ADVERTISEMENT

ಟಿ20 ಕ್ರಿಕೆಟ್‌ ಸರಣಿ: ಭಾರತದ ಎದುರು ದಕ್ಷಿಣ ಆಫ್ರಿಕಾ ಮಹಿಳೆಯರ ಶುಭಾರಂಭ

ಪಿಟಿಐ
Published 6 ಜುಲೈ 2024, 0:26 IST
Last Updated 6 ಜುಲೈ 2024, 0:26 IST
<div class="paragraphs"><p>ದಕ್ಷಿಣ ಆಫ್ರಿಕಾ ತಂಡದ ಆಟಗಾರ್ತಿ ತಾಝ್ನಿಮ್ ಬ್ರಿಟ್ಸ್‌. </p></div>

ದಕ್ಷಿಣ ಆಫ್ರಿಕಾ ತಂಡದ ಆಟಗಾರ್ತಿ ತಾಝ್ನಿಮ್ ಬ್ರಿಟ್ಸ್‌.

   

ಪಿಟಿಐ ಚಿತ್ರ

ಚೆನ್ನೈ: ಏಕೈಕ ಟೆಸ್ಟ್‌ ಮತ್ತು ಅದಕ್ಕೆ ಮೊದಲು ಏಕದಿನ ಸರಣಿಯನ್ನು 0–3 ರಿಂದ ಸೋತು ಸುಣ್ಣವಾಗಿದ್ದ ದಕ್ಷಿಣ ಆಫ್ರಿಕಾ ಮಹಿಳಾ ತಂಡ, ಶುಕ್ರವಾರ ಇಲ್ಲಿ ಆರಂಭವಾದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವನ್ನು 12 ರನ್‌ಗಳಿಂದ ಸೋಲಿಸಿತು.

ADVERTISEMENT

ಬ್ಯಾಟ್‌ ಮಾಡಲು ಕಳುಹಿಸಲ್ಪಟ್ಟ ಪ್ರವಾಸಿ ತಂಡ, ಆರಂಭ ಆಟಗಾರ್ತಿ ತಾಝ್ನಿಮ್ ಬ್ರಿಟ್ಸ್‌ (81, 56 ಎಸೆತ) ಮತ್ತು ಮರೈಝನ್ ಕಾಪ್‌ (57, 33 ಎಸೆತ) ಅವರ ಬಿರುಸಿನ ಅರ್ಧ ಶತಕಗಳ ನೆರವಿನಿಂದ 5 ವಿಕೆಟ್‌ಗೆ 189 ರನ್‌ಗಳ ಉತ್ತಮ ಮೊತ್ತ ಗಳಿಸಿತು. ಭಾರತ ತಂಡ ಬಿರುಸಿನ ಆರಂಭ ಮಾಡಿದರೂ, ದಕ್ಷಿಣ ಆಫ್ರಿಕಾ ಬೌಲರ್‌ಗಳು ಸಾಂಘಿಕ ಪ್ರಯತ್ನದಿಂದ ಆತಿಥೇಯರನ್ನು ಕಟ್ಟಿಹಾಕಿದರು. ಭಾರತ 4 ವಿಕೆಟ್‌ಗೆ 177 ರನ್‌ಗಳೊಡನೆ ಓವರ್‌ಗಳನ್ನು ಪೂರೈಸಿತು.

ಶಫಾಲಿ ವರ್ಮಾ (18, 14ಎ) ಮತ್ತು ಸ್ಮೃತಿ ಮಂದಾನ (46, 30ಎ) ಮೊದಲ ವಿಕೆಟ್‌ಗೆ ಪವರ್‌ಪ್ಲೇ ಅವಧಿಯೊಳಗೆ 56 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದ್ದರು. ಸ್ಮೃತಿ ಮತ್ತು ಹೇಮಲತಾ (14) ಅವರ ವಿಕೆಟ್‌ಗಳನ್ನು ಅಲ್ಪ ಅಂತರದಲ್ಲಿ ಕಳೆದುಕೊಂಡ ನಂತರ ದಕ್ಷಿಣ ಆಫ್ರಿಕಾವೂ ಪಂದ್ಯದ ಮೇಲೆ ಮರಳಿ ಹಿಡಿತ ಪಡೆಯತೊಡಗಿತು.

