ADVERTISEMENT

ಇನಿಂಗ್ಸ್ ಹಾಗೂ 154 ರನ್ ಜಯ; ಕಿವೀಸ್ ವಿರುದ್ಧ ಲಂಕಾ ಕ್ಲೀನ್ ಸ್ವೀಪ್ ಸಾಧನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಸೆಪ್ಟೆಂಬರ್ 2024, 10:13 IST
Last Updated 29 ಸೆಪ್ಟೆಂಬರ್ 2024, 10:13 IST
<div class="paragraphs"><p>ನಿಶಾನ್ ಪೀರಿಸ್‌</p></div>

ನಿಶಾನ್ ಪೀರಿಸ್‌

   

(ಚಿತ್ರ ಕೃಪೆ: X/@OfficialSLC)

ಗಾಲೆ: ಪದಾರ್ಪಣೆ ಪಂದ್ಯದಲ್ಲಿ ಮಿಂಚಿದ ಆಫ್‌ ಸ್ಪಿನ್ನರ್‌ ನಿಶಾನ್ ಪೀರಿಸ್‌ ಆರು ವಿಕೆಟ್‌ ಪಡೆದು, ಎರಡನೆ ಟೆಸ್ಟ್‌ ಪಂದ್ಯದಲ್ಲಿ ಶ್ರೀಲಂಕಾ ತಂಡ ಇನಿಂಗ್ಸ್‌ ಮತ್ತು 154 ರನ್‌ಗಳಿಂದ ನ್ಯೂಜಿಲೆಂಡ್‌ ತಂಡವನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಶ್ರೀಲಂಕಾ ಸರಣಿಯನ್ನು 2–0ಯಿಂದ ಗೆದ್ದುಕೊಂಡಿತು.

ADVERTISEMENT

ಇದು ಕಿವೀಸ್ ವಿರುದ್ಧ ಶ್ರೀಲಂಕಾ ತಂಡಕ್ಕೆ 15 ವರ್ಷಗಳಲ್ಲಿ ಮೊದಲ ಜಯ. ಪಂದ್ಯದ ನಾಲ್ಕನೇ ದಿನವಾದ ಭಾನುವಾರ ನ್ಯೂಜಿಲೆಂಡ್‌ ತಂಡ ಎರಡನೇ ಇನಿಂಗ್ಸ್‌ನಲ್ಲಿ ಪ್ರತಿರೋಧ ತೋರಿ 360 ರನ್‌ಗಳಿಗೆ ಆಲೌಟ್‌ ಆಯಿತು.  ಶ್ರೀಲಂಕಾದ 5 ವಿಕೆಟ್‌ಗೆ 602 ರನ್‌ಗಳಿಗೆ (ಡಿಕ್ಲೇರ್ಡ್‌) ಉತ್ತರವಾಗಿ ನ್ಯೂಜಿಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 88 ರನ್‌ಗಳಿಗೆ ಉರುಳಿತ್ತು.

27 ವರ್ಷ ವಯಸ್ಸಿನ ಪೀರಿಸ್ ಮತ್ತು ಪ್ರಭಾತ್ ಜಯಸೂರ್ಯ ಈ ಪಂದ್ಯದಲ್ಲಿ ತಮ್ಮೊಳಗೆ 18 ವಿಕೆಟ್‌ಗಳನ್ನು ಹಂಚಿಕೊಂಡರು. ಜಯಸೂರ್ಯ ಮೊದಲ ಸರದಿಯಲ್ಲಿ 42 ರನ್ನಿಗೆ 6 ವಿಕೆಟ್ ಪಡೆದಿದ್ದರು. ಮೊದಲ ಇನಿಂಗ್ಸ್‌ನಲ್ಲಿ 3 ವಿಕೆಟ್‌ ಪಡೆದಿದ್ದ ಪೀರಿಸ್‌ ಎರಡನೇ ಇನಿಂಗ್ಸ್‌ನಲ್ಲಿ 170 ರನ್ನಿಗೆ 6 ವಿಕೆಟ್‌ ಗಳಿಸಿದರು.

