ADVERTISEMENT

‌ಫಿಕ್ಸಿಂಗ್ ಆರೋಪ‌: ಹಿರಿಯ ಕ್ರಿಕೆಟಿಗ ಅರವಿಂದ‌ ಡಿಸಿಲ್ವಾ ವಿಚಾರಣೆ

ಪಿಟಿಐ
Published 1 ಜುಲೈ 2020, 8:15 IST
Last Updated 1 ಜುಲೈ 2020, 8:15 IST
ಹಿರಿಯ ಕ್ರಿಕೆಟಿಗ ಅರವಿಂದ‌ ಡಿಸಿಲ್ವಾ –ಎಎಫ್‌ಪಿ ಚಿತ್ರ
ಹಿರಿಯ ಕ್ರಿಕೆಟಿಗ ಅರವಿಂದ‌ ಡಿಸಿಲ್ವಾ –ಎಎಫ್‌ಪಿ ಚಿತ್ರ   

ಕೊಲಂಬೊ: 2011ರ ವಿಶ್ವಕಪ್‌ ಕ್ರಿಕೆಟ್‌ ಫೈನಲ್‌ ಪಂದ್ಯದಲ್ಲಿ ಫಿಕ್ಸಿಂಗ್‌ ನಡೆದಿದೆ ಎಂಬ ಆರೋಪದ ಮೇಲೆ ಹಿರಿಯ ಕ್ರಿಕೆಟಿಗ ಅರವಿಂದ‌ ಡಿಸಿಲ್ವಾ ಅವರ ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಫೈನಲ್‌ ಪಂದ್ಯವನ್ನು ತಮ್ಮ ತಂಡ ಭಾರತಕ್ಕೆ ‘ಮಾರಾಟ’ ಮಾಡಿತ್ತು ಎಂದು ಶ್ರೀಲಂಕಾದ ಮಾಜಿ ಕ್ರೀಡಾ ಸಚಿವ ಮಹಿಂದಾನಂದ ಅಳುತಗಾಮಗೆ ಆರೋಪಿಸಿದ್ದರು.

ಅಳುತಗಾಮಗೆ ಅವರ ಹೇಳಿಕೆಯನ್ನು ಆಗಿನ ಲಂಕಾ ತಂಡದ ನಾಯಕರಾಗಿದ್ದ ಕುಮಾರ ಸಂಗಕ್ಕಾರ ಹಾಗೂ ಮಹೇಲಾ ಜಯವರ್ಧನೆ ಅಲ್ಲಗಳೆದಿದ್ದರು. ‘ಮಾಜಿ ಸಚಿವರು ತಮ್ಮ ಬಳಿ ಸಾಕ್ಷ್ಯಾಧಾರಗಳಿದ್ದರೆ ನೀಡಬೇಕು’ ಎಂದೂ ಹೇಳಿದ್ದರು.

2011ರಲ್ಲಿ ಲಂಕಾ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದ ಡಿಸಿಲ್ವಾ ಅವರನ್ನು ಪೊಲೀಸರು ಆರು ತಾಸುಗಳಿಗಿಂತ ಹೆಚ್ಚು ಕಾಲ ವಿಚಾರಣೆ ನಡೆಸಿ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

ADVERTISEMENT

ಜೂನ್‌ 18ರಂದು ಆರೋಪ ಮಾಡಿದ್ದ ಅಳುತಗಾಮಗೆ, ಬಳಿಕ ಪಂದ್ಯ ಫಿಕ್ಸ್‌ ಆಗಿದ್ದರ ಕುರಿತು ನನಗೆ ಕೇವಲ ಸಂಶಯವಿದೆ ಎಂದಿದ್ದರು.ಹೋದ ವಾರ ವಿಶೇಷ ಪೊಲೀಸ್‌ ತನಿಖಾ ತಂಡ ಅಳುತಗಾಮಗೆ ಹೇಳಿಕೆಯನ್ನು ದಾಖಲಿಸಿಕೊಂಡಿತ್ತು.

1996ರ ವಿಶ್ವಕಪ್‌ನಲ್ಲಿ ಶ್ರೀಲಂಕಾ ಚಾಂಪಿಯನ್‌ ಆದಾಗ ಡಿಸಿಲ್ವಾ ಅವರು ಫೈನಲ್‌ ಪಂದ್ಯದ ಪಂದ್ಯಶ್ರೇಷ್ಠರಾಗಿದ್ದರು.

2011ರ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದ ಎಡಗೈ ಬ್ಯಾಟ್ಸ್‌ಮನ್‌ ಉಪುಲ್‌ ತರಂಗ ಅವರನ್ನೂ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಅಳುತಗಾಮಗೆ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಡಿಸಿಲ್ವಾ, ಬಿಸಿಸಿಐ ಈ ಕುರಿತು ಸ್ವತಂತ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದರು. ಕೋವಿಡ್‌ ಪಿಡುಗಿನ ಮಧ್ಯೆಯೂ ತಾನು ಭಾರತಕ್ಕೆ ತೆರಳಿ ವಿಚಾರಣೆ ಎದುರಿಸುವುದಾಗಿ ಅವರು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.