ಕೇಪ್‌ಟೌನ್: ದಕ್ಷಿಣ ಆಫ್ರಿಕಾದ ನ್ಯೂಲ್ಯಾಂಡ್ಸ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡವು 223 ರನ್ ಗಳಿಸಿ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ.
ನಾಯಕ ವಿರಾಟ್ ಕೊಹ್ಲಿ ಅವರ ತಾಳ್ಮೆಯ ಅರ್ಧಶತಕದ ನೆರವಿನಿಂದ (79 ರನ್, 201 ಎಸೆತ, 12 ಬೌಂಡರಿ, 1 ಸಿಕ್ಸರ್) ತಂಡವು ಸಾಧಾರಣ ಮೊತ್ತ ಗಳಿಸುವಲ್ಲಿ ಯಶಸ್ವಿಯಾಗಿದೆ.
ಮೂರನೇ ಪಂದ್ಯದಲ್ಲೂ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡಕ್ಕೆ ದಕ್ಷಿಣ ಆಫ್ರಿಕಾ ಬೌಲರ್‌ಗಳಾದ ಡ್ವಾನೆ ಒಲಿವಿಯರ್ ಮತ್ತು ಕಗಿಸೊ ರಬಾಡ ಆರಂಭಿಕ ಆಘಾತ ನೀಡಿದರು. ತಂಡದ ಮೊತ್ತ ಕೇವಲ 33 ರನ್ ಆಗುವಷ್ಟರಲ್ಲಿ ಕೆ.ಎಲ್.ರಾಹುಲ್ ಮತ್ತು ಮಯಂಕ್ ಅಗರವಾಲ್ ಇಬ್ಬರನ್ನೂ ಒಲಿವಿಯರ್ ಹಾಗೂ ರಬಾಡ ಪೆವಿಲಿಯನ್‌ಗೆ ಕಳುಹಿಸಿದರು. ರಾಹುಲ್ 12 ಹಾಗೂ ಮಯಂಕ್ 15 ರನ್ ಗಳಿಸಿ ನಿರಾಸೆ ಮೂಡಿಸಿದರು.
ನಂತರ ಕ್ರೀಸ್‌ಗೆ ಬಂದ ನಾಯಕ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ ಪೂಜಾರ ತುಸು ಭರವಸೆ ಮೂಡಿಸಿದರಾದರೂ ಜತೆಯಾಟವನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುವುದು ಸಾಧ್ಯವಾಗಲಿಲ್ಲ. ತಂಡದ ಮೊತ್ತ 95 ಆಗಿದ್ದಾಗ 43 ರನ್ ಗಳಿಸಿದ್ದ ಪೂಜಾರ ಔಟ್ ಆದರು.
ನಂತರ ಬಂದ ಪಂತ್ 27 ರನ್ ಗಳಿಸಿದ್ದು ಬಿಟ್ಟರೆ ಮತ್ಯಾರಿಂದಲೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮೂಡಿಬರಲಿಲ್ಲ. ಒಂದೆಡೆ ವಿಕೆಟ್‌ಗಳು ಉರುಳುತ್ತಿದ್ದರೂ ತಾಳ್ಮೆಯ ಆಟವಾಡಿದ ಕೊಹ್ಲಿ, ತಂಡವು ದಕ್ಷಿಣ ಆಫ್ರಿಕಾ ಬೌಲರ್‌ಗಳಿಗೆ ಸುಲಭವಾಗಿ ಶರಣಾಗದಂತೆ ನೋಡಿಕೊಂಡರು.
ದಕ್ಷಿಣ ಆಫ್ರಿಕಾ ಪರ ರಬಾಡ 4, ಜಾನ್ಸೆನ್ 3, ಒಲಿವಿಯರ್, ಲುಂಗಿ ಗಿಡಿ, ಕೇಶವ್ ಮಹಾರಾಜ್ ತಲಾ 1 ವಿಕೆಟ್ ಪಡೆದರು.
ಮೊದಲ ಇನ್ನಿಂಗ್ಸ್ ಆರಂಭಿಸಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ವೇಗಿ ಜಸ್‌ಪ್ರೀತ್ ಬೂಮ್ರಾ ಆಘಾತ ನೀಡಿದರು. ತಂಡದ ರನ್ 10 ಆಗಿರುವಾಗ ಆರಂಭಿಕ ಆಟಗಾರ, ನಾಯಕ ಡೀನ್ ಎಲ್ಗರ್‌ಗೆ (3) ಬೂಮ್ರಾ ಪೆವಿಲಿಯನ್ ಹಾದಿ ತೋರಿದರು.
ದಿನದ ಆಟದ ಅಂತ್ಯಕ್ಕೆ ಅತಿಥೇಯ ತಂಡವು 1 ವಿಕೆಟ್ ಕಳೆದುಕೊಂಡು 17 ರನ್ ಗಳಿಸಿದೆ. ಏಡನ್ ಮರ್ಕರಮ್ (8) ಕೇಶವ್ ಮಹಾರಾಜ್ (6) ಕ್ರೀಸ್‌ನಲ್ಲಿದ್ದಾರೆ. ಸದ್ಯ ಭಾರತ ತಂಡ 206 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.