ಶನಿವಾರ 5 ವಿಕೆಟ್‌ಗೆ 199 ರನ್ ಗಳಿಸಿದ್ದ ನ್ಯೂಜಿಲೆಂಡ್ ಪ್ರತಿರೋಧ ತೋರಿತು. ಬ್ಲಂಡೆಲ್ (60) ಮತ್ತು ಗ್ಲೆನ್ ಫಿಲಿಪ್ಸ್‌ (78) ಆರನೇ ವಿಕೆಟ್‌ಗೆ 95 ರನ್ ಸೇರಿಸಿದರು. ಒಂಬತ್ತನೇ ಕ್ರಮಾಂಕದಲ್ಲಿ ಆಡಿದ ಮಿಷೆಲ್ ಸ್ಯಾಂಟನರ್ 67 ರನ್ ಬಾರಿಸಿದರು. ಏಜಾಜ್ ಪಟೇಲ್ ಜೊತೆ ಅವರು 9ನೇ ವಿಕೆಟ್‌ಗೆ 53 ರನ್ ಸೇರಿಸಿದ್ದರು. ಪೀರಿಸ್‌ ಬೌಲಿಂಗ್‌ನಲ್ಲಿ ವಿಕೆಟ್‌ ಕೀಪರ್ ಕುಸಲ್ ಮೆಂಡಿಸ್ ಅವರಿಂದ ಸ್ಟಂಪ್ಡ್‌ ಆದ ಸ್ಯಾಂಟನರ್ ಕೊನೆಯವರಾಗಿ ನಿರ್ಗಮಿಸಿದರು.

ಗಾಲೆಯಲ್ಲಿ ಆಡಿದ ಆರೂ ಟೆಸ್ಟ್‌ಗಳಲ್ಲಿ ನ್ಯೂಜಿಲೆಂಡ್ ಸೋಲನುಭವಿಸಿದಂತಾಗಿದೆ. ಎರಡನೇ ಇನಿಂಗ್ಸ್‌ನಲ್ಲಿ ಗಳಿಸಿದ 360 ಈ ಕ್ರೀಡಾಂಗಣದಲ್ಲಿ ಅದರ ಅತ್ಯಧಿಕ ಮೊತ್ತವೆನಿಸಿತು.

ಸ್ಕೋರುಗಳು:

ಮೊದಲ ಇನಿಂಗ್ಸ್‌: ಶ್ರೀಲಂಕಾ: 5 ವಿಕೆಟ್‌ಗೆ 602 ಡಿಕ್ಲೇರ್ಡ್‌; ನ್ಯೂಜಿಲೆಂಡ್‌: 88, ಎರಡನೇ ಇನಿಂಗ್ಸ್: 81.4 ಓವರುಗಳಲ್ಲಿ 360 (ಟಾಮ್ ಬ್ಲಂಡೆಲ್ 60, ಗ್ಲೆನ್ ಫಿಲಿಪ್ಸ್‌ 78, ಮಿಷೆಲ್ ಸ್ಯಾಂಟ್ನರ್‌ 67, ಏಜಾಜ್ ಪಟೇಲ್ 22; ನಿಶಾನ್ ಪೀರಿಸ್‌ 170ಕ್ಕೆ6, ಪ್ರಭಾತ್ ಜಯಸೂರ್ಯ 139ಕ್ಕೆ3).

ಪಂದ್ಯದ ಆಟಗಾರ: ಕಮಿಂದು ಮೆಂಡಿಸ್ (182*),

ಸರಣಿಯ ಆಟಗಾರ: ಪ್ರಭಾತ್ ಜಯಸೂರ್ಯ (18 ವಿಕೆಟ್‌)

ಮೊದಲ ಇನಿಂಗ್ಸ್‌ನಲ್ಲಿ ಅಜೇಯ 182 ರನ್ ಗಳಿಸಿದ ಲಂಕಾದ ಕಮಿಂದು ಮೆಂಡಿಸ್ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ದಿನೇಶ್‌ ಚಾಂದಿಮಾಲ್‌ (116) ಹಾಗೂ ಕುಸಾಲ್ ಮೆಂಡಿಸ್ (106*) ಸಹ ಶತಕಗಳ ಸಾಧನೆ ಮಾಡಿದ್ದರು.

ಈ ಗೆಲುವಿನೊಂದಿಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಶ್ರೀಲಂಕಾ ತನ್ನ ಸ್ಥಾನವನ್ನು ಮತ್ತಷ್ಟು ಉತ್ತಮಪಡಿಸಿಕೊಂಡಿದೆ.

ಮೂರನೇ ಸ್ಥಾನವನ್ನು ಲಂಕಾ (55.55%) ಕಾಯ್ದುಕೊಂಡಿದೆ. ಮತ್ತೊಂದೆಡೆ ನ್ಯೂಜಿಲೆಂಡ್ ಏಳನೇ (37.50%) ಸ್ಥಾನಕ್ಕೆ ಕುಸಿದಿದೆ.

ಡಬ್ಲ್ಯುಟಿಸಿ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತ (71.67%) ಹಾಗೂ ಆಸ್ಟ್ರೇಲಿಯಾ (62.50%) ಅಗ್ರ ಎರಡು ಸ್ಥಾನಗಳನ್ನು ಹಂಚಿಕೊಂಡಿದೆ. ಮೊದಲೆರಡು ಸ್ಥಾನಗಳನ್ನು ಪಡೆದ ತಂಡಗಳು ಮುಂದಿನ ವರ್ಷ ನಡೆಯಲಿರುವ ಫೈನಲ್‌ಗೆ ಅರ್ಹತೆ ಪಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.