ADVERTISEMENT

IPL 2024 | ಸತತ ಆರು ಸೋಲಿನ ಬಳಿಕ ಜಯದ ಹಾದಿಗೆ ಮರಳಿದ ಆರ್‌ಸಿಬಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಏಪ್ರಿಲ್ 2024, 18:03 IST
Last Updated 25 ಏಪ್ರಿಲ್ 2024, 18:03 IST
<div class="paragraphs"><p>ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು</p></div>

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು

   

ಪಿಟಿಐ ಚಿತ್ರ

ಹೈದರಾಬಾದ್: ಈ ಐಪಿಎಲ್ ಟೂರ್ನಿಯಲ್ಲಿ ಇದೇ ಮೊದಲ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್‌ಗಳು ಗೆಲುವಿನ ಕಾಣಿಕೆ ನೀಡಿದರು.

ADVERTISEMENT

ಗುರುವಾರ ಉಪ್ಪಳದ ರಾಜೀವ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಫಫ್ ಡುಪ್ಲೆಸಿ ಬಳಗವು 35 ರನ್‌ಗಳಿಂದ ಜಯಿಸಿತು. ಟೂರ್ನಿಯಲ್ಲಿ ತಂಡಕ್ಕೆ ಇದು ಎರಡನೇ ಜಯ. ಸತತ ಆರು ಪಂದ್ಯಗಳ ಸೋಲಿನ ನಂತರ ಈ ಗೆಲುವು ಒಲಿಯಿತು. 

ಟಾಸ್ ಗೆದ್ದ ಬೆಂಗಳೂರು ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.  ರಜತ್ ಪಾಟೀದಾರ್ (50; 20ಎ) ಮತ್ತು ವಿರಾಟ್ ಕೊಹ್ಲಿ (51; 43ಎ) ಅವರಿಬ್ಬರೂ 3ನೇ ವಿಕೆಟ್ ಜೊತೆಯಾಟ ದಲ್ಲಿ 65 ರನ್‌ ಸೇರಿಸಿದರು. ಇದರಿಂ ದಾಗಿ  20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 206 ರನ್ ಗಳಿಸಿತು.  ಗುರಿ ಬೆನ್ನತ್ತಿದ ಹೈದರಾಬಾದ್ ತಂಡವು 20 ಓವರ್‌ಗ ಳಲ್ಲಿ 8 ವಿಕೆಟ್‌ಗಳಿಗೆ 171 ರನ್ ಗಳಿಸಿತು.

ಈ ಬಾರಿಯ ಟೂರ್ನಿಯ 3 ಪಂದ್ಯಗಳಲ್ಲಿ ಸನ್‌ರೈಸರ್ಸ್ ತಂಡವು 250ಕ್ಕಿಂತ ಹೆಚ್ಚಿನ ಮೊತ್ತ ಗಳಿಸಿತ್ತು. ಆದ್ದರಿಂದ ಆತಿಥೇಯ ತಂಡವು ಈ ಗುರಿಯನ್ನೂ  ತಂಡವು ಸುಲಭವಾಗಿ ಮುಟ್ಟುವ ನಿರೀಕ್ಷೆ ಇತ್ತು.  ಮೊದಲ ಸುತ್ತಿನಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದಾಗ ಸನ್‌ರೈಸರ್ಸ್‌ ದಾಖಲೆಯ 287 ರನ್‌ ಗಳಿಸಿತ್ತು. ಆದರೆ ಪ್ಯಾಟ್ ಕಮಿನ್ಸ್ ಬಳಗವನ್ನು ಅದರದ್ದೇ ತವರಿನಲ್ಲಿ ಮಣಿಸಿದ ಬೆಂಗಳೂರು ಬೌಲರ್‌ಗಳು ಮುಯ್ಯಿ ತೀರಿಸಿಕೊಂಡರು. 

ಕ್ಯಾಮರಾನ್ ಗ್ರೀನ್ (12ಕ್ಕೆ2), ಕರ್ಣ ಶರ್ಮಾ (29ಕ್ಕೆ2) ಹಾಗೂ ಸ್ವಪ್ನಿಲ್ ಸಿಂಗ್ (40ಕ್ಕೆ2) ಕಮಿನ್ಸ್ ಬಳಗವನ್ನು ಕಟ್ಟಿಹಾಕಿದರು. ಹೈದರಾ ಬಾದ್ ತಂಡದ ಯಾವುದೇ ಬ್ಯಾಟರ್‌ ಕೂಡ ಈ ಪಂದ್ಯದಲ್ಲಿ ಅರ್ಧಶತಕ ವನ್ನೂ ಗಳಿಸಲಿಲ್ಲ.  ವಿಲ್ ಜ್ಯಾಕ್ಸ್‌ ಮೊದಲ ಓವರ್‌ನಲ್ಲಿಯೇ ಟ್ರಾವಿಸ್ ಹೆಡ್ ವಿಕೆಟ್ ಗಳಿಸುವುದರೊಂದಿಗೆ ಮೊದಲ ಪೆಟ್ಟುಕೊಟ್ಟರು. ನಂತರದ ಆಟದಲ್ಲಿ ಉಳಿದ ಬೌಲರ್‌ಗಳು ಬಿಗಿ ಹಿಡಿತ ಸಾಧಿಸಿದರು. ಈ ನಡುವೆ ಅಭಿಷೇಕ್ ಶರ್ಮಾ (31; 13ಎ), ಶಾಬಾಜ್ ಅಹಮದ್ (ಔಟಾಗದೆ 40) ಹಾಗೂ ಕಮಿನ್ಸ್ (31; 15ಎ) ಮಾಡಿದ ಪ್ರಯತ್ನಕ್ಕೆ ಜಯ ಒಲಿಯಲಿಲ್ಲ.

