ಕಲಬುರಗಿ: ‘ಅಪ್ಪನೊಂದಿಗೆ ಕ್ರಿಕೆಟ್ ಮೈದಾನಕ್ಕೆ ಹೋಗಿ, ಸುಮ್ಮನೆ ಬಾಲ್ ಎಸೆಯುತ್ತಿದ್ದ ಮೊಮ್ಮಗಳು ಮುಂದೊಂದು ದಿನ ಭಾರತದ ರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡ ಪ್ರತಿನಿಧಿಸಿ, ಆರ್‌ಸಿಬಿಗೆ ಕಪ್ ಗೆದ್ದು ಕೊಡುತ್ತಾಳೆ ಅಂದುಕೊಂಡಿರಲಿಲ್ಲ. ಇವತ್ತು ಆಕೆಯಿಂದ ಹಿಂದುಳಿದ ಜೇವರ್ಗಿ ತಾಲ್ಲೂಕಿನ ಕೋಳಕೂರು ಇಂಡಿಯಾ ಮ್ಯಾಪ್‌ನಲ್ಲಿ ಗುರುತಿಸಿಕೊಂಡಾದ್ ನೋಡ್ರಿ...’
ಹೀಗೆ ಹೆಮ್ಮೆಯಿಂದ ನುಡಿದಿದ್ದು ಕರ್ನಾಟಕದ ಕ್ರಿಕೆಟ್ ಆಟಗಾರ್ತಿ ಶ್ರೇಯಾಂಕ ಪಾಟೀಲ ಅವರ ಅಜ್ಜ ಎ.ಎಂ.ಪಾಟೀಲ. ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಎರಡನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ (ಆರ್‌ಸಿಬಿ) ಸ್ಪಿನ್ ಮೋಡಿಯಿಂದ ಕಪ್ ಗೆದ್ದು ಕೊಡುವಲ್ಲಿ ಅಮೋಘ ಪ್ರದರ್ಶನ ನೀಡಿದ್ದು ಇದೇ ಶ್ರೇಯಾಂಕ ಪಾಟೀಲ. ಆಕೆಯ ಅಜ್ಜನ ಊರಲ್ಲಿ ಸಂಭ್ರಮ ಮನೆ ಮಾಡಿದೆ. ಮನೆಗೆ ಬಂದವರು, ಫೋನ್ ಮಾಡಿದವರೆಲ್ಲ, ‘ಶ್ರೇಯಾಂಕ ಊರಿಗೆ ಬರುವುದು ಯಾವಾಗ?’ ಎಂಬ ಪ್ರಶ್ನೆ ಮುಂದಿಡುತ್ತಿದ್ದಾರೆ.
ಶ್ರೇಯಾಂಕ ಹುಟ್ಟಿ ಬೆಳೆದಿದ್ದು ಬೆಂಗಳೂರಲ್ಲಿ. ಆದರೆ, ಆಕೆಯ ಅಪ್ಪ, ಅಜ್ಜ, ಪೂರ್ವಿಕರ ತವರು ಕಲಬುರಗಿ ಯ ಕೋಳಕೂರ ಗ್ರಾಮ. ಕಾರ್ಮಿಕ ರಾಗಿದ್ದ ಎ.ಎಂ.ಪಾಟೀಲ ಅವರು ದಶಕಗಳ ಹಿಂದೆಯೇ ಬೆಂಗಳೂರಿಗೆ ವರ್ಗಾವಣೆಯಾಗಿದ್ದರು. ನಿವೃತ್ತಿಯ ಬಳಿಕ ಸ್ವಗ್ರಾಮಕ್ಕೆ ವಾಪಸಾದರು. ಆದರೆ, ಕ್ರಿಕೆಟ್ ಮೇಲಿನ ಪ್ರೀತಿಯಿಂದಾಗಿ ಅವರ ಮಗ ರಾಜೇಶ ಪಾಟೀಲ ಬೆಂಗಳೂರಿನಲ್ಲಿ ನೆಲೆಯೂರಿದರು.
