ADVERTISEMENT

T20 WC: ಗಾಯಾಳು ಚಾಹರ್ ಹೊರಕ್ಕೆ; ಸಿರಾಜ್, ಶಮಿ, ಶಾರ್ದೂಲ್‌ಗೆ ಕರೆ

ಪಿಟಿಐ
Published 12 ಅಕ್ಟೋಬರ್ 2022, 10:46 IST
Last Updated 12 ಅಕ್ಟೋಬರ್ 2022, 10:46 IST
ಮೊಹಮ್ಮದ್ ಸಿರಾಜ್ ಹಾಗೂ ಮೊಹಮ್ಮದ್ ಸಿರಾಜ್
ಮೊಹಮ್ಮದ್ ಸಿರಾಜ್ ಹಾಗೂ ಮೊಹಮ್ಮದ್ ಸಿರಾಜ್   

ನವದೆಹಲಿ: ಗಾಯದ ಸಮಸ್ಯೆ ಎದುರಿಸುತ್ತಿರುವ ದೀಪಕ್ ಚಾಹರ್, ಮುಂಬರುವ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಆಡುವ ಅವಕಾಶದಿಂದ ವಂಚಿತರಾಗಿದ್ದಾರೆ.

ಮತ್ತೊಂದೆಡೆ ವೇಗಿಗಳಾದ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಅವರು ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲಿದ್ದು, ಶೀಘ್ರದಲ್ಲೇ ಟೀಮ್ ಇಂಡಿಯಾ ಕ್ಯಾಂಪ್ ಸೇರಲಿದ್ದಾರೆ.

ಈ ಮೊದಲು ಟ್ವೆಂಟಿ-20 ವಿಶ್ವಕಪ್‌ಗೆ ಘೋಷಿಸಿದ ಟೀಮ್ ಇಂಡಿಯಾದ ಮೀಸಲು ಆಟಗಾರರ ಪಟ್ಟಿಯಲ್ಲಿ ಚಾಹರ್ ಸ್ಥಾನ ಗಿಟ್ಟಿಸಿದ್ದರು. ಅಲ್ಲದೆ ಈಗಾಗಲೇ ನಿರ್ಗಮಿಸಿರುವ ಜಸ್‌ಪ್ರೀತ್ ಬೂಮ್ರಾ ಸ್ಥಾನವನ್ನು ತುಂಬುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿತ್ತು.

ಆದರೆ ಈಗ ಗಾಯದ ಸಮಸ್ಯೆಗೆ ಒಳಗಾಗಿರುವ ಚಾಹರ್, ಆಯ್ಕೆಗೆ ಅಲಭ್ಯರಾಗಿದ್ದಾರೆ. ಅಲ್ಲದೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಪುನಶ್ಚೇತನ ಶಿಬಿರದಲ್ಲಿ ಭಾಗವಹಿಸಲಿದ್ದಾರೆ.

ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಟ್ವೆಂಟಿ-20 ಸರಣಿಯಲ್ಲಿ ಚಾಹರ್ ಆಡಿದ್ದರು. ಆದರೆ ಗಾಯದಿಂದಾಗಿ ಏಕದಿನ ಸರಣಿಗೆ ಅಲಭ್ಯರಾಗಿದ್ದರು.

ಬೂಮ್ರಾ ಬದಲಿ ಆಟಗಾರನನ್ನು ಘೋಷಿಸಲು ಅಕ್ಟೋಬರ್ 15ರವರೆಗೆ ಕಾಲಾವಕಾಶವಿದೆ. ಹಾಗಾಗಿ ಶಮಿ, ಸಿರಾಜ್ ಹಾಗೂ ಶಾರ್ದೂಲ್ ಪೈಕಿ ಯಾವ ಆಟಗಾರನಿಗೆ ಅವಕಾಶ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಒಂದು ವೇಳೆ ಹಾರ್ದಿಕ್ ಪಾಂಡ್ಯಗೆ ಗಾಯದ ಸಮಸ್ಯೆ ಎದುರಾದಲ್ಲಿ, ಆ ಸ್ಥಾನವನ್ನು ತುಂಬುವುದಕ್ಕಾಗಿ ಶಾರ್ದೂಲ್ ಅವರನ್ನು ಹೆಚ್ಚುವರಿ ಪಟ್ಟಿಯಲ್ಲಿ ಸೇರಿಸಲಾಗಿದೆ.

ಸದ್ಯಕ್ಕೆ ಶ್ರೇಯಸ್ ಅಯ್ಯರ್ ಹಾಗೂ ರವಿ ಬಿಷ್ಣೋಯಿ ಆಸೀಸ್‌ಗೆ ಪ್ರಯಾಣಿಸುವ ಸಾಧ್ಯತೆ ಕಡಿಮೆಯಾಗಿದೆ. ಹಾಗೆಯೇ ಯಜುವೇಂದ್ರ ಚಾಹಲ್‌ಗೆ ಗಾಯದ ಸಮಸ್ಯೆ ಎದುರಾದರೆ ಬಿಷ್ಣೋಯಿ ಅವರನ್ನು ಆಯ್ಕೆಗೆ ಪರಿಗಣಿಸುವ ಸಾಧ್ಯತೆಯಿದೆ.

ಟ್ವೆಂಟಿ-20 ವಿಶ್ವಕಪ್‌ಗೆ ಭಾರತ ತಂಡ ಇಂತಿದೆ:
ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್, ಸೂರ್ಯಕುಮಾರ್ ಯಾದವ್, ವಿರಾಟ್ ಕೊಹ್ಲಿ, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಅಕ್ಷರ್ ಪಟೇಲ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಯಜುವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ ಮತ್ತು ಅರ್ಶದೀಪ್ ಸಿಂಗ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.