ADVERTISEMENT

ಸ್ಪೈಡರ್ ಕ್ಯಾಮ್ ಬಳಕೆಯೂ.. ಆಟಗಾರರ ಅಸಮಾಧಾನವೂ

ಗಿರೀಶದೊಡ್ಡಮನಿ
Published 18 ಏಪ್ರಿಲ್ 2023, 19:30 IST
Last Updated 18 ಏಪ್ರಿಲ್ 2023, 19:30 IST
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರದ ಪಂದ್ಯದದಲ್ಲಿ ಬಳಕೆಯಾದ ಸ್ಪೈಡರ್ ಕ್ಯಾಮೆರಾ  ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.  
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರದ ಪಂದ್ಯದದಲ್ಲಿ ಬಳಕೆಯಾದ ಸ್ಪೈಡರ್ ಕ್ಯಾಮೆರಾ  ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.     

ಬೆಂಗಳೂರು: ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಕೆಲವು ಆಟಗಾರರ ಕೆಂಗಣ್ಣಿಗೆ ಗುರಿಯಾಗಿದ್ದ ಸ್ಪೈಡರ್‌ ಕ್ಯಾಮೆರಾ ಈಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ಅಸಮಾಧಾನಕ್ಕೂ ಕಾರಣವಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಕ್ಯಾಚ್ ಪಡೆಯುವಾಗ ಸ್ಪೈಡರ್ ಕ್ಯಾಮ್‌ ಚಲನವಲನ ಗೊಂದಲವುಂಟು ಮಾಡುವಂತಿತ್ತು. ಕ್ಯಾಚ್‌ ಪಡೆಯುವಲ್ಲಿ ಯಶಸ್ವಿಯಾದ ಧೋನಿ ಸಂಭ್ರಮಿಸುವ ಗೋಜಿಗೆ ಹೋಗದೇ, ಸೀದಾ ಅಂಪೈರ್‌ಗಳ ಬಳಿ ತೆರಳಿ ದೂರಿದರು.

ಬಹುಶಃ ಧೋನಿ ಆ ಕ್ಯಾಚ್ ಕೈಚೆಲ್ಲಿದ್ದರೆ ಚೆನ್ನೈ ಸೋಲುವ ಸಾಧ್ಯತೆ ಇತ್ತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಚೆನ್ನೈ ನೀಡಿದ್ದ 226 ರನ್‌ಗಳ ಗುರಿಯನ್ನು ಆರ್‌ಸಿಬಿ ತಂಡಕ್ಕೆ ಗ್ಲೆನ್ ಮತ್ತು ಫಫ್ ಅವರ 126 ರನ್‌ಗಳ ಜೊತೆಯಾಟವು ಗೆಲುವಿನ ವಿಶ್ವಾಸ ಮೂಡಿಸಿತ್ತು. ಅವರಿಬ್ಬರ ಅಬ್ಬರದ ಆಟಕ್ಕೆ ಆದರೆ 13ನೇ ಓವರ್‌ನಲ್ಲಿ ಆಫ್‌ಸ್ಪಿನ್ನರ್ ಮಹೀಷ ತೀಕ್ಷಣ ಎಸೆತವನ್ನು ಗ್ಲೆನ್ ಸ್ಲಾಗ್ ಸ್ವೀಪ್ ಮಾಡಲು ಪ್ರಯತ್ನಿಸಿದರು. ಆದರೆ ಬ್ಯಾಟ್‌ ಅಂಚಿಗೆ ಸ್ಲೈಸ್ ಆದ ಚೆಂಡು ಎತ್ತರಕ್ಕೆ ಪುಟಿಯಿತು.

ADVERTISEMENT

ವಿಕೆಟ್‌ಕೀಪರ್ ಧೋನಿ ಓಡಿ ಬಂದು ಕ್ಯಾಚ್ ಮಾಡುವಲ್ಲಿ ಯಶಸ್ವಿಯಾದರು. ಇದು ಇನಿಂಗ್ಸ್‌ಗೆ ಮಹತ್ವದ ತಿರುವು ನೀಡಿತು. ಚೆನ್ನೈ 8 ರನ್‌ಗಳಿಂದ ಜಯಿಸಿತು.

