ADVERTISEMENT

ಟೆಸ್ಟ್ ಕ್ರಿಕೆಟ್‌ನಲ್ಲಿ 5 ಲಕ್ಷ ರನ್ | ಅಪರೂಪದ ದಾಖಲೆ ಬರೆದ ಇಂಗ್ಲೆಂಡ್

ಏಜೆನ್ಸೀಸ್
Published 25 ಜನವರಿ 2020, 10:18 IST
Last Updated 25 ಜನವರಿ 2020, 10:18 IST
   

ಜೋಹಾನ್ಸ್‌ಬರ್ಗ್:ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿಹೆಚ್ಚು(1022) ಪಂದ್ಯಗಳನ್ನು ಆಡಿರುವ ಇಂಗ್ಲೆಂಡ್‌, ಈ ಮಾದರಿಯಲ್ಲಿ ಬರೋಬ್ಬರಿ 5 ಲಕ್ಷ ರನ್‌ ಕಲೆಹಾಕುವ ಮೂಲಕ ಅಪರೂಪದ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದುಕೊಂಡಿದೆ.

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ನಾಲ್ಕನೇ ಹಾಗೂ ಕೊನೆ ಪಂದ್ಯದಲ್ಲಿ ಇಂಗ್ಲೆಂಡ್‌ ಈ ಸಾಧನೆ ಮಾಡಿದೆ.

ಅತಿಹೆಚ್ಚು ರನ್‌ ಗಳಿಸಿದ ತಂಡಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ಕ್ರಮವಾಗಿ 2, 3ನೇ ಸ್ಥಾನಗಳಲ್ಲಿವೆ. 830 ಟೆಸ್ಟ್‌ ಪಂದ್ಯಗಳನ್ನು ಆಡಿರುವ ಆಸಿಸ್‌, 4,32,706 ರನ್‌ ಕಲೆಹಾಕಿದೆ. ಟೀಂ ಇಂಡಿಯಾ 540 ಟೆಸ್ಟ್‌ ಪಂದ್ಯಗಳಿಂದ 2,73,518 ರನ್‌ ಗಳಿಸಿದೆ. 545 ಟೆಸ್ಟ್‌ ಆಡಿರುವ ವೆಸ್ಟ್‌ ಇಂಡೀಸ್‌ 2,70,441 ರನ್‌ ಗಳಿಸಿ ನಾಲ್ಕನೇ ಸ್ಥಾನದಲ್ಲಿದೆ.

ADVERTISEMENT

ಸರಣಿಯ ಮೊದಲ ಪಂದ್ಯವನ್ನು ಸೋತಿದ್ದ ಇಂಗ್ಲೆಂಡ್‌, ಎರಡು ಮತ್ತು ಮೂರನೇ ಪಂದ್ಯದಲ್ಲಿ ಗೆಲುವು ಸಾಧಿಸಿತ್ತು. ಕೊನೆಯ ಪಂದ್ಯವನ್ನೂ ಗೆದ್ದು 3–0 ಅಂತರದಿಂದ ಸರಣಿ ಗೆಲ್ಲುವುದು ಆಂಗ್ಲರ ಯೋಜನೆ.ಆದರೆ, ಈ ಪಂದ್ಯದಲ್ಲಿ ತಿರುಗೇಟು ನೀಡಿ ಸರಣಿ ಸಮಬಲ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿ ಆತಿಥೇಯ ಆಫ್ರಿಕಾ ಇದೆ.

ಶುಕ್ರವಾರ ಆರಂಭವಾದ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್ ಮಾಡುತ್ತಿರುವ ಇಂಗ್ಲೆಂಡ್‌, ಸದ್ಯ 67 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 254 ರನ್‌ ಕಲೆಹಾಕಿದೆ. ಆಂಗ್ಲರಿಗೆ ಜಾಕ್‌ ಕ್ರಾವ್ಲೆ (66) ಮತ್ತು ಡೊಮಿನಿಕ್‌ ಸಿಬ್ಲಿ (44) ಉತ್ತಮ ಆರಂಭ ಒದಗಿಸಿದರು. ಆರಂಭಿಕ ಜೋಡಿ ಮೊದಲ ವಿಕೆಟ್‌ಗೆ 107 ರನ್ ಸೇರಿಸಿದರು.

ಸದ್ಯ 51 ರನ್‌ ಗಳಿಸಿರುವ ನಾಯಕ ಜೋ ರೂಟ್‌ ಮತ್ತು 53 ರನ್ ಕಲೆಹಾಕಿರುವ ಓಲಿ ಪೋಪ್‌ ಕ್ರೀಸ್‌ನಲ್ಲಿದ್ದಾರೆ.

ಇಂಗ್ಲೆಂಡ್‌, ಕಳೆದವಾರ ಪೋರ್ಟ್ ಎಲಿಜಬೆತ್‌ನಲ್ಲಿ ನಡೆದ ಮೂರನೇ ಟೆಸ್ಟ್‌ ಪಂದ್ಯದ ವೇಳೆ ವಿದೇಶದಲ್ಲಿ 500ನೇ ಟೆಸ್ಟ್‌ ಆಡಿದ ಸಾಧನೆ ಮಾಡಿತ್ತು. ವಿದೇಶದಲ್ಲಿ ಹೆಚ್ಚು ಟೆಸ್ಟ್‌ ಆಡಿದ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದ್ದು 404 ಪಂದ್ಯ ಆಡಿದೆ.

ಭಾರತ ವಿದೇಶದಲ್ಲಿ 268 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು, 51 ಗೆಲುವು, 113 ಸೋಲು ಮತ್ತು 104 ಡ್ರಾ ಕಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.