ADVERTISEMENT

IND vs SA | ಮಹಿಳಾ ಕ್ರಿಕೆಟ್: ಸ್ಮೃತಿ ಮಂದಾನ ಶತಕ; ಭಾರತ ಜಯದ ಆರಂಭ

ಮಹಿಳಾ ಕ್ರಿಕೆಟ್: ಮಿಂಚಿದ ಆಶಾ ಶೋಭನಾ, ಆತಿಥೇಯರಿಗೆ ಸರಣಿಯಲ್ಲಿ 1–0 ಮುನ್ನಡೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 16:15 IST
Last Updated 16 ಜೂನ್ 2024, 16:15 IST
<div class="paragraphs"><p>ಭಾರತ ಮಹಿಳಾ ತಂಡದ ಬ್ಯಾಟರ್ ಸ್ಮೃತಿ ಮಂದಾನ (ಎಡ) ಮತ್ತು ಸ್ಪಿನ್ನರ್ ಆಶಾ ಶೋಭನಾ&nbsp;</p></div>

ಭಾರತ ಮಹಿಳಾ ತಂಡದ ಬ್ಯಾಟರ್ ಸ್ಮೃತಿ ಮಂದಾನ (ಎಡ) ಮತ್ತು ಸ್ಪಿನ್ನರ್ ಆಶಾ ಶೋಭನಾ 

   

–ಪ್ರಜಾವಾಣಿ ಚಿತ್ರ/ಎಸ್‌.ಕೆ. ದಿನೇಶ್

ಬೆಂಗಳೂರು: ಸ್ಮೃತಿ ಮಂದಾನ ಅವರಿಗೆ ಚಿನ್ನಸ್ವಾಮಿ ಕ್ರೀಡಾಂಗಣವು ಅದೃಷ್ಟದ ತಾಣ ಎಂಬುವುದು ಮತ್ತೊಮ್ಮೆ ಸಾಬೀತಾಯಿತು. 

ADVERTISEMENT

ಭಾನುವಾರ ಇಲ್ಲಿ ನಡೆದ ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಉಪನಾಯಕಿ ಸ್ಮೃತಿ ಭರ್ಜರಿ ಶತಕ ಗಳಿಸಿದರು. ಅವರ ಬ್ಯಾಟಿಂಗ್ ಮತ್ತು  ಆಶಾ ಶೋಭನಾ ಅವರ ಪರಿಣಾಮಕಾರಿ ಬೌಲಿಂಗ್‌ನಿಂದ ಭಾರತ ಮಹಿಳಾ ತಂಡವು ದಕ್ಷಿಣ ಆಫ್ರಿಕಾ ಎದುರು 143 ರನ್‌ಗಳ ಬೃಹತ್ ಜಯ ದಾಖಲಿಸಿತು. ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆಯನ್ನೂ ಸಾಧಿಸಿತು. ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಈ ಸಲದ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿಯಾಗಿರುವ ಸ್ಮೃತಿಗೆ ಚಿನ್ನಸ್ವಾಮಿ ಕ್ರೀಡಾಂಗಣವು ‘ತವರಿನ ಅಂಗಳ’ವೂ ಆಗಿದೆ.  

ಟಾಸ್ ಗೆದ್ದ ಭಾರತ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಪ್ರವಾಸಿ ತಂಡದ ಮಧ್ಯಮವೇಗಿ ಮಸಾಬೆತಾ ಕ್ಲಾಸ್ (51ಕ್ಕೆ2) ಅವರ ಪರಿಣಾಮಕಾರಿ ದಾಳಿಯಿಂದ  ಆತಿಥೇಯ ಬಳಗವು ಆರಂಭಿಕ ಆಘಾತ ಎದುರಿಸಿತು. ಕೇಲವ 55 ರನ್‌ಗಳಿಗೆ 3 ವಿಕೆಟ್ ಪತನವಾದವು. 

ಆದರೆ ಈ ಹಂತದಲ್ಲಿ ದಿಟ್ಟ ಹೋರಾಟ ನಡೆಸಿದ ಸ್ಮೃತಿ (117; 127ಎ, 4X12, 6X1) ಶತಕ ದಾಖಲಿಸಿದರು. ಇದರಿಂದಾಗಿ ತಂಡವು 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 265 ರನ್‌ ಗಳಿಸಲು ಸಾಧ್ಯವಾಯಿತು.  ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವು 37.4 ಓವರ್‌ಗಳಲ್ಲಿ 122 ರನ್‌ಗಳಿಗೆ ಕುಸಿಯಿತು. ಇದಕ್ಕೆ ಕಾರಣವಾಗಿದ್ದು ಸ್ಪಿನ್ನರ್ ಆಶಾ ಶೋಭನಾ (21ಕ್ಕೆ4) ಮತ್ತು ದೀಪ್ತಿ ಶರ್ಮಾ (10ಕ್ಕೆ2) ಕಾರಣರಾದರು. 

ಎಡಗೈ ಬ್ಯಾಟರ್ ಸ್ಮೃತಿ ಅವರಿಗೆ  ಏಕದಿನ ಕ್ರಿಕೆಟ್‌ನಲ್ಲಿ ಇದು ಆರನೇ ಶತಕ. 27 ವರ್ಷದ ಸ್ಮೃತಿ ಅವರ ಆಟವು ಅಪಾರ ತಾಳ್ಮೆ ಮತ್ತು ಏಕಾಗ್ರತೆಯಿಂದ ಕೂಡಿತ್ತು. 116 ಎಸೆತದಲ್ಲಿ ಅವರು 100ರ ಗಡಿ ಮುಟ್ಟಿದರು. 

ಇನಿಂಗ್ಸ್‌ನ ಕೊನೆಯ ಹಂತದ ಓವರ್‌ಗಳಲ್ಲಿ ದೀಪ್ತಿ ಶರ್ಮಾ (37; 48ಎ) ಹಾಗೂ ಪೂಜಾ (ಔಟಾಗದೆ 31; 42) ಮಹತ್ವದ ಕಾಣಿಕೆ ನೀಡಿದರು. 

ಸಂಕ್ಷಿಪ್ತ ಸ್ಕೋರು: ಭಾರತ: 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 265 (ಸ್ಮೃತಿ ಮಂದಾನ 117, ದೀಪ್ತಿ ಶರ್ಮಾ 37, ಪೂಜಾ ವಸ್ತ್ರಕರ್ ಔಟಾಗದೆ 31, ಅಯಾಬೊಂಗಾ ಕಾಕಾ 47ಕ್ಕೆ3, ಮಸಾಬೆತಾ ಕ್ಲಾಸ್ 51ಕ್ಕೆ2) ದಕ್ಷಿಣ ಆಫ್ರಿಕಾ: 37.4 ಓವರ್‌ಗಳಲ್ಲಿ 122 (ಸೂನ್ ಲೂಸ್ 33, ಮರಿಜಾನೆ ಕಾಪ್ 24, ಸಿನಾಲೊ ಜಫ್ತಾ ಔಟಾಗದೆ 27, ದೀಪ್ತಿ ಶರ್ಮಾ 10ಕ್ಕೆ2, ಆಶಾ ಶೋಭನಾ 21ಕ್ಕೆ4) ಫಲಿತಾಂಶ: ಭಾರತಕ್ಕೆ 143 ರನ್‌ಗಳ ಜಯ. ಸರಣಿಯಲ್ಲಿ 1–0 ಮುನ್ನಡೆ. 

ಮುಂದಿನ ಪಂದ್ಯ: ಜೂನ್ 19

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.