ಮೆಲ್ಬರ್ನ್ : ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ (41; 64 ಎಸೆತ, 3 ಬೌಂಡರಿ) ಮತ್ತು ಮೂರನೇ ಕ್ರಮಾಂಕದ ಮಾರ್ನಸ್ ಲಾಬುಶೇನ್ (63; 149 ಎಸೆತ, 1 ಸಿಕ್ಸರ್, 6 ಬೌಂಡರಿ) ಅವರ ಅಮೋಘ ಜೊತೆಯಾಟದ ಬೆನ್ನಲ್ಲೇ ಸ್ಟೀವ್ ಸ್ಮಿತ್ ಮಿಂಚಿದರು.
ಈ ಮೂವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ, ಗುರುವಾರ ಆರಂಭಗೊಂಡ ‘ಬಾಕ್ಸಿಂಗ್ ಡೇ’ ಟೆಸ್ಟ್ ಪಂದ್ಯದಲ್ಲಿ ಉತ್ತಮ ಮೊತ್ತದತ್ತ ಹೆಜ್ಜೆ ಇರಿಸಿದೆ. ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 4 ವಿಕೆಟ್‌ಗಳಿಗೆ 257 ರನ್ ಗಳಿಸಿದೆ.
1987ರ ನಂತರ ಮೆಲ್ಬರ್ನ್‌ನಲ್ಲಿ ಮೊದಲ ಬಾಕ್ಸಿಂಗ್ ಡೇ ಟೆಸ್ಟ್ ಆಡುತ್ತಿರುವ ನ್ಯೂಜಿಲೆಂಡ್ ತಂಡ ಟಾಸ್ ಗೆದ್ದು ಬೌಲಿಂಗ್ ಆರಿಸಿಕೊಂಡಿತು. ಜೋ ಬರ್ನ್ಸ್ ಅವರನ್ನು ಪಂದ್ಯದ ನಾಲ್ಕನೇ ಎಸೆತದಲ್ಲೇ ಬೌಲ್ಡ್ ಮಾಡಿದ ಟ್ರೆಂಟ್ ಬೌಲ್ಟ್ ನ್ಯೂಜಿಲೆಂಡ್ ಪಾಳಯದಲ್ಲಿ ಸಂತಸ ಮೂಡಿಸಿದರು.
ಆದರೆ ವಾರ್ನರ್ ಮತ್ತು ಲಾಬುಶೇನ್ ಎರಡನೇ ವಿಕೆಟ್‌ಗೆ 60 ರನ್ ಸೇರಿಸಿದರು. ಭೋಜನ ವಿರಾಮಕ್ಕೆ ಮುನ್ನ ವಾರ್ನರ್, ವ್ಯಾಗ್ನರ್‌ಗೆ ವಿಕೆಟ್ ಒಪ್ಪಿಸಿದರು. ಈ ಸಂದರ್ಭದಲ್ಲಿ ಕ್ರೀಸ್‌ಗೆ ಇಳಿದ ಸ್ಮಿತ್ ದಿನದಾಟದ ಅಂತ್ಯದ ವರೆಗೂ ಬ್ಯಾಟಿಂಗ್ ಮಾಡಿದರು. ಮೂರನೇ ವಿಕೆಟ್‌ಗೆ 83 ರನ್ ಸೇರಿಸಿದ ಲಾಬುಶೇನ್ ಮತ್ತು ಸ್ಮಿತ್ ಎದುರಾಳಿ ಬೌಲರ್‌ಗಳನ್ನು ಕಂಗೆಡಿಸಿದರು.
ಅರ್ಧಶತಕ ಗಳಿಸಿ ಲಾಬುಶೇನ್ ಔಟಾದರು. ನಂತರ ಮ್ಯಾಥ್ಯೂ ವೇಡ್ ಅವರು ಸ್ಮಿತ್‌ಗೆ ಉತ್ತಮ ಬೆಂಬಲ ನೀಡಿದರು. ವೇಡ್ ಔಟಾದ ನಂತರ ಕ್ರೀಸ್‌ಗೆ ಬಂದ ಟ್ರಾವಿಸ್ ಹೆಡ್ ಮುರಿಯದ ಐದನೇ ವಿಕೆಟ್‌ಗೆ 41 ರನ್ ಸೇರಿಸಿ ಶುಕ್ರವಾರಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.
ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ (ಮೊದಲ ಇನಿಂಗ್ಸ್): 90 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 257 (ಡೇವಿಡ್ ವಾರ್ನರ್ 41, ಮಾರ್ನಸ್ ಲಾಬುಶೇನ್ 63, ಸ್ಟೀವ್ ಸ್ಮಿತ್ ಬ್ಯಾಟಿಂಗ್ 77, ಮ್ಯಾಥ್ಯೂ ವೇಡ್ 38, ಟ್ರಾವಿಸ್ ಹೆಡ್ ಬ್ಯಾಟಿಂಗ್ 25; ಟ್ರೆಂಟ್ ಬೌಲ್ಟ್ 60ಕ್ಕೆ1, ಕಾಲಿನ್ ಡಿ ಗ್ರ್ಯಾಂಡ್‌ಹೋಮ್ 48ಕ್ಕೆ2, ನೀಲ್ ವ್ಯಾಗ್ನರ್ 40ಕ್ಕೆ1).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.