ADVERTISEMENT

ಬಿಸಿಸಿಐ ಪ್ರಶಸ್ತಿ ಪ್ರದಾನ: ಶಾಸ್ತ್ರಿ, ಗಿಲ್‌ಗೆ ಗೌರವ

ಪಿಟಿಐ
Published 22 ಜನವರಿ 2024, 15:18 IST
Last Updated 22 ಜನವರಿ 2024, 15:18 IST
BCCI
BCCI   

ಹೈದರಾಬಾದ್: ಭಾರತ ತಂಡದ ಮಾಜಿ ಮುಖ್ಯಕೋಚ್‌ ರವಿ ಶಾಸ್ತ್ರಿ ಅವರನ್ನು ಮಂಗಳವಾರ ನಡೆಯುವ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜೀವಮಾನದ ಸಾಧನೆಗಾಗಿ ಗೌರವಿಸಲಾಗುವುದು. ಶುಭಮನ್ ಗಿಲ್ ಅವರಿಗೆ ‘ವರ್ಷದ ಕ್ರಿಕೆಟಿಗ’ ಪುರಸ್ಕಾರ ನೀಡಲಾಗುವುದು.

ಕಳೆದ ವರ್ಷ ಅವರು ಉತ್ತಮ ಸಾಧನೆ ತೋರಿದ್ದು, ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 2000 ರನ್‌ಗಳನ್ನು ಕಲೆಹಾಕಿದ್ದರು. ಈ ಮಾದರಿಯಲ್ಲಿ ಐದು ಶತಕಗಳನ್ನೂ ಗಳಿಸಿದ್ದರು.

‘ಶಾಸ್ತ್ರಿ ಅವರನ್ನು ಜೀವಮಾನದ ಸಾಧಕ ಗೌರವಕ್ಕೆ ಮತ್ತು ಗಿಲ್‌ ಅವರನ್ನು ವರ್ಷದ ಕ್ರಿಕೆಟಿಗ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ. 2019ರಲ್ಲಿ ಮೊದಲ ಬಾರಿ ಈ ಪ್ರಶಸ್ತಿ ನೀಡುವ ಸಂಪ್ರದಾಯ ಆರಂಭಿಸಲಾಯಿತು. ಗುರುವಾರ ಇಲ್ಲಿ ಆರಂಭವಾಗುವ ಮೊದಲ ಕ್ರಿಕೆಟ್‌ ಟೆಸ್ಟ್‌ಗೆ ಪೂರ್ವಭಾವಿಯಾಗಿ ನಡೆಯುವ ಈ ಸಮಾರಂಭದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಆಟಗಾರರು ಭಾಗವಹಿಸುವ ನಿರೀಕ್ಷೆಯಿದೆ.

ADVERTISEMENT

61 ವರ್ಷದ ಶಾಸ್ತ್ರಿ ಅವರು 80 ಟೆಸ್ಟ್‌ ಮತ್ತು 150 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ವೀಕ್ಷಕ ವಿವರಣೆಯಲ್ಲೂ ಛಾಪು ಮೂಡಿಸಿದ್ದಾರೆ. ಎರಡು ಬಾರಿ ಭಾರತ ತಂಡಕ್ಕೆ ಮುಖ್ಯ ಕೋಚ್‌ ಆಗಿದ್ದಾರೆ.

ಅವರು ಕೋಚ್‌ ಆಗಿದ್ದ ಅವಧಿಯಲ್ಲಿ ಭಾರತ, ಆಸ್ಟ್ರೇಲಿಯಾದಲ್ಲಿ ಆ ತಂಡದ ವಿರುದ್ಧ ಬೆನ್ನುಬೆನ್ನಿಗೆ ಸರಣೀ ಗೆದ್ದಿತ್ತು. ಆದರೆ ಅವರು ಕೋಚ್‌ ಆಗಿದ್ದ ಮತ್ತು ವಿರಾಟ್ ಕೊಹ್ಲಿ ನಾಯಕರಾಗಿದ್ದ ಅವಧಿಯಲ್ಲಿ ಭಾರತ ಐಸಿಸಿಯ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಲು ಆಗಿರಲಿಲ್ಲ. 2019ರ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್ ತಲುಪಿದ್ದರೂ ಅಲ್ಲಿ ಎಡವಿತ್ತು. 2019ರ ವಿಶ್ವಕಪ್‌ನಲ್ಲೂ ಭಾರತ ಸೆಮಿಫೈನಲ್‌ನಲ್ಲಿ ಎಡವಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.