ಹೈದರಾಬಾದ್: ಸನ್‌ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟನ್ಸ್ ನಡುವಣ ಐಪಿಎಲ್ ಪಂದ್ಯ ಗುರುವಾರ ಮಳೆಯಿಂದಾಗಿ ನಡೆಯಲಿಲ್ಲ. ಒಂದೂ ಎಸೆತ ಕಾಣದೇ ಪಂದ್ಯ ರದ್ದಾಗಿ ಉಭಯ ತಂಡಗಳಿಗೆ ತಲಾ ಒಂದು ಪಾಯಿಂಟ್ ದೊರೆಯಿತು. ಪರಿಣಾಮ ಸನ್‌ರೈಸರ್ಸ್ ತಂಡ 13 ಪಂದ್ಯಗಳಿಂದ 15 ಪಾಯಿಂಟ್ಸ್ ಕಲೆಹಾಕಿ ಪ್ಲೇಆಫ್‌ಗೆ ಸ್ಥಾನ ಖಚಿಪಡಿಸಿದ ಮೂರನೇ ತಂಡ ಎನಿಸಿತು.
ಕೋಲ್ಕತ್ತ ನೈಟ್ ರೈಡರ್ಸ್ (13 ಪಂದ್ಯಗಳಿಂದ 19 ಪಾಯಿಂಟ್) ಮತ್ತು ರಾಜಸ್ಥಾನ ರಾಯಲ್ಸ್ (16) ಇದಕ್ಕೆ ಮೊದಲೇ ಪ್ಲೇ ಆಫ್ ಖಚಿತಪಡಿಸಿಕೊಂಡಿದ್ದವು. ಸನ್‌ರೈಸರ್ಸ್ ತಂಡ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿಯಿತು. ಆ ತಂಡಕ್ಕೆ ಇನ್ನೊಂದು ಪಂದ್ಯ (ಮೇ 19ರಂದು ಪಂಜಾಬ್ ಕಿಂಗ್ಸ್ ವಿರುದ್ಧ) ಆಡಲು ಇದೆ.
2022ರ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡಕ್ಕೆ ಎರಡನೇ ಬಾರಿ ಮಳೆ ಕಾಡಿತು. ಅದು 14 ಪಂದ್ಯಗಳಿಂದ 12 ಪಾಯಿಂಟ್ಸ್ ಕಲೆಹಾಕಿ ಲೀಗ್ ವ್ಯವಹಾರ ಪೂರೈಸಿತು. ಅಹಮದಾಬಾದಿನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಪಂದ್ಯವೂ ಮಳೆಯ ಪಾಲಾದ ಪರಿಣಾಮ ಅದರ ಪ್ಲೇ ಆಫ್ ಆಸೆಯೂ ಕೊಚ್ಚಿಹೋಗಿತ್ತು.
ರಾತ್ರಿ 10.05ಕ್ಕೆ ಅಂಪೈರ್‌ಗಳಾದ ನಂದಕಿಶೋರ್ ಮತ್ತು ವಿರೇಂದರ್ ಶರ್ಮಾ ಕೊಡೆ ಹಿಡಿದುಕೊಂಡೇ ಕ್ರೀಡಾಂಗಣಕ್ಕೆ ಇಳಿದರು. ಮೈದಾನದ ಸಿಬ್ಬಂದಿ ಜೊತೆ ಮಾತುಕತೆ ನಡೆಸಿದರು. ಆದರೆ ಮಳೆ ನಿಲ್ಲುವ ಸೂಚನೆ ಕಾಣಲಿಲ್ಲ. ಹೀಗಾಗಿ ನಿಗದಿತ ಸಮಯಕ್ಕೆ (10.56) ಕಾಯದೇ 10.10 ಗಂಟೆಗೆ ಪಂದ್ಯ ರದ್ದುಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು.
ಇನ್ನುಳಿದ ಒಂದು ಸ್ಥಾನಕ್ಕೆ ನಾಲ್ಕು ತಂಡಗಳ ಪೈಪೋಟಿಯಿದೆ. ಚೆನ್ನೈ ಸೂಪರ್ ಕಿಂಗ್ಸ್ (14), ರಾಯಲ್ ಚಾಲೆಂಜರ್ಸ್ ಬೆಂಗಳೂರು (12), ಲಖನೌ ಸೂಪರ್ ಜೈಂಟ್ಸ್ (12) ಕೂಡ ಪ್ಲೇ ಆಫ್ ಕಣದಲ್ಲಿವೆ. ಲಖನೌ ಶುಕ್ರವಾರ ಮುಂಬೈ ವಿರುದ್ಧ ಗೆದ್ದಲ್ಲಿ ಅದೂ 14 ಪಾಯಿಂಟ್ಸ್ ಗಳಿಸಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ನಡುವಣ ಪಂದ್ಯ ನಿರ್ಣಾಯಕವಾಗಲಿದೆ. ಈ ಪಂದ್ಯ ಬೆಂಗಳೂರಿನಲ್ಲಿ ಇದೇ 18ರಂದು ನಡೆಯಲಿದೆ. ಚೆನ್ನೈ (13 ಪಂದ್ಯಗಳಿಂದ 14 ಪಾಯಿಂಟ್) ಈಗ ನಾಲ್ಕನೇ ಸ್ಥಾನದಲ್ಲಿದ್ದರೆ, ಬೆಂಗಳೂರಿನ ತಂಡ (13 ಪಂದ್ಯಗಳಿಂದ 12) ಆರನೇ ಸ್ಥಾನದಲ್ಲಿದೆ. ಪಂದ್ಯಕ್ಕೆ ಮಳೆಯಿಂದ ಅಡ್ಡಿಯಾದಲ್ಲಿ ಚೆನ್ನೈ ಹಾದಿ ಸುಗಮವಾಗಲಿದೆ.
ಒಂದೊಮ್ಮೆ ಆರ್‌ಸಿಬಿ, ಕೊನೆಯ ಪಂದ್ಯದಲ್ಲಿ ಗೆದ್ದಲ್ಲಿ ಅದೂ 14 ಪಾಯಿಂಟ್ಸ್ ಗಳಿಸಲಿದೆ. ಆದರೆ ಕನಿಷ್ಠ 18 ರನ್‌ಗಳಿಂದ ಅಥವಾ 11 ಎಸೆತಗಳಿರುವಂತೆ ಗೆದ್ದಲ್ಲಿ ಮಾತ್ರ ಆರ್‌ಸಿಬಿಯ ನಿವ್ವಳ ರನ್ ದರ ಹೆಚ್ಚಿ ಪ್ಲೇಆಫ್ ಅವಕಾಶ ಸಿಗಲಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.