ಕೊಚ್ಚಿ: ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ ಎಸ್.ಶ್ರೀಶಾಂತ್ ಅವರು ಏಳು ವರ್ಷಗಳ ನಿಷೇಧದ ಬಳಿಕ ಮೊದಲ ಬಾರಿ ಕ್ರೀಡಾಂಗಣಕ್ಕಿಳಿಯಲು ಸಜ್ಜಾಗಿದ್ದಾರೆ. ಕೇರಳ ಕ್ರಿಕೆಟ್ ಸಂಸ್ಥೆಯ (ಕೆಸಿಎ) ಪ್ರೆಸಿಡೆಂಟ್ಸ್ ಕಪ್ ಟಿ–20 ಟೂರ್ನಿಯಲ್ಲಿ ಅವರು ಆಡಲಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿದ ಆರೋಪದಲ್ಲಿ ಬಿಸಿಸಿಐ ಶ್ರೀಶಾಂತ್ ಮೇಲೆ ಏಳು ವರ್ಷಗಳ ನಿಷೇಧ ಹೇರಿತ್ತು. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಅವರ ನಿಷೇಧದ ಅವಧಿ ಪೂರ್ಣಗೊಂಡಿದೆ.
‘ಅಲಪ್ಪುಳದಲ್ಲಿ ನಡೆಯುವ ಟೂರ್ನಿಯಲ್ಲಿ ಶ್ರೀಶಾಂತ್ ಅವರು ಕೆಸಿಎ ಟೈಗರ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕೇರಳ ರಾಜ್ಯ ತಂಡದ ನಾಯಕ ಸಚಿನ್ ಬೇಬಿ ಈ ತಂಡದ ಸಾರಥ್ಯ ವಹಿಸಲಿದ್ದಾರೆ‘ ಎಂದು ಕೆಸಿಎ ಅಧಿಕಾರಿಯೊಬ್ಬರು ಹೇಳಿದ್ದಾರೆ.
’ಕೆಸಿಎ ರಾಯಲ್ಸ್, ಕೆಸಿಎ ಟೈಗರ್ಸ್, ಕೆಸಿಎ ಟಸ್ಕರ್ಸ್, ಕೆಸಿಎ ಈಗಲ್ಸ್, ಕೆಸಿಎ ಪ್ಯಾಂಥರ್ಸ್ ಹಾಗೂ ಕೆಸಿಎ ಲಯನ್ಸ್ ಹೆಸರಿನ ಆರು ತಂಡಗಳು ಟೂರ್ನಿಯಲ್ಲಿ ಸ್ಪರ್ಧಿಸಲಿವೆ‘ ಎಂದು ಕೇರಳ ಕ್ರಿಕೆಟ್ ಸಂಸ್ಥೆ ತಿಳಿಸಿದೆ.
ಶ್ರೀಶಾಂತ್, ಬೇಬಿ ಅವರನ್ನು ಹೊರತುಪಡಿಸಿ ಪ್ರಮುಖ ಆಟಗಾರರಾದ ಬಾಸಿಲ್ ಥಂಪಿ, ರೋಹನ್ ಪ್ರೇಮ್, ಮಿಥುನ್ ಎಸ್, ಕೆ.ಎಂ.ಆಸಿಫ್ ಕೂಡ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.