ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಅವರು ಟಿವಿ ಕಾರ್ಯಕ್ರಮದಿಂದ ಹೊರನಡೆದಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಸರ್ಕಾರಿ ಸ್ವಾಮ್ಯದ ಪಿಟಿವಿಯಲ್ಲಿ ಮಂಗಳವಾರ ಪಾಕಿಸ್ತಾನ – ನ್ಯೂಜಿಲೆಂಡ್ ಪಂದ್ಯದ ಬಗ್ಗೆ ಚರ್ಚೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಪಂದ್ಯದ ಬಗ್ಗೆ ವಿಶ್ಲೇಷಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಕಾರ್ಯಕ್ರಮದ ವಿಶ್ಲೇಷಕ, ನಿರೂಪಕ ನೊಮನ್ ನಿಯಾಜ್ ಅವರು ತಮ್ಮನ್ನು ಕೆಟ್ಟದಾಗಿ ನಡೆಸಿಕೊಂಡರು ಮತ್ತು ಅವಮಾನಿಸಿದ್ದಾರೆ ಎಂದು ಶೋಯೆಬ್ ಅಖ್ತರ್ ಆರೋಪಿಸಿದ್ದಾರೆ.
ವಿವಿಯನ್ ರಿಚರ್ಡ್ಸ್, ಡೇವಿಡ್ ಗೋವರ್, ರಶೀದ್ ಲತೀಫ್, ಉಮರ್ ಗುಲ್, ಅಕೀಬ್ ಜಾವೇದ್ ಪಾಕಿಸ್ತಾನ ಮಹಿಳಾ ತಂಡದ ಮಾಜಿ ನಾಯಕಿ ಸನಾ ಮಿರ್ ಅವರು ಸಹ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು.
ನೊಮನ್ ನಿಯಾಜ್ ಕೆಲವು ಮಾತುಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ಅಖ್ತರ್, ಮೈಕ್ರೊಫೋನ್ ತೆಗೆದು ತಕ್ಷಣ ಕಾರ್ಯಕ್ರಮದಿಂದ ಹೊರಟು ಹೋಗಿದ್ದಾರೆ. ಆದರೆ, ನೊಮನ್ ನಿಯಾಜ್ ಅವರು ಅಖ್ತರ್ ಅವರನ್ನು ಮರಳಿ ಕರೆಯುವ ಯಾವುದೇ ಪ್ರಯತ್ನ ಮಾಡಲಿಲ್ಲ. ಅಲ್ಲದೆ ಘಟನೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಎಂದಿನಂತೆ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು.
ಟಿವಿ ಕಾರ್ಯಕ್ರಮದಿಂದ ಅಖ್ತರ್ ಹೊರನಡೆದ ಬೆನ್ನಲ್ಲೇ ಇದೇ ವಿಚಾರವಾಗಿ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದ್ದು, ಪರ– ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.
ನಿಯಾಜ್ ಅವರು ಕೂಡಲೇ ಅಖ್ತರ್ ಬಳಿ ಕ್ಷಮೆಯಾಚಿಸಬೇಕು ಎಂದು ಹಲವರು ಒತ್ತಾಯಿಸಿದ್ದಾರೆ. ಟಿ–20 ವಿಶ್ವಕಪ್‌ನಲ್ಲಿ ಮಂಗಳವಾರ ನಡೆದ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ಐದು ವಿಕೆಟ್‌ಗಳ ಜಯ ಸಾಧಿಸಿದೆ.
ಘಟನೆ ಕುರಿತು ಬುಧವಾರ ಟ್ವಿಟರ್‌ನಲ್ಲಿ ಸ್ಪಷ್ಟನೆ ಕೊಟ್ಟಿರುವ ಅಖ್ತರ್, ‘ಟಿವಿ ಕಾರ್ಯಕ್ರಮದಿಂದ ಹೊರಬಂದಿರುವ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಭಾವಿಸಿದ್ದೇನೆ. ನಿರೂಪಕ ನೊಮನ್ ನಿಯಾಜ್ ಅವರು ಕಾರ್ಯಕ್ರಮದ ನೇರ ಪ್ರಸಾರದ ವೇಳೆ ಅಸಭ್ಯವಾಗಿ ವರ್ತಿಸಿದ್ದರು. ಜತೆಗೆ ನನ್ನನ್ನು ಕಾರ್ಯಕ್ರಮದಿಂದ ಹೊರಹೋಗುವಂತೆ ಸೂಚಿಸಿದರು. ಇದು ನನಗೆ ಬೇಸರ ಮೂಡಿಸಿತು. ಹಾಗಾಗಿ ನಾನು ಕಾರ್ಯಕ್ರಮದಿಂದ ಹೊರಬಂದಿದ್ದೇನೆ’ ಎಂದು ಅಖ್ತರ್ ಟ್ವೀಟ್ ಮಾಡಿದ್ದಾರೆ.
46 ವರ್ಷ ವಯಸ್ಸಿನ ಶೋಯಬ್, ಪಾಕಿಸ್ತಾನದ ಪರ 46 ಟೆಸ್ಟ್, 163 ಏಕದಿನ ಹಾಗೂ 15 ಟ್ವೆಂಟಿ–20 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 178, 247 ಹಾಗೂ 19 ವಿಕೆಟ್‌ಗಳನ್ನು ಉರುಳಿಸಿದ್ದಾರೆ. 2008ರ ಐಪಿಎಲ್‌ನಲ್ಲಿ ಮೂರು ಪಂದ್ಯ ಆಡಿದ್ದ ಅವರು ಐದು ವಿಕೆಟ್ ಕಬಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.