ADVERTISEMENT

NCA ಕೆಲವರ ಕಾಯಂ ನಿವಾಸ; ಬೌಲರ್‌ಗಳ ಫಿಟ್‌ನೆಸ್ ನಿರ್ವಹಣೆಗೆ ರವಿಶಾಸ್ತ್ರಿ ಟೀಕೆ

ಪಿಟಿಐ
Published 13 ಏಪ್ರಿಲ್ 2023, 7:32 IST
Last Updated 13 ಏಪ್ರಿಲ್ 2023, 7:32 IST
ರವಿಶಾಸ್ತ್ರಿ
ರವಿಶಾಸ್ತ್ರಿ   

ನವದೆಹಲಿ: ದೇಶದ ಪ್ರಮುಖ ಬೌಲರ್‌ಗಳ ಫಿಟ್‌ನೆಸ್‌ ಮತ್ತು ಗಾಯದ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಅಸಮಾಧಾನ ಹೊರಹಾಕಿರುವ ಭಾರತ ಕ್ರಿಕೆಟ್‌ ತಂಡದ ಮಾಜಿ ಕೋಚ್‌ ರವಿಶಾಸ್ತ್ರಿ, ‘ಕೆಲವರು ಎನ್‌ಸಿಎಯ ಕಾಯಂ ನಿವಾಸಿಗಳಾಗಿದ್ದಾರೆ’ ಎಂದು ಟೀಕಿಸಿದ್ದಾರೆ.

‘ಕಳೆದ 3–4 ವರ್ಷಗಳಲ್ಲಿ ಒಂದಷ್ಟು ಕ್ರಿಕೆಟಿಗರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯನ್ನು (ಎನ್‌ಸಿಎ) ತಮ್ಮ ಕಾಯಂ ನಿವಾಸವನ್ನಾಗಿ ಮಾಡಿಕೊಂಡಿದ್ದಾರೆ. ಬಯಸಿದಾಗ ಲೆಲ್ಲಾ ಅವರಿಗೆ ಎನ್‌ಸಿಎಗೆ ಹೋಗಲು ಅನುಮತಿ ದೊರೆಯುತ್ತದೆ. ಈ ಬೆಳವಣಿಗೆ ಒಳ್ಳೆಯದಲ್ಲ’ ಎಂದು ಇಎಸ್‌ ಪಿಎನ್‌ನ ಡಿಜಿಟಲ್ ವಿಡಿಯೊದಲ್ಲಿ ರವಿಶಾಸ್ತ್ರಿ ಅವರು ವ್ಯಂಗ್ಯದ ಧಾಟಿಯಲ್ಲಿ ಹೇಳಿದ್ದಾರೆ.

ಬಿಸಿಸಿಐ ಕೇಂದ್ರೀಯ ಗುತ್ತಿಗೆ ಪಟ್ಟಿಯಲ್ಲಿರುವ ಕ್ರಿಕೆಟಿಗರ ಗಾಯದ ನಿರ್ವಹಣೆಯನ್ನು ಎನ್‌ಸಿಎ ಮಾಡುತ್ತದೆ. ಇಲ್ಲಿನ ತಜ್ಞ ವೈದ್ಯರ ತಂಡ ಆಟಗಾರರ ಫಿಟ್‌ನೆಸ್‌ ಮೇಲೆ ನಿಗಾ ಇಟ್ಟಿರುತ್ತದೆ. ಎನ್‌ಸಿಎ ವೈದ್ಯರ ತಂಡದಿಂದ ‘ಫಿಟ್‌’ ಎಂಬ ಪ್ರಮಾಣಪತ್ರ ಪಡೆದುಕೊಂಡವರೂ ಮತ್ತೆ ಗಾಯದ ಸಮಸ್ಯೆಗೆ ಒಳಗಾಗುವುದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ.

ADVERTISEMENT

ರವಿಶಾಸ್ತ್ರಿ ಯಾವುದೇ ಬೌಲರ್‌ನ ಹೆಸರು ಉಲ್ಲೇಖಿಸಿಲ್ಲವಾದರೂ, ಅವರು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ವೇಗದ ಬೌಲರ್‌ ದೀಪಕ್‌ ಚಾಹರ್‌ ಬಗ್ಗೆ ಈ ಮಾತುಗಳನ್ನಾಡಿರುವುದು ಸ್ಪಷ್ಟ.

ಚಾಹರ್‌ ಅವರು ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ಕೇವಲ ಒಂದು ಓವರ್ ಬೌಲ್‌ ಮಾಡಿದ ಬಳಿಕ ಮಂಡಿರಜ್ಜು ಗಾಯದಿಂದ ಅಂಗಳದಿಂದ ಹೊರನಡೆದಿದ್ದರು. ವೇಗಿಗಳಾದ ಜಸ್‌ಪ್ರೀತ್‌ ಬೂಮ್ರಾ ಮತ್ತು ಪ್ರಸಿದ್ಧ ಕೃಷ್ಣ ಅವರೂ ಗಾಯದಿಂದಾಗಿ ಹಲವು ಸಮಯದಿಂದ ಆಟದಿಂದ ದೂರವುಳಿದಿದ್ದಾರೆ.

‘ಎನ್‌ಸಿಎನಲ್ಲಿ ಆರೈಕೆ ಪಡೆದ ಬಳಿಕವೂ ನಿಮಗೆ ಸತತವಾಗಿ ನಾಲ್ಕು ಪಂದ್ಯಗಳನ್ನು ಆಡಲು ಆಗುವುದಿಲ್ಲ ಎಂದರೆ ಏನಿದರ ಅರ್ಥ? ಮೂರು ಪಂದ್ಯ ಆಡಿದ ಬಳಿಕ ಮತ್ತೆ ಚಿಕಿತ್ಸೆಗಾಗಿ ಎನ್‌ಸಿಎಗೆ ಬರುತ್ತೀರಿ’ ಎಂದು ಹರಿಹಾಯ್ದರು.

‘ಪುನಶ್ಚೇತನಕ್ಕಾಗಿ ಎನ್‌ಸಿಎಗೆ ಹೋದವರು ಪೂರ್ಣ ಫಿಟ್‌ನೆಸ್‌ ಹೊಂದಿದ ಬಳಿಕವೇ ಮತ್ತೆ ಆಡಲಿಳಿ ಯಬೇಕು. ಹಣ ಮತ್ತು ಸಮಯ ವ್ಯರ್ಥ ಮಾಡದಿರಿ’ ಎಂದು ಆಟಗಾರರಿಗೆ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.