ನವದೆಹಲಿ: ಕರ್ನಾಟಕದ ಶ್ರೇಯಾಂಕಾ ಪಾಟೀಲ ಅವರು ಜೂನ್ ಮತ್ತು ಜುಲೈನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಏಕದಿನ ಮತ್ತು ಟಿ20 ಸರಣಿಗೆ ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಬಿಸಿಸಿಐ ಮಹಿಳಾ ತಂಡದ ಆಯ್ಕೆ ಸಮಿತಿಯು ಗುರುವಾರ ಭಾರತ ತಂಡವನ್ನು ಪ್ರಕಟಿಸಿದೆ. ಹರ್ಮನ್‌ಪ್ರೀತ್ ಕೌರ್ ಅವರು ಮೂರು ಮಾದರಿಯಲ್ಲೂ ಭಾರತ ತಂಡವನ್ನು ಮುನ್ನಡೆಸಲಿದ್ದು, ಸ್ಮೃತಿ ಮಂದಾನ ಉಪನಾಯಕಿಯಾಗಿದ್ದಾರೆ.
ಅನುಭವಿ ಆಟಗಾರ್ತಿಯರಾದ ಜೆಮಿಮಾ ರಾಡ್ರಿಗಸ್ ಮತ್ತು ಪೂಜಾ ವಸ್ತ್ರಕರ್ ಅವರೂ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಗ್ರ ಕ್ರಮಾಂಕದ ಬ್ಯಾಟರ್ ಪ್ರಿಯಾ ಪೂನಿಯಾ ಏಕದಿನ ಮತ್ತು ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ಬಲಗೈ ಸ್ಪಿನ್ನರ್ ಶ್ರೇಯಾಂಕಾ, ಡಬ್ಲ್ಯುಪಿಎಲ್‌ನಲ್ಲಿ ಈ ಬಾರಿ ಆರ್‌ಸಿಬಿ ತಂಡದ ಪರ 13 ವಿಕೆಟ್ ಪಡೆದು ಮಿಂಚಿದ್ದರು.
ಜೂನ್ 16ರಿಂದ ಜುಲೈ 9ರ ವರೆಗೆ ಮೂರು ಮಾದರಿಗಳ ಸರಣಿ ನಡೆಯಲಿದೆ. ಒಂದು ಟೆಸ್ಟ್, ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳು ನಡೆಯಲಿವೆ. ಏಕದಿನ ಪಂದ್ಯಗಳು ಬೆಂಗಳೂರಿನಲ್ಲಿ ಮತ್ತು ಉಳಿದ ಪಂದ್ಯಗಳು ಚೆನ್ನೈನಲ್ಲಿ ನಡೆಯಲಿವೆ.
ಏಕದಿನ ತಂಡ ಹೀಗಿದೆ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ (ಉಪನಾಯಕಿ), ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೆಟ್ ಕೀಪರ್), ಉಮಾ ಚೆಟ್ರಿ (ವಿಕೆಟ್ ಕೀಪರ್), ದಯಾಳನ್ ಹೇಮಲತಾ, ರಾಧಾ ಯಾದವ್, ಆಶಾ ಶೋಭನ, ಶ್ರೇಯಾಂಕಾ ಪಾಟೀಲ, ಸೈಕಾ ಇಶಾಕ್, ಪೂಜಾ ವಸ್ತ್ರಕರ್, ರೇಣುಕಾ ಸಿಂಗ್ ಠಾಕೂರ್, ಅರುಂಧತಿ ರೆಡ್ಡಿ, ಪ್ರಿಯಾ ಪೂನಿಯಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.