ವಿರಾಟ್–ರಜತ್ ಜೊತೆಯಾಟ: ವಿರಾಟ್ ಮತ್ತು ನಾಯಕ ಫಫ್ ಡುಪ್ಲೆಸಿ (25; 12ಎ) ಅವರು ಮಿಂಚಿನ ಆರಂಭ ನೀಡಿದರು. 3.5 ಓವರ್‌ಗಳಲ್ಲಿ 48 ರನ್‌ ಸೇರಿಸಿದರು. ಅದರಲ್ಲೂ ಡುಪ್ಲೆಸಿ 3 ಬೌಂಡರಿ ಹಾಗೂ 1 ಸಿಕ್ಸರ್‌ ಹೊಡೆದು ಮಿಂಚಿದರು. ನಟರಾಜನ್ ಎಸೆತದಲ್ಲಿ ಡುಪ್ಲೆಸಿ ಔಟಾದರು. ವಿಲ್ ಜ್ಯಾಕ್ಸ್‌ ಆರು ರನ್ ಗಳಿಸಿ ಔಟಾದರು. 

ಇದರಿಂದಾಗಿ ವಿರಾಟ್ ತಮ್ಮ ಆಟದ ವೇಗ ತಗ್ಗಿಸಿ ಇನಿಂಗ್ಸ್‌ಗೆ ಸ್ಥಿರತೆ ತರುವ ಪ್ರಯತ್ನ ಮಾಡಿದರು. ಆದರೆ ರಜತ್ ಮಾತ್ರ ಬೀಡುಬೀಸಾದ ಆಟವಾಡಿದರು. 250ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದ ಅವರು ಐದು ಸಿಕ್ಸರ್‌ಗಳ ಚಿತ್ತಾರ ಬಿಡಿಸಿದರು. ಪ್ಯಾಟ್‌ ಕಮಿನ್ಸ್‌ ಸೇರಿದಂತೆ ಎಲ್ಲ ಬೌಲರ್‌ಗಳಿಗೂ ಬಿಸಿ ಮುಟ್ಟಿಸಿದರು. ಇದರಿಂದಾಗಿ ಮೊತ್ತ ಹೆಚ್ಚಿತು. 13ನೇ ಓವರ್‌ನಲ್ಲಿ ಜಯದೇವ್ ಉನದ್ಕತ್ ಎಸೆತವನ್ನು ಆಡುವ ಪ್ರಯತ್ನದಲ್ಲಿ ರಜತ್ ಅವರು ಅಬ್ದುಲ್ ಸಮದ್‌ಗೆ ಕ್ಯಾಚಿತ್ತರು.  ಉನದ್ಕತ್ ಹಾಕಿದ ಇನ್ನೊಂದು ಓವರ್‌ನಲ್ಲಿ ವಿರಾಟ್ ಕೂಡ ಡಗ್‌ಔಟ್‌ ಸೇರಿದರು.

ಒಂದು ತಿಂಗಳ ನಂತರ ಗೆಲುವು
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬರೋಬ್ಬರಿ ಒಂದು ತಿಂಗಳ ನಂತರ ಗೆಲುವಿನ ಮುಖ ನೋಡಿತು. ಈ ಟೂರ್ನಿಯಲ್ಲಿ ಆರ್‌ಸಿಬಿ ತಂಡವು ಮಾರ್ಚ್‌ 25ರಂದು ಪಂಜಾಬ್ ಕಿಂಗ್ಸ್‌ ಎದುರು ಜಯಿಸಿತ್ತು. ನಂತರದ ಆರು ಪಂದ್ಯಗಳಲ್ಲಿಯೂ ಸೋತಿತ್ತು. ಗುರುವಾರ (ಏ.25)ನಡೆದ ಪಂದ್ಯದಲ್ಲಿ ಗೆದ್ದು, ಸೋಲಿನ ಸರಪಳಿ ಕಳಚಿಕೊಂಡಿತು. ಟೂರ್ನಿಯ ಮೊದಲ ಪಂದ್ಯದಲ್ಲಿ ಚೆನ್ನೈ ಎದುರು ಕೂಡ ತಂಡವು ಸೋತಿತ್ತು.  ಇದರೊಂದಿಗೆ ಒಟ್ಟು 9 ಪಂದ್ಯಗಳನ್ನಾಡಿ ಏಳು ಸೋಲುಗಳ ಕಹಿ ಅನುಭವಿದೆ. ಎರಡರಲ್ಲಿ ಮಾತ್ರ ಜಯಿಸಿದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.