ಜೆಮಿಮಾ ರಾಡ್ರಿಗಸ್‌ 30 ಎಸೆತಗಳಲ್ಲಿ ಒಂದು ಸಿಕ್ಸರ್‌, ಏಳು ಬೌಂಡರಿಗಳಿದ್ದ ಅಜೇಯ 53 ರನ್ ಗಳಿಸಿ ಹೋರಾಟ ಪ್ರದರ್ಶಿಸಿದರು. ಆದರೆ ಅದು ಗೆಲುವಿಗೆ ಸಾಲಲಿಲ್ಲ. ನಾಯಕಿ ಹರ್ಮನ್‌ಪ್ರೀತ್ ಕೌರ್ (35, 29ಎ) ಜೊತೆ ನಾಲ್ಕನೇ ವಿಕೆಟ್‌ಗೆ 58 ಎಸೆತಗಳಲ್ಲಿ 90 ರನ್‌ಗಳು ಹರಿದುಬಂದಿದ್ದವು. ಹರ್ಮನ್‌ಪ್ರೀತ್ ಕೊನೆಯ ಎಸೆತದಲ್ಲಿ ಸ್ಟಂಪ್ಡ್‌ ಆದರು.

ಇದಕ್ಕೆ ಮೊದಲು ಆರಂಭ ಆಟಗಾರ್ತಿ ತಾಝ್ಮಿನ್ ಬ್ರಿಟ್ಸ್‌ ಜೀವನಶ್ರೇಷ್ಠ 81 ರನ್‌ ಬಾರಿಸಿದರು. ಅವರ ಆಟದಲ್ಲಿ ಮೂರು ಸಿಕ್ಸರ್‌ ಮತ್ತು 10 ಬೌಂಡರಿಗಳಿದ್ದವು. ಮರೈಝನ್ ಕಾಪ್‌ ಜೊತೆ ಎರಡನೇ ವಿಕೆಟ್‌ಗೆ ಕೇವಲ 56 ಎಸೆತಗಳಲ್ಲಿ 96 ರನ್ ಜೊತೆಯಾಟವಾಡಿದ್ದರಿಂದ ಪ್ರವಾಸಿ ತಂಡ ಉತ್ತಮ ಮೊತ್ತ ಗಳಿಸಲು ಸಾಧ್ಯವಾಯಿತು. ಭಾರತದ ಕಡೆ ಪೂಜಾ ವಸ್ತ್ರಾಕರ್ (23ಕ್ಕೆ2) ಅವರು ಯಶಸ್ವಿ ಬೌಲರ್ ಎನಿಸಿದರು.

ಸರಣಿಯ ಎರಡನೇ ಪಂದ್ಯ ಭಾನುವಾರ ನಡೆಯಲಿದೆ.

ಸಂಕ್ಷಿಪ್ತ ಸ್ಕೋರು

ದಕ್ಷಿಣ ಆಫ್ರಿಕಾ: 20 ಓವರುಗಳಲ್ಲಿ 4ಕ್ಕೆ189 (ತಾಝ್ನಿಮ್‌ ಬ್ರಿಟ್ಸ್‌ 81, ಮರೈಝನ್ ಕಾಪ್‌ 57, ಪೂಜಾ ವಸ್ತ್ರಾಕರ್‌ 23ಕ್ಕೆ2, ರಾಧಾ ಯಾದವ್‌ 40ಕ್ಕೆ2)

ಭಾರತ: 20 ಓವರುಗಳಲ್ಲಿ 4ಕ್ಕೆ177 (ಸ್ಮೃತಿ ಮಂದಾನ 46, ಹರ್ಮನ್‌ಪ್ರೀತ್ ಕೌರ್‌ 35, ಜೆಮಿಮಾ ರಾಡ್ರಿಗಸ್‌ ಔಟಾಗದೇ 53; ಕ್ಲೊ ಟ್ರಿಯಾನ್ 32ಕ್ಕೆ1, ನಾಡಿನ್ ಡಿ ಕ್ಲಾರ್ಕ್‌ 30ಕ್ಕೆ1, ನೊಂಕುಲುಲೆಕೊ ಮಲಾಬ 32ಕ್ಕೆ1). ಪಂದ್ಯದ ಆಟಗಾರ್ತಿರ್: ತಾಝ್ನಿಮ್ ಬ್ರಿಟ್ಸ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.