ನವದೆಹಲಿ: ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಡೇವಿಡ್ ಮಿಲ್ಲರ್ ಅವರ ಆಪ್ತ ಸ್ನೇಹಿತನ ಮಗಳು ಆ್ಯನೆ ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ.
ಈ ಕುರಿತು ಡೇವಿಡ್ ಮಿಲ್ಲರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
‘ಆ್ಯನೆ’ ಜೊತೆಗಿರುವ ವಿಡಿಯೊವನ್ನು ಹಂಚಿಕೊಂಡಿರುವ ಮಿಲ್ಲರ್, ‘ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಮೈ ರಾಕ್‌ಸ್ಟಾರ್, ನಿನ್ನನ್ನು ಯಾವಾಗಲೂ ಪ್ರೀತಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ಹಲವು ದಿನಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಆ್ಯನೆ, ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದರು ಎಂದು ವರದಿಯಾಗಿದೆ.
ಮಿಲ್ಲರ್, ಆ್ಯನೆ ಅವರನ್ನು ಹಲವು ಬಾರಿ ಕ್ರೀಡಾಂಗಣಕ್ಕೆ ಕರೆದೊಯ್ದಿದ್ದರು. ಹಾಗಾಗಿ ಕೆಲವರು ಆ್ಯನೆ ಅವರನ್ನು ಮಿಲ್ಲರ್ ಮಗಳು ಎಂದು ಭಾವಿಸಿದ್ದರು. ಆದರೆ, ಆಕೆ ಮಿಲ್ಲರ್‌ನ ಆಪ್ತ ಸ್ನೇಹಿತನ ಮಗಳು ಎಂಬುದು ದೃಢಪಟ್ಟಿದೆ.
‘ನನ್ನ ಮುದ್ದುಮರಿ, ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಾನು ತಿಳಿದಿರುವ ಹೃದಯ ನಿನ್ನದು. ನೀನು ಸಾಕಷ್ಟು ಹೋರಾಟವನ್ನು ಮಾಡಿದೆ. ಯಾವಾಗಲೂ ನಂಬಲಾಗದಷ್ಟು ಧನಾತ್ಮಕ ನಗು ನಿನ್ನ ಮುಖದಲ್ಲಿ ಇರುತ್ತಿತ್ತು’ ಎಂದು ಆ್ಯನೆ ಬಗ್ಗೆ ಮಿಲ್ಲರ್ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
‘ನಿನ್ನ ಪ್ರಯಾಣದಲ್ಲಿ ನೀನು ಪ್ರತಿಯೊಬ್ಬ ವ್ಯಕ್ತಿಯನ್ನು ಮತ್ತು ಪ್ರತಿ ಸವಾಲನ್ನು ಸ್ವೀಕರಿಸಿದ್ದೀಯಾ. ಜೀವನದಲ್ಲಿ ಪ್ರತಿಯೊಂದು ಕ್ಷಣವನ್ನು ಪಾಲಿಸುವುದರ ಬಗ್ಗೆ ನೀನು ನನಗೆ ತುಂಬಾ ಕಲಿಸಿದ್ದೀಯಾ. ನಿನ್ನ ಜತೆಯಲ್ಲಿ ಬದುಕಿನಲ್ಲಿ ಪ್ರಯಾಣ ಮಾಡಿದ್ದಕ್ಕೆ ನನಗೆ ತುಂಬಾ ಹೆಮ್ಮೆ ಅನಿಸುತ್ತಿದೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ’ ಎಂದು ವಿವರಿಸಿದ್ದಾರೆ.
ಆ್ಯನೆ ನಿಧನಕ್ಕೆ ಟೀಮ್ ಇಂಡಿಯಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.
ಭಾರತದ ವಿರುದ್ಧದ ಸರಣಿಯಲ್ಲಿರುವ ಮಿಲ್ಲರ್
ಡೇವಿಡ್ ಮಿಲ್ಲರ್ ಸದ್ಯ ಭಾರತದ ಪ್ರವಾಸದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ಪ್ರಮುಖ ಬ್ಯಾಟರ್ ಆಗಿರುವ ಅವರು, ರಾಂಚಿಯಲ್ಲಿ ಇಂದು ನಡೆಯಲಿರುವ ಎರಡನೇ ಏಕದಿನ ಪಂದ್ಯವನ್ನಾಡಲಿದ್ದಾರೆ.
ಮಿಲ್ಲರ್ ಇತ್ತೀಚೆಗೆ ಭಾರತದ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದ್ದರು. ಮೊದಲನೇ ಏಕದಿನ ಪಂದ್ಯದಲ್ಲಿ ಕೂಡ ಅತ್ಯುತ್ತಮ ಆಟವಾಡಿದ್ದ ಅವರು ಅರ್ಧಶತಕ ಗಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.