ADVERTISEMENT

ಸ್ಪಾಟ್‌ ಫಿಕ್ಸಿಂಗ್ ಪ್ರಕರಣ: ಶ್ರೀಶಾಂತ್‌ ಮೇಲಿನ ನಿಷೇಧ ಅಂತ್ಯ

ಪಿಟಿಐ
Published 13 ಸೆಪ್ಟೆಂಬರ್ 2020, 8:41 IST
Last Updated 13 ಸೆಪ್ಟೆಂಬರ್ 2020, 8:41 IST
ಎಸ್‌.ಶ್ರೀಶಾಂತ್‌
ಎಸ್‌.ಶ್ರೀಶಾಂತ್‌   

ನವದೆಹಲಿ: ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ನಿಷೇಧಕ್ಕೆ ಗುರಿಯಾಗಿದ್ದ ಭಾರತ ಕ್ರಿಕೆಟ್‌ ತಂಡದ ವೇಗಿ ಎಸ್‌.ಶ್ರೀಶಾಂತ್‌ ಅವರ ಶಿಕ್ಷೆಯ ಅವಧಿ ಕೊನೆಗೊಂಡಿದೆ.‌ ಏಳು ವರ್ಷಗಳ ನಿಷೇಧ ಅವಧಿಭಾನುವಾರ ಪೂರ್ಣಗೊಂಡಿದೆ.

2013ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಡೆದಿದ್ದ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಶ್ರೀಶಾಂತ್ ಸಿಕ್ಕಿಬಿದ್ದಿದ್ದರು. ಬಿಸಿಸಿಐನಿಂದ ನಿಷೇಧ ಶಿಕ್ಷೆಗೆ ಒಳಗಾಗಿದ್ದರು.

ನಿಷೇಧ ಅಂತ್ಯಗೊಂಡ ಬಳಿಕ ಕನಿಷ್ಠ ದೇಶಿ ಟೂರ್ನಿಗಳಲ್ಲಾದರೂ ಆಡುವ ಬಯಕೆಯನ್ನು 37 ವರ್ಷದ ಶ್ರೀಶಾಂತ್‌ ವ್ಯಕ್ತಪಡಿಸಿದ್ದರು. ಫಿಟ್‌ನೆಸ್‌ ಸಾಬೀತುಪಡಿಸಿದರೆ ಪಂದ್ಯಗಳಿಗೆ ಪರಿಗಣಿಸುವುದಾಗಿ ಶ್ರೀಶಾಂತ್‌ ಅವರಿಗೆ ರಾಜ್ಯ ಕೇರಳ ಕ್ರಿಕೆಟ್‌ ಸಂಸ್ಥೆಯು ಭರವಸೆ ನೀಡಿದೆ.

ADVERTISEMENT

‘ನಾನು ಈಗ ಎಲ್ಲ ಪ್ರಕರಣಗಳಿಂದ ಮುಕ್ತನಾಗಿದ್ದೇನೆ. ನಾನು ಅತ್ಯಂತ ಹೆಚ್ಚಾಗಿ ಪ್ರೀತಿಸುವ ಕ್ರಿಕೆಟ್‌ ಮುಂದುವರಿಸಲು ಬಯಸಿರುವೆ. ಅಭ್ಯಾಸ ಪಂದ್ಯವಾಗಿದ್ದರೂ ಅತ್ಯುತ್ತಮ ಎಸೆತಗಳನ್ನು ಹಾಕುತ್ತೇನೆ‘ ಎಂದು ನಿಷೇಧ ಕೊನೆಗೊಳ್ಳುವ ಎರಡು ದಿನಗಳ ಮೊದಲು ಅವರು ಟ್ವೀಟ್ ಮಾಡಿದ್ದರು.

ಇದೇ ವೇಳೆ ತರಬೇತುದಾರನಾಗುವ ಬಯಕೆಯನ್ನು ಅವರು ವ್ಯಕ್ತಪಡಿಸಿದ್ದರು.

ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ದೇಶಿ ಕ್ರಿಕೆಟ್‌ ಟೂರ್ನಿಗಳನ್ನು ಮುಂದೂಡಲಾಗಿದೆ. ಶ್ರೀಶಾಂತ್‌ ಅವರಿಗೆ ಕೇರಳ ಸಂಸ್ಥೆಯು ಆಡುವ ಅವಕಾಶ ನೀಡಿದರೆ ಅವರು ಪಂದ್ಯಗಳಲ್ಲಿ ಕಣಕ್ಕಿಳಿಯಬಹುದು.

’ಕೋವಿಡ್‌ನಿಂದ ಉಂಟಾದ ಬಿಕ್ಕಟ್ಟು ಸಹಜಸ್ಥಿತಿಗೆ ಬಂದ ಬಳಿಕ ದೇಶಿ ಕ್ರಿಕೆಟ್‌ ಟೂರ್ನಿಗಳನ್ನು ಆರಂಭಿಸಲು ಪ್ರಯತ್ನಿಸುತ್ತೇವೆ‘ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್‌ ಗಂಗೂಲಿ ಅವರು ರಾಜ್ಯ ಸಂಸ್ಥೆಗಳಿಗೆ ಇತ್ತೀಚೆಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.

2013ರಲ್ಲಿ ಬಿಸಿಸಿಐನ ಶಿಸ್ತು ಸಮಿತಿಯು, ಶ್ರೀಶಾಂತ್ ಅವರೊಂದಿಗೆ ರಾಜಸ್ಥಾನ ತಂಡದ ಸಹ ಆಟಗಾರರಾದ ಅಜಿತ್‌ ಚಾಂಡಿಲಾ ಹಾಗೂ ಅಂಕಿತ್‌ ಚೌಹಾನ್‌ ಅವರ ಮೇಲೂ ನಿಷೇಧ ಹೇರಿತ್ತು.

ಭಾರತ ತಂಡದ ಪರ ಶ್ರೀಶಾಂತ್ ಅವರು 27 ಟೆಸ್ಟ್‌ ಹಾಗೂ 53 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಕ್ರಮವಾಗಿ 87 ಹಾಗೂ 75 ವಿಕೆಟ್‌ಗಳನ್ನು ಗಳಿಸಿದ್ದಾರೆ. 10 ಟ್ವೆಂಟಿ–20 ಪಂದ್ಯಗಳ ಮೂಲಕ ಏಳು ವಿಕೆಟ್‌ ಸಂಪಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.