ADVERTISEMENT

ಬಾಂಗ್ಲಾ ವಿರುದ್ಧದ ಅಂತಿಮ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾಕ್ಕೆ ಇನಿಂಗ್ಸ್ ಜಯ

ಬಾಂಗ್ಲಾ ವಿರುದ್ಧ ಸರಣಿ ಕ್ಲೀನ್‌ಸ್ವೀಪ್‌

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2024, 14:16 IST
Last Updated 31 ಅಕ್ಟೋಬರ್ 2024, 14:16 IST
ವಿಕೆಟ್‌ ಪಡೆದ ಖುಷಿಯಲ್ಲಿ ಕೇಶವ ಮಹಾರಾಜ್
ಎಎಫ್‌ಪಿ ಚಿತ್ರ
ವಿಕೆಟ್‌ ಪಡೆದ ಖುಷಿಯಲ್ಲಿ ಕೇಶವ ಮಹಾರಾಜ್ ಎಎಫ್‌ಪಿ ಚಿತ್ರ   

ಚಿತ್ತಗಾಂಗ್‌: ಎಡಗೈ ಸ್ಪಿನ್ನರ್ ಕೇಶವ ಮಹಾರಾಜ್ ಅವರ ಐದು ವಿಕೆಟ್‌ ಗೊಂಚಲಿನ ನೆರವಿನಿಂದ ದಕ್ಷಿಣ ಆಫ್ರಿಕಾ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಮೂರೇ ದಿನಗಳಲ್ಲಿ  ಬಾಂಗ್ಲಾದೇಶ ತಂಡವನ್ನು ಇನಿಂಗ್ಸ್ ಮತ್ತು 273 ರನ್‌ಗಳಿಂದ ಪರಾಭವಗೊಳಿಸಿತು. ಪ್ರವಾಸಿ ತಂಡ ಸರಣಿಯನ್ನು 2–0 ಯಿಂದ ಸ್ವೀಪ್ ಮಾಡಿತು.

ಇದು ಬಾಂಗ್ಲಾದೇಶ ಟೆಸ್ಟ್‌ ಪಂದ್ಯ ಒಂದರಲ್ಲಿ ಗಳಿಸಿದ ಅತಿ ದೊಡ್ಡ ಅಂತರದ ಗೆಲುವು. ಈ ಹಿಂದೆ, 2017ರಲ್ಲಿ ತವರಿನಲ್ಲಿ ಬಾಂಗ್ಲಾ ವಿರುದ್ದ ಇನಿಂಗ್ಸ್ ಮತ್ತು 254 ರನ್ ಅಂತರದ ಜಯ ಇದುವರೆಗಿನ ಅತಿ ದೊಡ್ಡ ಜಯವಾಗಿತ್ತು.

ಬುಧವಾರ, ಎರಡನೇ ದಿನ ದಕ್ಷಿಣ ಆಫ್ರಿಕಾ ತಂಡದ 575 (6 ವಿಕೆಟ್‌ಗೆ ಡಿಕ್ಲೇರ್‌) ರನ್‌ಗಳಿಗೆ ಉತ್ತರವಾಗಿ ದಿನದ ಕೊನೆಗೆ 38 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಿದ್ದ ಬಾಂಗ್ಲಾದೇಶ 159 ರನ್‌ಗಳಿಗೆ ಪತನಗೊಂಡಿತು. ಮೊಮಿನುಲ್ ಹಕ್ (82, 112ಎ, 4x8, 2x6) ಬಿಟ್ಟರೆ ಬೇರಾರೂ ಬೇರೂರಲಿಲ್ಲ. ಕಗಿಸೊ ರಬಾಡ 9 ಓವರುಗಳಲ್ಲಿ 37 ರನ್ನಿಗೆ 5 ವಿಕೆಟ್ ಬಾಚಿದರು.

ADVERTISEMENT

ಫಾಲೊ ಆನ್‌ಗೆ ಒಳಗಾದ ಬಾಂಗ್ಲಾದೇಶ ಎರಡನೇ ಇನಿಂಗ್ಸ್‌ನಲ್ಲಿ ಸ್ಪಿನ್ ದಾಳಿಗೆ ಸಿಲುಕಿ 143 ರನ್‌ಗಳಿಗೆ ಕುಸಿಯಿತು. ಮಹಾರಾಜ್‌ಗೆ ಬೆಂಬಲ ನೀಡಿದ ಇನ್ನೊಬ್ಬ ಎಡಗೈ ಸ್ಪಿನ್ನರ್ ಸೆನುರಾನ್ ಮುತ್ತುಸಾಮಿ 4 ವಿಕೆಟ್‌ ಗಳಿಸಿದರು.

ದಕ್ಷಿಣ ಆಫ್ರಿಕಾ ವಿರುದ್ಧ ಇದುವರೆಗೆ 16 ಟೆಸ್ಟ್‌ಗಳನ್ನು ಆಡಿರುವ ಬಾಂಗ್ಲಾದೇಶ ಒಂದರಲ್ಲೂ ಗೆದ್ದಿಲ್ಲ.

ಸ್ಕೋರುಗಳು: ಮೊದಲ ಇನಿಂಗ್ಸ್‌: ದಕ್ಷಿಣ ಆಫ್ರಿಕಾ: 6 ವಿಕೆಟ್‌ಗೆ 575 ಡಿ; ಬಾಂಗ್ಲಾದೇಶ: 45.2 ಓವರುಗಳಲ್ಲಿ 159 (ಮೊಮಿನುಲ್ ಹಕ್ 82, ತೈಜುಲ್ ಇಸ್ಲಾಂ 30; ಕಗಿಸೊ ರಬಾಡ 37ಕ್ಕೆ5, ಡೇನ್ ಪೀಟರ್ಸನ್ 31ಕ್ಕೆ2, ಕೇಶವ ಮಹಾರಾಜ್ 57ಕ್ಕೆ2) ಮತ್ತು (ಫಾಲೊಆನ್‌): 43.4 ಓವರುಗಳಲ್ಲಿ 143 (ನಜ್ಮುಲ್ ಹುಸೇನ್ ಶಾಂತೊ 36, ಮಹಿದುಲ್ ಇಸ್ಲಾಂ ಅನ್ಕೊನ್ 29, ಹಸನ್ ಮಹಮುದ್ ಔಟಾಗದೇ 38; ಸೆನುರಾನ್ ಮುತ್ತುಸಾಮಿ 45ಕ್ಕೆ4, ಕೇಶವ ಮಹಾರಾಜ್ 59ಕ್ಕೆ5). ಪಂದ್ಯದ ಆಟಗಾರ: ಟೋನಿ ಡಿ ಝೋರ್ಜಿ (177), ಸರಣಿಯ ಆಟಗಾರ: ಕಗಿಸೊ ರಬಾಡ (14 ವಿಕೆಟ್)

ಕೇಶವ ಮಹಾರಾಜ್ (ಬಲಗಡೆ) ಎಎಫ್‌ಪಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.