ಸಿಡ್ನಿ: ಈ ವರ್ಷ ತವರಿನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೆ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಗುರುವಾರ ತಂಡ ಪ್ರಕಟಿಸಿದೆ. ಕಳೆದ ವರ್ಷ ವಿಶ್ವಕಪ್ ಗೆದ್ದ ಬಳಗದಲ್ಲಿ ಕೇವಲ ಒಂದೇಒಂದು ಬದಲಾವಣೆ ಮಾಡಲಾಗಿದ್ದು, ಸಿಂಗಪುರದಲ್ಲಿ ಜನಿಸಿದ ಟಿಮ್ ಡೇವಿಡ್ ಅವರಿಗೆ ಅವಕಾಶ ಕಲ್ಪಿಸಿದೆ.
ಸ್ಫೋಟಕ ಬ್ಯಾಟಿಂಗ್ ಮೂಲಕ ಖ್ಯಾತಿ ಗಳಿಸಿರುವಡೇವಿಡ್ ಅವರು,ಕಳೆದ ಬಾರಿ ತಂಡದಲ್ಲಿದ್ದ ಮಿಚೇಲ್ ಸ್ವೀಪ್‌ಸನ್ ಬದಲು ಸ್ಥಾನ ಪಡೆದಿದ್ದಾರೆ.
'ಟಿಮ್, ಪ್ರಪಂಚದಾದ್ಯಂತ ನಡೆದ ಲೀಗ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಸಾಮರ್ಥ್ಯ ಸಾಬೀತು ಮಾಡಿದ್ದಾರೆ. ಹಾಗಾಗಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ' ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಜಾರ್ಜ್ ಬೈಲಿ ತಿಳಿಸಿದ್ದಾರೆ.
ಟಿಮ್ ಆಗಮನದಿಂದ ತಂಡದ ಬ್ಯಾಟಿಂಗ್ ವಿಭಾಗ ಮತ್ತಷ್ಟು ಬಲಿಷ್ಠವಾಗಲಿದೆ. ಕಳೆದ ಕೆಲವು ವರ್ಷಗಳಲ್ಲಿ ಚುಟುಕು ಕ್ರಿಕೆಟ್‌ನಲ್ಲಿ ಅವರು ನಿಭಾಯಿಸಿರುವ ಪಾತ್ರವನ್ನೇ ಮುಂದುವರಿಸಲಿ ಎಂಬದು ನಮ್ಮ ನಿರೀಕ್ಷೆ ಎಂದೂ ಅವರು ಹೇಳಿದ್ದಾರೆ.
ಸಿಂಗಪುರ ಪರ 14 ಟಿ20 ಪಂದ್ಯಗಳನ್ನು ಆಡಿರುವ ಟಿಮ್ ಪೋಷಕರು ಆಸ್ಟ್ರೇಲಿಯಾದವರು. ಹೀಗಾಗಿ ಅವರು ತಂಡವನ್ನು ಬದಲಿಸಿಕೊಂಡಿದ್ದಾರೆ.
26 ವರ್ಷದ ಈ ಆಟಗಾರನ ಬಗ್ಗೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಟಿಮ್ ಡೇವಿಡ್ ಆಸ್ಟ್ರೇಲಿಯಾ ತಂಡದ ಪ್ರಮುಖ ಆಟಗಾರನಾಗಲಿದ್ದು, ಫಿನಿಷರ್ ಪಾತ್ರ ನಿಭಾಯಿಸಿ ವಿಶ್ವಕಪ್ ಗೆದ್ದುಕೊಡಬಲ್ಲರು ಎಂದು ಹೇಳಿದ್ದರು.
ತಂಡ ಹೀಗಿದೆ
ಆ್ಯರನ್ ಫಿಂಚ್ (ನಾಯಕ), ಡೇವಿಡ್ ವಾರ್ನರ್, ಮಿಚೇಲ್ ಮಾರ್ಶ್, ಗ್ಲೇನ್ ಮ್ಯಾಕ್ಸ್‌ವೆಲ್, ಸ್ಟೀವ್ ಸ್ಮಿತ್, ಮಾರ್ಕಸ್ ಸ್ಟೋಯಿನಿಸ್, ಟಿಮ್ ಡೇವಿಡ್, ಜೋಶ್ ಹ್ಯಾಷಲ್‌ವುಡ್, ಜೋಶ್ ಇಂಗ್ಲಿಸ್, ಮಿಚೇಲ್ ಸ್ಟಾರ್ಕ್, ಕೇನ್ ರಿಚರ್ಡ್‌ಸನ್, ಮ್ಯಾಥ್ಯೂ ವೇಡ್,ಆಷ್ಟನ್ ಅಗರ್, ಪ್ಯಾಟ್ ಕಮಿನ್ಸ್, ಆ್ಯಡಂ ಜಂಪಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.