‘ಪಂದ್ಯವನ್ನು ವಿವಿಧ ಕೋನಗಳಲ್ಲಿ ವಾಹಿನಿಯ ಮೂಲಕ ಜನರಿಗೆ ತಲುಪಿಸುವ ತಂತ್ರಜ್ಞಾನ ಚೆನ್ನಾಗಿದೆ. ಆದರೆ ಸ್ಪೈಡರ್ ಕ್ಯಾಮೆರಾದ ಚಲನವಲನವು ಈ ಹಿಂದೆಯೂ ಕೆಲವು ಬಾರಿ ಫೀಲ್ಡರ್‌ಗಳನ್ನು ಗೊಂದಲಕ್ಕೀಡು ಮಾಡಿರುವ ಘಟನೆಗಳಿವೆ. ಅದರಲ್ಲೂ ರಾತ್ರಿಯ ಪಂದ್ಯಗಳಲ್ಲಿ ಎತ್ತರದಿಂದ ಬರುವ ಕ್ಯಾಚ್‌ಗಳನ್ನು ಪಡೆಯುವುದು ಸುಲಭವಲ್ಲ. ಅದರಲ್ಲಿ ಸ್ಪೈಡರ್ ಕ್ಯಾಮೆರಾದ ನೆರಳು ಹಾಗೂ ಅದನ್ನು ಅಳವಡಿಸಿರುವ ವೈರ್‌ಗಳು ಗೊಂದಲ ಮೂಡಿಸುತ್ತವೆ. ಧೋನಿ ಕ್ಯಾಚ್ ಪಡೆಯುವಾಗಲೂ ಇಂತಹ ಗೊಂದಲ ಉಂಟಾಗಿದೆ. ಆದ್ದರಿಂದಲೇ ಅವರು ಅಂಪೈರ್‌ಗೆ ತಿಳಿಸಿದರು. ಚೆಂಡಿನ ತೀರಾ ಹತ್ತಿರಕ್ಕೆ ಕ್ಯಾಮೆರಾ ಬರದಂತೆ ಎಚ್ದರವಹಿಸಬೇಕೆಂದು ಹೇಳಿದರು. ಈ ಪಂದ್ಯದಲ್ಲಿ ಧೋನಿ ಪಡೆದ ಎರಡೂ ಕ್ಯಾಚ್‌ಗಳೂ ನಮ್ಮ ತಂಡದ ಗೆಲುವಿಗೆ ಮಹತ್ವದ ಕಾಣಿಕೆ ನೀಡಿದವು’ ಎಂದು ಪಂದ್ಯ ನಂತರ ಚೆನ್ನೈ ಬ್ಯಾಟರ್ ಡೇವೊನ್ ಕಾನ್ವೆ ಹೇಳಿದರು.

ಪಂದ್ಯದಲ್ಲಿ ತಂತ್ರಜ್ಞಾನ ಬಳಕೆ ಒಳ್ಳೆಯದು. ಆದರೆ ಅದರಿಂದ ಆಟಕ್ಕೆ ಅಡ್ಡಿಯಾಗಬಾರದು ಎಂದೂ ಡೇವೊನ್ ಅಭಿಪ್ರಾಯಪಟ್ಟರು.

2021ರಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಟೆಸ್ಟ್ ಪಂದ್ಯದಲ್ಲಿ ಕ್ರೀಡಾಂಗಣದ ನಡುವೆ ತುಸು ಎತ್ತರದಲ್ಲಿ ಸ್ಪೈಡರ್‌ ಕ್ಯಾಮ್ ತಾಂತ್ರಿಕ ಕಾರಣಗಳಿಂದ ಕೆಲಹೊತ್ತು ಸ್ಥಗಿತವಾಗಿತ್ತು. ಇದರಿಂದಾಗಿ ಸ್ವಲ್ಪ ಹೊತ್ತು ಆಟ ನಡೆದಿರಲಿಲ್ಲ.

ಹೋದ ವರ್ಷ ಮೆಲ್ಬರ್ನ್‌ನಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಣ ಟೆಸ್ಟ್ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಎನ್ರಿಚ್ ನಾಕಿಯಾ ಅವರಿಗೆ ಸ್ಪೈಡರ್ ಕ್ಯಾಮ್ ಬಡಿದಿತ್ತು. ಆದರೆ ಅದೃಷ್ಟವಶಾತ್ ನಾಕಿಯಾ ಗಂಭೀರ ಗಾಯವಾಗಿರಲಿಲ್ಲ.

ಇನ್ನೂ ಕೆಲವು ಪಂದ್ಯಗಳಲ್ಲಿ ಬ್ಯಾಟರ್‌ಗಳೂ ಸಿಕ್ಸರ್‌ಗೆತ್ತಿದ ಚೆಂಡು ಸ್ಪೈಡರ್ ಕ್ಯಾಮ್ ವೈರ್‌ಗಳಿಗೆ ಬಡಿದು ದಿಕ್ಕು ತಪ್ಪಿದ ಘಟನೆಗಳೂ ನಡೆದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.