ್ಯಗಳಲ್ಲಿ ಧವನ್ 17 ಶತಕ ಹಾಗೂ 39 ಅರ್ಧಶತಕಗಳ ನೆರವಿನಿಂದ 44.11ರ ಸರಾಸರಿಯಲ್ಲಿ ಒಟ್ಟು 6,793 ರನ್ ಗಳಿಸಿದ್ದಾರೆ. ಹಾಗೆಯೇ 34 ಟೆಸ್ಟ್ ಪಂದ್ಯಗಳಲ್ಲಿ 40.61ರ ಸರಾಸರಿಯಲ್ಲಿ 2,315 ರನ್ ಪೇರಿಸಿದ್ದರು. ಇದರಲ್ಲಿ ಏಳು ಶತಕ ಹಾಗೂ ಐದು ಅರ್ಧಶತಕ ಒಳಗೊಂಡಿವೆ.
ಪ್ರಮುಖ ಸಾಧನೆಗಳು:
187:
ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ 187 ರನ್ ಸಾಧನೆ
44.11:
ಏಕದಿನದಲ್ಲಿ ವಿರಾಟ್ ಕೊಹ್ಲಿ (58.18), ಮಹೇಂದ್ರ ಸಿಂಗ್ ಧೋನಿ (50.23), ರೋಹಿತ್ ಶರ್ಮಾ (49.16), ಸಚಿನ್ ತೆಂಡೂಲ್ಕರ್ (44.83) ಬಳಿಕ ಅತ್ಯುತ್ತಮ ಸರಾಸರಿ ಕಾಪಾಡಿಕೊಂಡಿರುವ ಭಾರತದ ಬ್ಯಾಟರ್. ಈ ಪಟ್ಟಿಯಲ್ಲಿ ಸೌರವ್ ಗಂಗೂಲಿ (40.95) ಅವರನ್ನು ಮೀರಿಸಿದ್ದಾರೆ.
65.15:
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಧವನ್ ಗಮನಾರ್ಹ 65.15ರ ಬ್ಯಾಟಿಂಗ್ ಸರಾಸರಿ ಕಾಪಾಡಿಕೊಂಡಿದ್ದಾರೆ. 20 ಇನಿಂಗ್ಸ್‌ಗಳಲ್ಲಿ 65.15ರ ಸರಾಸರಿಯಲ್ಲಿ 1,238 ರನ್ ಗಳಿಸಿದ್ದಾರೆ. ಇದರಲ್ಲಿ ಆರು ಶತಕಗಳನ್ನು ಒಳಗೊಂಡಿವೆ. ಆ ಮೂಲಕ ರನ್ ಮೆಷಿನ್ ಖ್ಯಾತಿಯ ವಿರಾಟ್ ಕೊಹ್ಲಿ (64.55) ಅವರನ್ನೇ ಹಿಂದಿಕ್ಕಿದ್ದಾರೆ.
18:
ಧವನ್ ಹಾಗೂ ರೋಹಿತ್ ಜೋಡಿ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ವಿಕೆಟ್‌ಗೆ 18 ಬಾರಿ ಶತಕದ ಜೊತೆಯಾಟದ ದಾಖಲೆ ಬರೆದಿದೆ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ ಜೋಡಿ (21 ಶತಕ) ಮುಂಚೂಣಿಯಲ್ಲಿದೆ. ಧವನ್-ರೋಹಿತ್ ಜೋಡಿ ಮೊದಲ ವಿಕೆಟ್‌ಗೆ ಒಟ್ಟು 5,148 ರನ್ ಪೇರಿಸಿದೆ.
100:
2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ 100ನೇ ಏಕದಿನ ಪಂದ್ಯದಲ್ಲಿ ಧವನ್ ಶತಕದ ಸಾಧನೆ ಮಾಡಿದರು.
12:
ಇದು ಏಕದಿನದಲ್ಲಿ ವಿದೇಶ ನೆಲದಲ್ಲಿ ಧವನ್ ಗಳಿಸಿರುವ ಶತಕಗಳ ಅಂಕಿ. ಆ ಮೂಲಕ ಭಾರತ ಸೇರಿದಂತೆ ವಿದೇಶಿ ಪಿಚ್‌ನಲ್ಲೂ ಪರಿಣಾಮಕಾರಿ ಎನಿಸಿಕೊಂಡಿದ್ದರು.
6,769:
ಐಪಿಎಲ್‌ನಲ್ಲಿ ಧವನ್ ಒಟ್ಟು 6,769 ರನ್ ಗಳಿಸಿದ್ದಾರೆ. ಆ ಮೂಲಕ ವಿರಾಟ್ ಕೊಹ್ಲಿ ನಂತರದ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಐದು ಐಪಿಎಲ್ ಆವೃತ್ತಿಗಳಲ್ಲಿ 500ಕ್ಕೂ ಹೆಚ್ಚು ರನ್ (2012, 2016, 2019, 2020, 2021) ಸಾಧನೆ ಮಾಡಿದ್ದರು.
1759:
ಅಂತರರಾಷ್ಟ್ರೀಯ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 68 ಪಂದ್ಯಗಳಲ್ಲಿ ಧವನ್ ಒಟ್ಟು 1,759 ರನ್ ಗಳಿಸಿದ್ದಾರೆ.
ಭಾರತಕ್ಕೆ ಆಡಲು ಅವಕಾಶ ಸಿಕ್ಕಿಲ್ಲ ಎಂದು ಕೊರಗದಿರಿ. ದೇಶಕ್ಕಾಗಿ ಆಡಿದ್ದೀರಿ ಎಂಬುದರ ಬಗ್ಗೆ ಖುಷಿಪಟ್ಟುಕೊಳ್ಳಿ. ನನ್ನ ಪಾಲಿಗಿದು ಮಹತ್ತರ ಸಾಧನೆ.-ತಂಡದಲ್ಲಿ ಅವಕಾಶ ಸಿಕ್ಕದಿದ್ದಾಗ ಶಿಖರ್ ಧವನ್ ನೀಡಿದ್ದ ಹೇಳಿಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.