ಸಿಲ್ಹೆಟ್: ಧನಂಜಯ ಡಿಸಿಲ್ವ ಮತ್ತು ಕಮಿಂದು ಮೆಂಡಿಸ್ ಅವರು ಟೆಸ್ಟ್ ಪಂದ್ಯವೊಂದರ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ಮೂರನೇ ಜೋಡಿ ಎನಿಸಿದರು. ಇವರಿಬ್ಬರ ಶತಕಗಳ ನೆರವಿನಿಂದ ಶ್ರೀಲಂಕಾ ಮೊದಲ ಟೆಸ್ಟ್ ಪಂದ್ಯದಲ್ಲಿ ಈಗ ಗೆಲುವಿನ ಹಾದಿಯಲ್ಲಿದೆ.
ಗೆಲ್ಲಲು 511 ರನ್‌ಗಳ ಭಾರಿ ಗುರಿಯನ್ನು ಎದುರಿಸಿರುವ ಆತಿಥೇಯರು ಭಾನುವಾರ ಮೂರನೇ ದಿನದಾಟ ಮುಗಿದಾಗ ಎರಡನೇ ಇನಿಂಗ್ಸ್‌ನಲ್ಲಿ 47 ರನ್ ಗಳಿಸುವಷ್ಟರಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದ್ದಾರೆ. ವೇಗದ ಬೌಲರ್ ವಿಶ್ವ ಫೆರ್ನಾಂಡೊ 13ಕ್ಕೆ 3 ವಿಕೆಟ್ ಪಡೆದು ಕುಸಿತಕ್ಕೆ ಕಾರಣರಾದರು.
ಮೊದಲ ಇನಿಂಗ್ಸ್‌ನಲ್ಲಿ 102 ರನ್ ಹೊಡೆದಿದ್ದ ಮೆಂಡಿಸ್ 164 ರನ್ (4x16, 6x6) ಗಳಿಸಿದರು. ಧನಂಜಯ ಮೊದಲ ಸರದಿಯಲ್ಲಿ 102 ರನ್ ಗಳಿಸಿದ್ದು, ಎರಡನೇ ಇನಿಂಗ್ಸ್‌ನಲ್ಲಿ 108 ರನ್ (4x9, 6x2) ಬಾರಿಸಿ ರನ್ ಸುಗ್ಗಿಯಲ್ಲಿ ಭಾಗಿಯಾದರು.
ಆಸ್ಟ್ರೇಲಿಯಾದ ಚಾಪೆಲ್ ಸೋದರರಾದ ಗ್ರೆಗ್ ಮತ್ತು ಇಯಾನ್ ಅವರು 1974 ರ ಮಾರ್ಚ್‌ನಲ್ಲಿ ವೆಲಿಂಗ್ಟನ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ತಲಾ ಎರಡು ಶತಕಗಳನ್ನು ಬಾರಿಸಿದರೆ, ಪಾಕಿಸ್ತಾನದ ಮಿಸ್ಬಾ–ಉಲ್–ಹಕ್ ಮತ್ತು ಅಜರ್ ಅಲಿ ಅವರು 2014ರಲ್ಲಿ ಅಬುಧಾಬಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಥದ್ದೇ ಸಾಧನೆ ದಾಖಲಿಸಿದ್ದರು.
ಶ್ರೀಲಂಕಾ ತಂಡ (ಶನಿವಾರ: 5 ವಿಕೆಟ್‌ಗೆ 119) ಒಂದು ಹಂತದಲ್ಲಿ 6 ವಿಕೆಟ್‌ಗೆ 126 ರನ್ ಗಳಿಸಿ ಕುಂಟುತ್ತಿದ್ದ ಸಂದರ್ಭದಲ್ಲಿ ಸಿಲ್ವ ಮತ್ತು ಮೆಂಡಿಸ್ ಏಳನೇ ವಿಕೆಟ್‌ಗೆ 173 ರನ್ ಸೇರಿಸಿದ್ದರಿಂದ 418 ರನ್‌ಗಳ ಭಾರಿ ಮೊತ್ತ ದಾಖಲಿಸಲು ಸಾಧ್ಯವಾಯಿತು.
ಶ್ರೀಲಂಕಾದ 280 ರನ್‌ಗಳ ಮೊದಲ ಇನಿಂಗ್ಸ್‌ನಲ್ಲಿ ಇವರಿಬ್ಬರು ಏಳನೇ ವಿಕೆಟ್‌ಗೆ 202 ರನ್ ಸೇರಿಸಿದ್ದರು.
ಸ್ಕೋರುಗಳು: ಮೊದಲ ಇನಿಂಗ್ಸ್: ಶ್ರೀಲಂಕಾ: 280; ಬಾಂಗ್ಲಾದೇಶ: 188; ಎರಡನೇ ಇನಿಂಗ್ಸ್: ಶ್ರೀಲಂಕಾ: 110.4 ಓವರುಗಳಲ್ಲಿ 418 (ಧನಂಜಯ ಡಿಸಿಲ್ವ 108, ಕಮಿಂದು ಮೆಂಡಿಸ್ 164, ಪ್ರಭಾತ್ ಜಯಸೂರ್ಯ 25; ತೈಜುಲ್ ಇಸ್ಲಾಂ 75ಕ್ಕೆ2, ಮೆಹಿದಿ ಹಸನ್ ಮಿರಾಝ್ 75ಕ್ಕೆ4); ಬಾಂಗ್ಲಾದೇಶ: 13 ಓವರುಗಳಲ್ಲಿ 5 ವಿಕೆಟ್‌ಗೆ 47 (ವಿಶ್ವ ಫೆರ್ನಾಂಡೊ 13ಕ್ಕೆ3).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.