ADVERTISEMENT

ಆಗಿದ್ದಾಗಲಿ ನೋಡೋಣವೆಂದ ನಾಯಕ: ಆರ್ಷದೀಪ್

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2023, 16:13 IST
Last Updated 4 ಡಿಸೆಂಬರ್ 2023, 16:13 IST
ಆರ್ಷದೀಪ್ ಸಿಂಗ್
ಆರ್ಷದೀಪ್ ಸಿಂಗ್    

ಬೆಂಗಳೂರು: ‘ಪಂದ್ಯದ ಫಲಿತಾಂಶಕ್ಕೆ ನಿರ್ಣಾಯಕವಾಗಿದ್ದ ಕೊನೆಯ ಓವರ್‌ ಬೌಲಿಂಗ್ ಮಾಡಲು ನನಗೆ ಚೆಂಡು ಕೊಟ್ಟ ಸೂರ್ಯ, ಆಗಿದ್ದಾಗಲಿ ನೋಡೋಣ. ಆಡು ನೀನು ಎಂದರು. ಅದು ನನ್ನಲ್ಲಿ ವಿಶ್ವಾಸ ಹೆಚ್ಚಿಸಿತು’ ಎಂದು ಭಾರತ ತಂಡದ ಎಡಗೈ ವೇಗಿ ಆರ್ಷದೀಪ್ ಸಿಂಗ್ ಹೇಳಿದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ  ಆಸ್ಟ್ರೇಲಿಯಾ ಎದುರಿನ ಟಿ20 ಪಂದ್ಯದಲ್ಲಿ ಭಾರತ ತಂಡವು 6 ರನ್‌ಗಳಿಂದ ಜಯಿಸಿತ್ತು. 161 ರನ್‌ಗಳ ಗುರಿ ಬೆನ್ನಟ್ಟಿದ್ದ ಆಸ್ಟ್ರೇಲಿಯಾಕ್ಕೆ ಗೆಲುವಿಗಾಗಿ ಕೊನೆಯ ಓವರ್‌ನಲ್ಲಿ 10 ರನ್‌ಗಳ ಅಗತ್ಯವಿತ್ತು. ಆರ್ಷದೀಪ್  ತಮ್ಮ ಮೊದಲ ಮೂರು ಓವರ್‌ಗಳಲ್ಲಿ 37 ರನ್‌ ಕೊಟ್ಟಿದ್ದರು. ಆದ್ದರಿಂದ ಅವರು ಮತ್ತೆ ರನ್‌ ಬಿಟ್ಟುಕೊಡುವ ಆತಂಕ ಇತ್ತು. ಆಸ್ಟ್ರೇಲಿಯಾ ತಂಡದ ನಾಯಕ ಮ್ಯಾಥ್ಯೂ ವೇಡ್ ಕ್ರೀಸ್‌ನಲ್ಲಿದ್ದರು.  ಆದರೆ ಆರ್ಷದೀಪ್ ತಮ್ಮ ಸಾಮರ್ಥ್ಯ ಸಾಬೀತು ಮಾಡಿದರು. ಅದೃಷ್ಟವೂ ಅವರ ಬೆನ್ನಿಗಿತ್ತು.

ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಲವಲವಿಕೆಯಿಂದ, ನಗೆ ಚಟಾಕಿ ಹಾರಿಸುತ್ತ ಮಾತನಾಡಿದ ಆರ್ಷದೀಪ್, ‘ಆರಂಭಿಕ ಓವರ್‌ಗಳಲ್ಲಿ ಬಹಳಷ್ಟು ರನ್ ಕೊಟ್ಟಿದ್ದೆ. ನಾಯಕ ಮತ್ತು ನೆರವು ಸಿಬ್ಬಂದಿಯು ನನಗೆ ಇನ್ನೊಂದು ಅವಕಾಶ ಕೊಡಬೇಕು ಎಂಬ ನಂಬಿಕೆ ಇಟ್ಟಿತ್ತು. ಆಗೋದು ಆಗುತ್ತದೆ. ನೀನು ಬೌಲಿಂಗ್ ಮಾಡು ಎಂದು ಸೂರ್ಯ ಹುರುಪು ತುಂಬಿದರು’ ಎಂದರು.

ADVERTISEMENT

ಈ ಓವರ್‌ನ ಒಂದು ಎಸೆತದಲ್ಲಿ ಬ್ಯಾಟರ್ ನೇರವಾಗಿ ಹೊಡೆದ ಚೆಂಡು ಅಂಪೈರ್‌ಗೆ ಹೋಗಿ ಅಪ್ಪಳಿಸಿತ್ತು.  ಒಂದೊಮ್ಮೆ ಅದು ಅಂಪೈರ್‌ಗೆ ಬಡಿಯದೇ ಹೋಗಿದ್ದರೆ ಬೌಂಡರಿಗೆರೆಯತ್ತ  ವೇಗವಾಗಿ ಧಾವಿಸುವ ಸಾಧ್ಯತೆ ಇತ್ತು. ಆಗ ಗೆಲುವಿನ ಅಂತರ ಕಡಿಮೆಯಾಗುವ ಸಾಧ್ಯತೆ ಇತ್ತು.

ಈ ಕುರಿತು ಪ್ರತಿಕ್ರಿಯಸಿದ ಆರ್ಷದೀಪ್, ‘ಅಂಪೈರ್ ಚೆನ್ನಾಗಿ ಫೀಲ್ಡಿಂಗ್ ಮಾಡಿದರು. ಅವರಿಗೆ ಧನ್ಯವಾದಗಳು‘ ಎಂದು ನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.