‘ನನ್ನ ಮಗ (ರಾಜೇಶ) ಒಳ್ಳೆಯ ಕ್ರಿಕೆಟಿಗ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಬಲಗೈ ಬಂಟನಂತೆ ಇದ್ದ. ಮಗನನ್ನು ರಾಷ್ಟ್ರೀಯ ತಂಡಕ್ಕೆ ಸೇರ್ಪಡೆ ಮಾಡಬೇಕೆಂದು ಸಾಕಷ್ಟು ಕಷ್ಟಪಟ್ಟಿದ್ದೆ. ಜೀವರಾಜ್ ಆಳ್ವ ಕ್ರೀಡಾ ಸಚಿವರಾಗಿದ್ದಾಗ ಶಾಸಕರಾಗಿದ್ದ ಎಂ.ವೈ. ಪಾಟೀಲ, ಎಸ್.ಕೆ. ಕಾಂತಾ, ಬಿ.ಆರ್. ಪಾಟೀಲ ಅವರೂ ಯತ್ನಿಸಿದ್ದರೂ ಸಾಧ್ಯ ವಾಗಲಿಲ್ಲ. ಆದರೆ, ನನ್ನ ಮೊಮ್ಮಗಳು ನನ್ನ ಕನಸು ನನಸು ಮಾಡಿ, ನಮ್ಮ ಮನೆತನಕ್ಕೆ ಒಳ್ಳೆಯ ಹೆಸರು ತಂದುಕೊಟ್ಟಿದ್ದಾಳೆ’ ಎನ್ನುತ್ತಾರೆ ಎ.ಎಂ.ಪಾಟೀಲ.
‘ಬ್ಯುಸಿಯಾದ ಕ್ರಿಕೆಟ್ ಶೆಡ್ಯೂಲ್ ನಿಂದಾಗಿ ಹೆಚ್ಚಿನ ಸಮಯ ಮೈದಾನದಲ್ಲಿ ಕಳೆಯುತ್ತಾಳೆ. 15 ದಿನಗಳ ಹಿಂದೆ ಬೆಂಗಳೂರಿಗೆ ಹೋಗಿದ್ದೆವು. ಆದರೆ, ಆಕೆ ಕ್ರಿಕೆಟ್‌ನಲ್ಲಿ ಬ್ಯುಸಿಯಾಗಿದ್ದಳು. ಫೋನ್‌ನಲ್ಲಿ ಮಾತ್ರ ಮಾತಾಡಿದ್ದಳು’ ಎಂದರು.
ಮಗಳ ಸಾಧನೆ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ರಾಜೇಶ ಪಾಟೀಲ, ‘ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಎಫಿಷಿಯಂಟ್ ಕ್ರಿಕೆಟ್ ಅಕಾಡೆಮಿ ಕ್ರಿಕೆಟ್ ಕ್ಯಾಂಪ್ ನಡೆಸುತ್ತಿದ್ದೆ. ಶ್ರೇಯಾಂಕ ಆಗ ಏಳೆಂಟು ವರ್ಷದವಳು ಇದ್ದಳು. ಸುಮ್ಮನೆ ಆಕೆಯನ್ನೂ ಕ್ಯಾಂಪ್‌ಗೆ ಕರೆದೊಯ್ಯುತ್ತಿದ್ದೆ. ನೆಟ್‌ನಲ್ಲಿ ತನಗೆ ತೋಚಿದಂತೆ ಬೌಲ್ ಮಾಡುತ್ತಿದ್ದಳು. ಸ್ವಲ್ಪ ದಿನಗಳ ಬಳಿಕ ಕ್ರಿಕೆಟ್ ಅನ್ನು ಗಂಭೀರವಾಗಿ ತೆಗೆದುಕೊಂಡು ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದಳು. ಇವತ್ತು ಆರ್‌ಸಿಬಿ ಕಪ್ ಗೆಲ್ಲಲು ತಾನೂ ಕಾರಣವಾದಳು’ ಎಂದು ನುಡಿದರು.
‘ಕರ್ನಾಟಕದ ಜೂನಿಯರ್ ತಂಡದಲ್ಲಿ ದೊಡ್ಡ ಗಣೇಶ್, ಶ್ರೀನಿವಾಸ ಮೂರ್ತಿ, ವಿಜಯ ಭಾರದ್ವಾಜ್ ಜೊತೆಗೆ ಸಾಕಷ್ಟು ಕ್ರಿಕೆಟ್ ಆಡಿದ್ದೇನೆ. ರಣಜಿ, ಭಾರತ ತಂಡವನ್ನು ಪ್ರತಿನಿಧಿಸಲು ನನ್ನಿಂದ ಆಗಲಿಲ್ಲ. ಆದರೆ, ನನ್ನ ಮಗಳು ನನ್ನ ಆಸೆಗಳನ್ನು ಈಡೇರಿಸಿದ್ದಾಳೆ. ಆರ್‌ಸಿಬಿಗೂ ಒಳ್ಳೆಯ ಹೆಸರು ತಂದುಕೊಟ್ಟಿದ್ದಾಳೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.