ಇಂದೋರ್: ದಕ್ಷಿಣ ಆಫ್ರಿಕಾ ತಂಡದ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ ತಂಡವು 49 ರನ್‌ಗಳ ಅಂತರದಿಂದ ಸೋಲನುಭವಿಸಿದೆ. ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲೆರಡು ಪಂದ್ಯದಲ್ಲಿ ಸೋತಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಈ ಗೆಲವು ಸಾಂತ್ವಾನ ನೀಡಿದೆ.
ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಅಫ್ರಿಕಾ ಮೂರು ವಿಕೆಟ್ ನಷ್ಟಕ್ಕೆ 227 ರನ್‌ಗಳನ್ನು ಕಲೆಹಾಕಿತು. ರಿಲಿ ರೊಸೊ 8 ಸಿಕ್ಸರ್ ಒಳಗೊಂಡ ಅಬ್ಬರದ ಶತಕ ದಾಖಲಿಸಿದರು. ಕ್ವಿಂಟನ್ ಡಿಕಾಕ್ 68 ರನ್‌ಗಳ ಕಾಣಿಕೆ ನೀಡಿದರು. ಟ್ರಿಸ್ಟನ್ ಸ್ಟಬ್ಸ್ ಮತ್ತು ಡೇವಿಡ್ ಮಿಲ್ಲರ್ ಕ್ರಮವಾಗಿ 23, 19 ರನ್ ಗಳಿಸಿದರು. ಭಾರತದ ಪರ ಉಮೇಶ್ ಯಾದವ್ ಮತ್ತು ದೀಪಕ್ ಚಾಹರ್ ತಲಾ ಒಂದು ವಿಕೆಟ್ ಗಳಿಸಿದರು.
228 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ಆರಂಭಿಕ ಆಘಾತವಾಯಿತು. ನಾಯಕ ರೋಹಿತ್ ಶರ್ಮಾ ಶೂನ್ಯಕ್ಕೆ ಔಟಾದರು. ಕಗಿಸೊ ರಬಾಡ ಎಸೆತಕ್ಕೆ ಬೋಲ್ಡ್ ಆಗಿ ನಿರ್ಗಮಿಸಿದರು. ಶ್ರೇಯಸ್ ಅಯ್ಯರ್ ಕೇವಲ 1 ರನ್ ಗಳಿಸಿ ವಿಕೆಟ್ ಚೆಲ್ಲಿದರು. ದಿನೇಶ್ ಕಾರ್ತಿಕ್ (46) ಮತ್ತು ರಿಷಬ್ ಪಂತ್ (27) ರನ್ ಗತಿಯನ್ನು ವೃದ್ಧಿಸಲು ಶ್ರಮಿಸಿದರು. ನಂತರ ಬಂದ ಸೂರ್ಯಕುಮಾರ್ ಯಾದವ್ (8), ಅಕ್ಷರ್ ಪಟೇಲ್ (9), ಹರ್ಷಲ್ ಪಟೇಲ್ (17), ಆರ್.ಅಶ್ವಿನ್ (2), ದೀಪಕ್ ಚಾಹರ್ (31), ಮೊಹಮ್ಮದ್ ಸಿರಾಚ್ (5) ಗೆಲುವಿನ ದಡ ಸೇರುವ ಯತ್ನದಲ್ಲಿ ಎಡವಿದರು. ಉಮೇಶ್ ಯಾದವ್ ಔಟಾಗದೆ 20 ರನ್ ಗಳಿಸಿದರು. ಅಂತಿಮವಾಗಿ ಇನ್ನೂ 9 ಎಸೆತಗಳು ಬಾಕಿಯಿರುವಂತೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.
ಇತರೆ 12 ರನ್‌ಗಳು ಸೇರಿ ಒಟ್ಟು 178 ರನ್‌ಗಳನ್ನಷ್ಟೇ ಗಳಿಸಲು ಭಾರತ ತಂಡಕ್ಕೆ ಸಾಧ್ಯವಾಯಿತು. ದಕ್ಷಿಣ ಆಫ್ರಿಕಾ ಪರ ಡ್ವೆನ್ ಪ್ರಿಟೊರಿಯಸ್ 3, ವೇಯ್ನ್ ಪಾರ್ನೆಲ್, ಕೇಶವ ಮಹಾರಾಜ್ ಮತ್ತು ಲುಂಗಿ ಗಿಡಿ ತಲಾ 2 ಹಾಗೂ ಕಗಿಸೊ ರಬಾಡ 1 ವಿಕೆಟ್ ಕಬಳಿಸಿದರು.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ - 227/3 (20)
ಭಾರತ - 178 (18.3)
ಫಲಿತಾಂಶ: ದಕ್ಷಿಣ ಆಫ್ರಿಕಾಗೆ 49 ರನ್ ಗಳ ಜಯ
ಸರಣಿ ಫಲಿತಾಂಶ: 2-1ರಿಂದ ಭಾರತಕ್ಕೆ ಸರಣಿ ಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.