ADVERTISEMENT

ಇಂದು ಎರಡನೇ ಕ್ವಾಲಿಫೈಯರ್‌: ಸನ್‌ರೈಸರ್ಸ್‌ಗೆ ರಾಯಲ್ಸ್‌ ಸ್ಪಿನ್‌ ಪರೀಕ್ಷೆ

ಪಿಟಿಐ
Published 23 ಮೇ 2024, 23:33 IST
Last Updated 23 ಮೇ 2024, 23:33 IST
   

ಚೆನ್ನೈ: ಅಪಾಯಕಾರಿ ಪವರ್‌ಹಿಟ್ಟರ್‌ಗಳೆನಿಸಿರುವ ಟ್ರಾವಿಸ್ ಹೆಡ್‌ ಮತ್ತು ಅಭಿಷೇಕ್ ಶರ್ಮಾ ಅವರಿಗೆ ಐಪಿಎಲ್‌ನ ಎರಡನೇ ಕ್ವಾಲಿಫೈಯರ್‌ನಲ್ಲಿ ಯಜುವೇಂದ್ರ ಚಾಹಲ್ ಮತ್ತು ರವಿಚಂದ್ರನ್‌ ಅಶ್ವಿನ್‌ ಅವರಿಂದ ಭಿನ್ನ ರೀತಿಯ ಸವಾಲು ಎದುರಾಗಲಿದೆ. ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ ರಾಯಲ್ಸ್ ನಡುಣ ಈ ಪಂದ್ಯ ಶುಕ್ರವಾರ ನಡೆಯಲಿದ್ದು ಉತ್ತಮ ಹೋರಾಟ ನಿರೀಕ್ಷಿಸಲಾಗಿದೆ.

ಅಭಿಮಾನಿಗಳಿಂದ ‘ಟ್ರಾವಿಷೇಕ್‌’ ಎಂದು ಅಕ್ಕರೆಯಿಂದ ಕರೆಸಿಕೊಳ್ಳುವ ಈ ಜೋಡಿ ಶಕ್ತಿಶಾಲಿ ಹೊಡೆತಗಳ ಆಟವನ್ನು ಹೊಸ ಎತ್ತರಕ್ಕೆ ಒಯ್ದಿದ್ದಾರೆ. ಆಸ್ಟ್ರೇಲಿಯಾದ ಹೆಡ್‌ (533 ರನ್‌, ಸ್ಟ್ರೈಕ್‌ರೇಟ್‌ 199.62) ಮತ್ತು ಅಭಿಷೇಕ್ (470 ರನ್‌, 207.04) ಒಟ್ಟು 72 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ. 96 ಬೌಂಡರಿಗಳು ಹರಿದಿವೆ. ಇವರಿಬ್ಬರು ಸಾಲದೆಂಬಂತೆ ಕ್ಲಾಸೆನ್ (413 ರನ್‌, ಸ್ಟ್ರೈಕ್‌ರೇಟ್‌ 180) ಕೂಡ ಅಬ್ಬರದಾಟ ಆಡುವವರೇ. ಅವರೂ 34 ಸಿಕ್ಸರ್‌ಗಳನ್ನು ಅಟ್ಟಿದ್ದಾರೆ.

ಆದರೆ ಪಂದ್ಯ ನಡೆಯುತ್ತಿರುವುದು ವಾಂಖೆಡೆ ಅಥವಾ ಉಪ್ಪಳದ ರಾಜೀವ ಗಾಂಧಿ ಕ್ರೀಡಾಂಗಣದಲ್ಲಿ ಅಲ್ಲ. ಮಂದಗತಿಯ ಚಿಪಾಕ್‌ ಪಿಚ್‌ನಲ್ಲಿ. ಚೆಂಡು ಸುಲಭವಾಗಿ ಬ್ಯಾಟರ್‌ಗಳ ಅಂದಾಜಿಗೆ ಸಿಗುವುದಿಲ್ಲ.

