ನವದೆಹಲಿ:ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ವಿಕೆಟ್ ಕೀಪರ್ ಫಾರೂಕ್ ಇಂಜಿನಿಯರ್ ಕ್ರಿಕೆಟ್‌ಆಡಳಿತಾಧಿಕಾರಿಗಳ ಸಮಿತಿ(ಸಿಒಎ) ಹಾಗೂ ಎಂಎಸ್‌ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ವಿರುದ್ಧ ಹರಿಹಾಯ್ದಿದ್ದಾರೆ.
ಮಾಜಿ ಕ್ರಿಕೆಟಿಗ ದುಲೀಪ್ ವೆಂಗ್‌ಸರ್ಕರ್ ಅವರ ಕ್ರಿಕೆಟ್ ಅಕಾಡೆಮಿಗೆ ಭೇಟಿ ನೀಡಿದ್ದ ಸಂದರ್ಭ ಪುಣೆಯಲ್ಲಿ ಮಾತನಾಡಿರುವ 81 ವರ್ಷ ವಯಸ್ಸಿನ ಫಾರೂಕ್,ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ(ಬಿಸಿಸಿಐ) ಮಾಜಿ ನಾಯಕ ಸೌರವ್ ಗಂಗೂಲಿ ಅಧ್ಯಕ್ಷರಾಗಿ ನೇಮಕವಾಗಿರುವುದನ್ನು ಸ್ವಾಗತಿಸಿದ್ದಾರೆ.
ಸುಪ್ರೀಂಕೋರ್ಟ್‌ನಿಂದ ನೇಮಕವಾಗಿದ್ದಸಿಒಎ ವಿರುದ್ಧ ಗುಡುಗಿರುವ ಅವರು, ಬಿಸಿಸಿಐ ಗಂಗೂಲಿ ಅಧ್ಯಕ್ಷರಾಗುವುದರೊಂದಿಗೆ ಸಿಒಎ ಆಟಕ್ಕೆ ತೆರೆಬಿದ್ದಿದೆ ಎಂದಿದ್ದಾರೆ.‘ನನ್ನ ಅಭಿಪ್ರಾಯದಲ್ಲಿ ಸಿಒಎ ನೇಮಕವು ಸಂಪೂರ್ಣ ಸಮಯ ವ್ಯರ್ಥ ಅಷ್ಟೇ. ಸಮಿತಿಯಲ್ಲಿದ್ದ ಪ್ರತಿಯೊಬ್ಬರೂ ತಲಾ ₹ 3.5 ಕೋಟಿ ಜೇಬಿಗಿಳಿಸಿದ್ದಾರೆ. ಅದಲ್ಲದೆ ಸಭೆಗಳಿಗೆ ಹಾಜರಾಗಲು ಸಾವಿರ–ಸಾವಿರ ಹಣ ಪಡೆದಿದ್ದಾರೆ. ಇದೊಂದು ಅಪರಾಧವೇ ಸರಿ. ಅವರು ಮಧುಚಂದ್ರಕ್ಕೆ ತೆರಳಿದವರಂತೆ ಇದ್ದರು ಎನಿಸುತ್ತದೆ ನನಗೆ. ಅದು ಈಗ ಮುಗಿದಿದೆ’ ಎಂದು ಹೇಳಿದ್ದಾರೆ.
‘ಗಂಗೂಲಿ ಭಾರತ ತಂಡದ ಕೆಚ್ಚೆದೆಯ ಆಟಗಾರ. ನಾಯಕನಾಗಿ ಹಲವು ದಿಟ್ಟ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಮಂಡಳಿ ಅಧ್ಯಕ್ಷರಾಗಿಯೂ ಅದೇ ರೀತಿ ಕಾರ್ಯ ನಿರ್ವಹಿಸಲಿದ್ದಾರೆ ಎಂಬ ವಿಶ್ವಾಸವಿದೆ’ ಎಂದಿದ್ದಾರೆ.
ಆಯ್ಕೆ ಸಮಿತಿಯನ್ನುದ್ದೇಶಿಸಿ, ‘ನಾವು ಮಿಕ್ಕಿ ಮೌಸ್ ಬಳಗದಂತಹ ಆಯ್ಕೆ ಸಮಿತಿಯನ್ನು ಹೊಂದಿದ್ದೇವೆ’ ಎಂದು ಟೀಕಿಸಿದ್ದಾರೆ.ಆಯ್ಕೆ ಸಮಿತಿಯ ಸದಸ್ಯರು 2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್ ಸಂದರ್ಭದಲ್ಲಿ ಅನುಷ್ಕಾ ಶರ್ಮಾ(ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಪತ್ನಿ) ಬೇಕುಬೇಡಗಳನ್ನು ವಿಚಾರಿಸಿಕೊಳ್ಳುವಲ್ಲಿ ಮುಳುಗಿದ್ದರು ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
‘ಇಂತಹ ಸದಸ್ಯರು ಅರ್ಹತೆ ಗಳಿಸಿದ್ದು ಹೇಗೆ? ಅಲ್ಲಿರುವವರಲ್ಲಿ ಯಾರಾದರೂ ಒಬ್ಬರು ಹತ್ತರಿಂದ ಹನ್ನೆರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆಯೇ?’ ಎಂದು ಪ್ರಶ್ನಿಸಿದ್ದಾರೆ. ಮುಂದುವರಿದು, ದುಲೀಪ್ ವೆಂಗ್‌ಸರ್ಕರ್ ರೀತಿಯ ನಿಲುವುಗಳನ್ನು ಹೊಂದಿರುವವರು ಆಯ್ಕೆ ಸಮಿತಿಯಲ್ಲಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸದ್ಯ ಆಯ್ಕೆ ಸಮಿತಿ ಮುಖ್ಯಸ್ಥರಾಗಿರುವ ಪ್ರಸಾದ್ 6 ಟೆಸ್ಟ್ 17 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಸದಸ್ಯರಾದ ದೇವಂಗ್ ಗಾಂಧಿ 4 ಟೆಸ್ಟ್, 3 ಏಕದಿನ, ಸರಣ್‌ದೀಪ್ ಸಿಂಗ್ 3 ಟೆಸ್ಟ್, 5ಏಕದಿನ, ಜತಿನ್ ಪರಾಂಜೆ 4 ಏಕದಿನ ಹಾಗೂ ಗಗನ್ ಖೋಡಾ 2 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.
1961–1976ರ ಅವಧಿಯಲ್ಲಿ ಭಾರತ ಪರ ಆಡಿರುವ ಫಾರೂಕ್, 46 ಟೆಸ್ಟ್ ಹಾಗೂ 5 ಏಕದಿನ ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.