ಚತ್ತೊಗ್ರಾಮ್ (ಬಾಂಗ್ಲಾದೇಶ): ದಕ್ಷಿಣ ಆಫ್ರಿಕಾ ತಂಡ, ಎರಡನೇ ಹಾಗೂ ಅಂತಿಮ ಟೆಸ್ ಪಂದ್ಯದ ಎರಡನೇ ದಿನವಾದ ಬುಧವಾರ ಬಾಂಗ್ಲಾದೇಶ ವಿರುದ್ಧ ಬಿಗಿ ಹಿಡಿತ ಸಾಧಿಸಿದೆ. 6 ವಿಕೆಟ್‌ಗೆ 575 ರನ್‌ಗಳ ಬೃಹತ್ ಮೊತ್ತಕ್ಕೆ ಡಿಕ್ಲೇರ್ ಮಾಡಿಕೊಂಡ ದಕ್ಷಿಣ ಆಫ್ರಿಕಾ, ನಂತರ ಆತಿಥೇಯರ 4 ವಿಕೆಟ್‌ಗಳನ್ನು 38 ರನ್‌ಗಳಾಗುವಷ್ಟರಲ್ಲಿ ಪಡೆದಿದೆ.
ಆರಂಭ ಆಟಗಾರ ಟೋನಿ ಡಿ ಝೋರ್ಜಿ 177 ರನ್ ಹೊಡೆದರೆ, ಆಲ್‌ರೌಂಡರ್ ವಿಯಾನ್ ಮುಲ್ಡರ್ ಅಜೇಯ 105 ರನ್ (150ಎ, 4x8, 6x4) ಗಳಿಸಿದರು. ಮೊದಲ ದಿನ ಟ್ರಿಸ್ಟನ್ ಸ್ಟಬ್ಸ್ 106 ರನ್ ಗಳಿಸಿದ್ದರು. ಮುಲ್ಡರ್ ಮತ್ತು ಸೇನುರಾನ್ ಮುತ್ತುಸಾಮಿ (ಔಟಾಗದೇ 68, 75ಎ) ಅವರು ಮುರಿಯದ ಏಳನೇ ವಿಕೆಟ್‌ಗೆ 152 ರನ್ ಸೇರಿಸಿದ್ದರು. ಇದು ಮುತ್ತುಸಾಮಿ ಅವರಿಗೆ ಮೊದಲ ಅರ್ಧ ಶತಕ.
ಎಡಗೈ ಸ್ಪಿನ್ನರ್ ತೈಜುಲ್ ಇಸ್ಲಾಂ 198 ರನ್ನಿಗೆ 5 ವಿಕೆಟ್ ಪಡೆದರು. ಇದು ಅವರಿಗೆ ಸತತ ಎರಡನೇ ಐದು ವಿಕೆಟ್ ಗೊಂಚಲು.
ಟೆಸ್ಟ್ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಕಗಿಸೊ ರಬಾಡ ನಂತರ ಬೇಗನೇ ಎರಡು ವಿಕೆಟ್ (ಶಾದ್ಮನ್ ಇಸ್ಲಾಂ ಮತ್ತು ಮಹಮದುಲ್ ಹಸನ್ ಜಾಯ್) ಪಡೆದರು. ಡೇನ್ ಪೀಟರ್ಸನ್ ಮತ್ತು ಎಡಗೈ ಸ್ಪಿನ್ನರ್ ಕೇಶವ ಮಹಾರಾಜ್ ಒಂದೊಂದು ವಿಕೆಟ್ ಗಳಿಸಿದರು. ಮೊಮಿನುಲ್ ಹಕ್ (ಔಟಾಗದೇ 6) ಮತ್ತು ನಾಯಕ ನಜ್ಮುಲ್ ಹುಸೇನ್ ಶಾಂತೊ (ಔಟಾಗದೇ 4) ಕ್ರೀಸ್‌ನಲ್ಲಿದ್ದರು.
ಸ್ಕೋರುಗಳು: ಮೊದಲ ಇನಿಂಗ್ಸ್: ದಕ್ಷಿಣ ಆಫ್ರಿಕಾ: 144.2 ಓವರುಗಳಲ್ಲಿ 6 ವಿಕೆಟ್‌ಗೆ 575 (ಟೋನಿ ಡಿ ಝೋರ್ಜಿ 177, ಟ್ರಿಸ್ಟನ್ ಸ್ಟಬ್ಸ್ 106, ಡೇವಿಡ್ ಬೆಡ್ಡಿಗಂ 59, ವಿಯಾನ್ ಮುಲ್ಡರ್ ಔಟಾಗದೇ 105, ಸೆನುರಾನ್ ಮುತ್ತುಸಾಮಿ ಔಟಾಗದೇ 68; ತೈಜುಲ್ ಇಸ್ಲಾಂ 198ಕ್ಕೆ5); ಬಾಂಗ್ಲಾದೇಶ: 9 ಓವರುಗಳಲ್ಲಿ 4 ವಿಕೆಟ್‌ಗೆ 38 (ಕಗಿಸೊ ರಬಾಡ 8ಕ್ಕೆ2).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.