ADVERTISEMENT

ರವಿಚಂದ್ರನ್ ಅಶ್ವಿನ್‌ ಈ ಕ್ರೀಡಾಂಗಣದಲ್ಲಿ ಆಡಿ ಪಳಗಿದವರು. ಟೂರ್ನಿ ಕೊನೆಯ ಹಂತಕ್ಕೆ ಸಾಗುತ್ತಿರುವಂತೆ ಅವರು ಒಳ್ಳೆಯ ಲಯಕ್ಕೆ ಬಂದಿದ್ದಾರೆ. ದೇಶದ ಅತ್ಯುತ್ತಮ ಲೆಗ್‌ಸ್ಪಿನ್ನರ್‌ ಚಾಹಲ್ ಅವರಿಗೆ ಸಾಥ್‌ ನೀಡಲಿದ್ದಾರೆ. ಎದುರಾಳಿ ತಂಡದ ಅಪಾಯಕಾರಿ ಆಟಗಾರರಿಗೆ ಮೂಗುದಾರ ಹಾಕಿ ಪಂದ್ಯದಲ್ಲಿ ನಿಯಂತ್ರಣ ಪಡೆಯಬಹುದೆಂಬ ಲೆಕ್ಕಾಚಾರ ಅವರದು.

ಸನ್‌ರೈಸರ್ಸ್ ಬೌಲಿಂಗ್‌ ಟಿ.ನಟರಾಜನ್ ಅವರನ್ನು ನೆಚ್ಚಿಕೊಂಡಿದೆ. ಅವರು ತಂಡದ ಪರ ಅತಿ ಹೆಚ್ಚು ವಿಕೆಟ್‌ ಪಡೆದಿದ್ದಾರೆ. ಇದು ಅವರಿಗೆ ತವರು ನೆಲವಾಗಿದ್ದು ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ. ಭುವನೇಶ್ವರ ಕುಮಾರ್ ಮತ್ತು ಕಮಿನ್ಸ್ ಅನುಭವ ತಂಡದ ನೆರವಿಗಿದೆ. ಕುಮಾರ್ ಎರಡು ಪಂದ್ಯಗಳಿಂದ ವಿಕೆಟ್‌ ಪಡೆದಿಲ್ಲ. ಆದರೆ ಸ್ಪಿನ್‌ ದಾಳಿ ಬಲವಾಗಿಲ್ಲ. ಮಯಂಕ್ ಮಾರ್ಕಂಡೆ ಮತ್ತು ಶಾಬಾಜ್ ಅಹ್ಮದ್ ಅವರನ್ನು ನಂಬಿಕೊಳ್ಳಬೇಕಾಗಿದೆ.

ರಾಜಸ್ಥಾನ ರಾಯಲ್ಸ್, ಐದು ಪಂದ್ಯಗಳ ಸೋಲಿನ ಸರಪಣಿಯನ್ನು, ಆರ್‌ಸಿಬಿ ಎದುರು ಎಲಿಮಿನೇಷನ್ ಪಂದ್ಯದಲ್ಲಿ ಕಡಿದುಕೊಂಡಿತ್ತು. ಅದರ ಸರ್ವಾಂಗೀಣ ಪ್ರದರ್ಶನ ಗೆಲುವಿಗೆ ನೆರವಾಗಿತ್ತು.

ಜೈಸ್ವಾಲ್ ಅವರು ಲಯಕ್ಕೆ ಮರಳುತ್ತಿದ್ದಾರೆ. ಸಂಜು ಸ್ಯಾಮ್ಸನ್ ಕಳೆದ ಮೂರು ಪಂದ್ಯಗಳಲ್ಲಿ 20ರ ಗಡಿ ದಾಟಿಲ್ಲ. ನಾಯಕನಾಗಿ ಅವರಿಗೆ ಹೊಣೆಯಿದೆ. ಧ್ರುವ್ ಜುರೇಲ್ ಕೂಡ ಒತ್ತಡದಲ್ಲಿದ್ದಾರೆ. ರೋವ್ಮನ್ ಪಾವೆಲ್ ಮತ್ತು ಶಿಮ್ರಾನ್ ಹೆಟ್ಮೆಯರ್ ಬಿರುಸಿನ ಆಟ ಆಡಬಲ್ಲವರು. ರಿಯಾನ್ ಪರಾಗ್ ಮಾತ್ರ ತಮ್ಮ ಮೇಲಿಟ್ಟ ನಂಬಿಕೆ ಹುಸಿಗೊಳಿಸಿಲ್ಲ.

ಮೇ 2ರಂದು ಹೈದರಾಬಾದಿನಲ್ಲಿ ಇವೆರಡು ತಂಡಗಳು ಮುಖಾಮುಖಿ ಆದಾಗ ಸನ್‌ರೈಸರ್ಸ್ ಒಂದು ರನ್‌ನಿಂದ ಜಯಗಳಿಸಿತ್ತು.

ಪಂದ್ಯ ಆರಂಭ: ರಾತ್ರಿ 7.30

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಜಿಯೊ ಸಿನಿಮಾ ಆ್ಯಪ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.