ADVERTISEMENT

IPL 2024 | MI Vs SRH: ಪ್ಲೇಆಫ್ ಸ್ಥಾನದ ಮೇಲೆ ಸನ್‌ರೈಸರ್ಸ್ ಕಣ್ಣು

ಪಿಟಿಐ
Published 5 ಮೇ 2024, 16:35 IST
Last Updated 5 ಮೇ 2024, 16:35 IST
   

ಮುಂಬೈ: ಪ್ಲೇ ಆಫ್‌ ಹಂತ ಪ್ರವೇಶಿಸುವ ತುಂಬು ವಿಶ್ವಾಸದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡವು ಸೋಮವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಕಣಕ್ಕಿಳಿಯಲಿದೆ. 

ಹತ್ತು ಪಂದ್ಯಗಳಲ್ಲಿ ಆಡಿ 12 ಅಂಕ ಗಳಿಸಿರುವ ಸನ್‌ರೈಸರ್ಸ್ ತಂಡವು ಅಂಕಪಟ್ಟಿಯಲ್ಲಿ ಸದ್ಯ ನಾಲ್ಕನೇ ಸ್ಥಾನದಲ್ಲಿದೆ.  ಆದರೆ ಮುಂಬೈ ತಂಡವು ಈಗಾಗಲೇ ಪ್ಲೇ ಆಫ್ ಹಾದಿಯಿಂದ ಹೊರಬಿದ್ದಿದೆ. 

ಪ್ಯಾಟ್ ಕಮಿನ್ಸ್ ನಾಯಕತ್ವದ ಸನ್‌ರೈಸರ್ಸ್ ತಂಡವು ಟೂರ್ನಿಯ ಆರಂಭದ ಪಂದ್ಯಗಳಲ್ಲಿ ರನ್‌ಗಳ ಹೊಳೆಯನ್ನೇ ಹರಿಸಿತ್ತು. 250 ಕ್ಕೂ ಹೆಚ್ಚು ರನ್‌ಗಳ ಮೊತ್ತವನ್ನು ಮೂರು ಬಾರಿ ದಾಖಲಿಸಿತ್ತು. ಆದರೆ ಕಳೆದ ಕೆಲವು ಪಂದ್ಯಗಳಲ್ಲಿ 200ರ ಗಡಿ ಮುಟ್ಟುವಲ್ಲಿ ಸಫಲವಾಗಿಲ್ಲ. 

ADVERTISEMENT

ಆದ್ದರಿಂದ ಆ ವೈಫಲ್ಯಗಳನ್ನು ಸುಧಾರಿಸಿಕೊಂಡು ಕಣಕ್ಕಿಳಿಯುವ ವಿಶ್ವಾಸದಲ್ಲಿದೆ. ಸದ್ಯ ಅಂಕಪಟ್ಟಿಯ ಅಗ್ರಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್ (16 ಅಂಕ), ಕೋಲ್ಕತ್ತ ನೈಟ್‌ ರೈಡರ್ಸ್ (14) ಮತ್ತು ಲಖನೌ ಸೂಪರ್‌ಜೈಂಟ್ಸ್‌ (12) ತಂಡಗಳನ್ನು ಹಿಂದಿಕ್ಕಿ ಮೇಲಕ್ಕೇರಬೇಕಾದರೆ ಸನ್‌ರೈಸರ್ಸ್ ತಂಡವು ಮುಂದಿನ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಜಯ ಸಾಧಿಸಬೇಕಿದೆ. 

ಹತ್ತು ಅಂಕ ಗಳಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳೂ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವ ಪ್ರಯತ್ನದಲ್ಲಿವೆ.

ವಾಂಖೆಡೆ ಕ್ರೀಡಾಂಗಣದಲ್ಲಿರುವ ಪಿಚ್‌ ಬ್ಯಾಟರ್‌ಗಳಿಗೆ ಹೆಚ್ಚು ನೆರವು ನೀಡುವಂತಿದೆ. ಸನ್‌ರೈಸರ್ಸ್ ತಂಡದ ಸ್ಫೋಟಕ ಶೈಲಿಯ ಬ್ಯಾಟರ್‌ಗಳಾದ ಟ್ರಾವಿಡ್ ಹೆಡ್, ಅಭಿಷೇಕ್ ಶರ್ಮಾ, ಹೆನ್ರಿಚ್ ಕ್ಲಾಸೆನ್, ಏಡನ್ ಮರ್ಕರಂ ನಿತೀಶ್ ರೆಡ್ಡಿ ಹಾಗೂ ಅಬ್ದುಲ್ ಸಮದ್ ಅವರು ಇಲ್ಲಿ ರನ್‌ಗಳ ಹೊಳೆ ಹರಿಸುವ ತವಕದಲ್ಲಿದ್ದಾರೆ. ಉಭಯ ತಂಡಗಳು ಮೊದಲ ಸುತ್ತಿನಲ್ಲಿ ಹೈದರಾಬಾದಿನಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಸನ್‌ರೈಸರ್ಸ್‌ 277 ರನ್‌ ಗಳಿಸಿತ್ತು.  ತಂಡದ ಬೌಲಿಂಗ್‌ ಕೂಡ ಉತ್ತಮವಾಗಿದೆ. ಕಮಿನ್ಸ್, ಟಿ. ನಟರಾಜನ್ ಹಾಗೂ ಭುವನೇಶ್ವರ್ ಕುಮಾರ್  ಉತ್ತಮ ಲಯದಲ್ಲಿದ್ದಾರೆ. 

ಹಾಗೆ ನೋಡಿದರೆ; ಹೈದರಾಬಾದ್ ತಂಡಕ್ಕಿಂತ ಮುಂಬೈ ಬೌಲಿಂಗ್ ವಿಭಾಗ ಚೆನ್ನಾಗಿದೆ. ಜಸ್‌ಪ್ರೀತ್ ಬೂಮ್ರಾ, ಗೆರಾಲ್ಡ್ ಕೋಝಿ, ಆಕಾಶ್ ಮಧ್ವಾಲ್, ನುವಾನ್ ತುಷಾರ ಮತ್ತು ಪಿಯೂಷ್ ಚಾವ್ಲಾ ಉತ್ತಮ ಲಯದಲ್ಲಿದ್ದಾರೆ. ಆದರೆ ಬ್ಯಾಟಿಂಗ್ ವಿಭಾಗ ಮಾತ್ರ ಸ್ಥಿರವಾಗಿಲ್ಲ. ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ರೊಮರಿಯೊ ಶೆಫರ್ಡ್ ಹಾಗೂ ಇಶಾನ್ ಕಿಶನ್ ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ದೊಡ್ಡ ಇನಿಂಗ್ಸ್ ಆಡಿದರೆ ಮುಂಬೈ ತಂಡಕ್ಕೆ ಜಯದ ‘ಸಮಾಧಾನ’ ಸಿಗಬಹುದು.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊ ಸಿನಿಮಾ ಆ್ಯಪ್. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.